ಮಂಗಳೂರು/ಉಡುಪಿ: ಇಲ್ಲಿನ ಶ್ರೀ ಕೃಷ್ಣ ಮಠಕ್ಕೆ ಕೆಲವೇ ಕ್ಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ ಕೊಡ್ತಿದ್ದಾರೆ. ಮಂಗಳೂರು ಏರ್‌ಪೋರ್ಟ್‌ನಿಂದ (Mangaluru Airport) ಉಡುಪಿಗೆ ಸೇನಾ ಹೇಲಿಕಾಫ್ಟರ್ ಮೂಲಕ ಆಗಮಿಸಿದ ಪ್ರಧಾನಿಗಳು ಉಡುಪಿಯಲ್ಲಿ ರೋಡ್ ಶೋ ಶುರು ಮಾಡಿದ್ದಾರೆ.
ಹೌದು. 11:05ರ ಸುಮಾರಿಗೆ ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನ ರಾಜ್ಯ ಸರ್ಕಾರದ ಪರವಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ರಾಜೇಶ್ ನಾಯಕ್, ಭಾಗೀರಥಿ ಮುರುಳ್ಯ, ಗ್ರೇಟರ್ ಬೆಂಗಳೂರು ಆಯುಕ್ತ ಮಹೇಶ್ವರ ರಾವ್, ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ಮತ್ತಿತರರು ಉಪಸ್ಥಿತರಿದ್ದರು.
ರೋಡ್ ಶೋ
ಉಡುಪಿ ನಗರಕ್ಕೆ (Udupi) ಆಗಮಿಸಿದ ಪ್ರಧಾನಿ ರೋಡ್ ಶೋ (Modi Road Show) ಶುರು ಮಾಡಿದ್ದಾರೆ. ಬೆಳಗ್ಗಿನಿಂದಲೂ ಮೋದಿ ಅವರನ್ನ ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದ ಜನ ಪುಷ್ಪವೃಷ್ಟಿ ಮಾಡಿ ಸಂತಸ ಪಟ್ಟಿದ್ದಾರೆ. ಹಾಗೆಯೇ ಯಾರೊಬ್ಬರಿಗೂ ನಿರಾಸೆ ಮಾಡದ ಪ್ರಧಾನಿ ಮೋದಿ ಎಲ್ಲರತ್ತ ಕೈಬೀಸಿ ನಗೆ ಬೀರಿದ್ದಾರೆ.
ಉಡುಪಿಯಲ್ಲಿ ಏನೇನು ಕಾರ್ಯಕ್ರಮ?
* ಉಡುಪಿಯ ರಥಬೀದಿಯಲ್ಲಿ ಮೋದಿ 2 ಕಿ.ಮೀ ರೋಡ್ ಶೋ
* ಚಿನ್ನದ ಕವಚ ಅಳವಡಿಸಿರುವ ಕನಕನ ಕಿಂಡಿ ಲೋಕಾರ್ಪಣೆ
* ಸ್ವರ್ಣ ಖಚಿತ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣದೇವರ ದರ್ಶನ
* ಅಷ್ಟಮಠಾಧೀಶರೊಂದಿಗೆ ಪ್ರಧಾನಿ ಮೋದಿ ಮಾತುಕತೆ
* ಮಠದಲ್ಲಿ ವೈದಿಕರಿಂದ ಉಪನಿಷತ್ತು, ವೇದ, ಗೀತೆ ಪಠಣ
* ಗೀತಾ ಮಂದಿರಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ
* ಗೀತಾ ಮಂದಿರದಲ್ಲಿ ನೂತನ ಅನಂತಪದ್ಮನಾಭ ದೇವರ ಪ್ರತಿಮೆ ಅನಾವರಣ
* ಧ್ಯಾನ ಮಂದಿರದಲ್ಲಿ ಧ್ಯಾನ ಮಾಡಲಿರುವ ಪ್ರಧಾನಿ ಮೋದಿ
* ಗೀತಾ ಮಂದಿರದಲ್ಲೇ ಲಘು ಉಪಹಾರ ಸ್ವೀಕಾರ
* ಮೋದಿಗಾಗಿ ತುಳುನಾಡಿನ ತಿಂಡಿಗಳ ಸಿದ್ಧತೆ
* ಲಕ್ಷ ಕಂಠ ಭಗವದ್ಗೀತಾ ಸಮಾವೇಶದಲ್ಲಿ ಪ್ರಧಾನಿ ಭಾಗಿ
* ನೆಲದ ಮೇಲೆ ಅಸೀನರಾಗಲಿರುವ ಪ್ರಧಾನಿ ಮೋದಿ
* ಭಗವದ್ಗೀತೆಯ 10 ಶ್ಲೋಕಗಳ ಪಠಣ ಮಾಡಲಿರುವ ಮೋದಿ
* ಬಳಿಕ ಪ್ರಧಾನಿ ಮೋದಿ ಭಾಷಣ




