ರಾಂಚಿ: ಜಾರ್ಖಂಡ್‌ನಲ್ಲಿ (Jharkhand) ಮಾಜಿ ಮಾವೋವಾದಿ (Ex-Maoists) ಮೀನು ಸಾಕಣೆದಾರನಾಗಿ ಬದಲಾದ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಶ್ಲಾಘಿಸಿದ್ದಾರೆ. ಮನ್ ಕಿ ಬಾತ್‌ನ 124 ನೇ ಆವೃತ್ತಿಯಲ್ಲಿ ಈ ಬಗ್ಗೆ ಅವರು ಮಾತಾಡಿದ್ದಾರೆ.
ಗುಮ್ಲಾದ ಬಾಸಿಯಾ ಬ್ಲಾಕ್ ಒಂದು ಕಾಲದಲ್ಲಿ ಮಾವೋವಾದಿ ಹಿಂಸಾಚಾರಕ್ಕೆ ಹೆಸರುವಾಸಿಯಾಗಿತ್ತು. ಅಲ್ಲಿನ ಹಳ್ಳಿಗಳು ನಿರ್ಜನವಾಗಿದ್ದವು ಮತ್ತು ಜನರು ಭಯದಲ್ಲಿ ವಾಸಿಸುತ್ತಿದ್ದರು. ಉದ್ಯೋಗಾವಕಾಶಗಳ ಕೊರತೆಯಿಂದ ಯುವಕರು ವಲಸೆ ಹೋಗುತ್ತಿದ್ದರು. ಅಲ್ಲಿ ಹಿಂಸಾಚಾರವನ್ನು ಕೈಬಿಟ್ಟು ಮಾಜಿ ಮಾವೋವಾದಿಗಳು ಮೀನುಗಾರರಾಗಿ ಬದಲಾಗಿದ್ದಾರೆ. ಇದು ಅತ್ಯಂತ ಕಠಿಣ ಸಂದರ್ಭಗಳಲ್ಲಿಯೂ ಅಭಿವೃದ್ಧಿಯ ದೀಪವನ್ನು ಬೆಳಗಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: Mann ki Baat: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾಗೆ ಮೋದಿ ಪ್ರಶಂಸೆ
ಜೂ.27 ರಂದು ಮಾಧ್ಯಮವೊಂದರಲ್ಲಿ ʻಮೀನು ಸಾಕಣೆ ಜಾರ್ಖಂಡ್‌ನಲ್ಲಿ ಮಾಜಿ ಮಾವೋವಾದಿಗಳನ್ನು ಹೇಗೆ ಪರಿವರ್ತಿಸುತ್ತಿದೆʼಎಂಬ ಶಿರ್ಷಿಕೆಯಲ್ಲಿ ಬರಹ ಪ್ರಕಟವಾಗಿತ್ತು. ಇದನ್ನು ಉಲ್ಲೇಖಿಸಿ, ಹಿಂಸಾಚಾರದ ಮಾರ್ಗವನ್ನು ತ್ಯಜಿಸಿದ ಮಾಜಿ ಮಾವೋವಾದಿ ಓಂ ಪ್ರಕಾಶ್ ಸಾಹು ಅವರ ಸ್ಪೂರ್ತಿದಾಯಕ ಕಥೆಯನ್ನು ವಿವರಿಸಿದ್ದಾರೆ. ಈ ವೇಳೆ, ಕೆಲವೊಮ್ಮೆ ಕತ್ತಲೆ ಹೆಚ್ಚು ಇರುವ ಸ್ಥಳದಿಂದ ಅತ್ಯಂತ ಪ್ರಕಾಶಮಾನವಾದ ಬೆಳಕು ಹೊರಹೊಮ್ಮುತ್ತದೆ ಎಂದು, ಈ ಬದಲಾವಣೆಯನ್ನು ಕೊಂಡಾಡಿದ್ದಾರೆ.
ಸಾಹು ಹಿಂಸಾಚಾರವನ್ನು ತ್ಯಜಿಸಿ ಮೀನು ಸಾಕಣೆಯನ್ನು ಪ್ರಾರಂಭಿಸಲು ನಿರ್ಧರಿಸಿದಾಗ ಬದಲಾವಣೆ ಪ್ರಾರಂಭವಾಯಿತು. ಮೊದಲು ಬಂದೂಕುಗಳನ್ನು ಹಿಡಿದಿದ್ದವರು ಈಗ ಮೀನುಗಾರಿಕೆ ಬಲೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY)ಯ ಪ್ರಾರಂಭವು ಅವರಿಗೆ ಹೊಸ ಶಕ್ತಿ, ಸರ್ಕಾರಿ ತರಬೇತಿ ಮತ್ತು ಕೊಳ ನಿರ್ಮಾಣಕ್ಕೆ ಸಹಾಯವನ್ನು ಒದಗಿಸಿದೆ. ಈ ಯೋಜನೆ ಗುಮ್ಲಾದಲ್ಲಿ ಮೀನುಗಾರಿಕೆ ಕ್ರಾಂತಿಗೆ ಕಾರಣವಾಗಿದೆ. ಈಗ ಬಾಸಿಯಾ ಬ್ಲಾಕ್‌ನ 150 ಕ್ಕೂ ಹೆಚ್ಚು ಕುಟುಂಬಗಳು ಮೀನು ಸಾಕಣೆಯಲ್ಲಿ ತೊಡಗಿವೆ. ಅನೇಕ ಮಾಜಿ ಮಾವೋವಾದಿ ಸಂಘಟನೆಯ ಸದಸ್ಯರು ಹಳ್ಳಿಗಳಲ್ಲಿ ಗೌರವಯುತವಾಗಿ ವಾಸಿಸುತ್ತಿದ್ದಾರೆ. ಇತರರಿಗೆ ಉದ್ಯೋಗವನ್ನು ಒದಗಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಾಹು ಅವರ ಹೊರತಾಗಿ, ಮಾಜಿ ಮಾವೋವಾದಿ ಜ್ಯೋತಿ ಲಕ್ರಾ ಮತ್ತು ಈಶ್ವರ್ ಗೋಪ್ ಅವರ ಬಗ್ಗೆಯೂ ಉಲ್ಲೇಖಿಸಿದ್ದಾರೆ. 41 ವರ್ಷದ ಜ್ಯೋತಿ ಲಕ್ರಾ, 2002 ರಲ್ಲಿ ಹಿಂಸಾಚಾರ ಕೈಬಿಟ್ಟು ಪಿಎಂಎಂಎಸ್‌ವೈ ಯೋಜನೆಯ ಲಾಭ ಪಡೆದು ಮೀನು ಮೇವಿನ ಗಿರಣಿಯನ್ನು ನಡೆಸುತ್ತಿದ್ದಾರೆ. 42 ವರ್ಷದ ಈಶ್ವರ್ ಗೋಪ್, ಮಾಜಿ ಮಾವೋವಾದಿಯಾಗಿದ್ದು, ನಂತರ ಮಾವೋವಾದಿ ವಿರೋಧಿ ಶಾಂತಿ ಸೇನಾ ಗುಂಪನ್ನು ಸೇರಿಕೊಂಡರು. ಅಲ್ಲದೇ ಮೀನು ಕೃಷಿಯಲ್ಲಿ ತೊಡಗಿ ವಾರ್ಷಿಕವಾಗಿ 2,50,000 ರೂ. ಮೌಲ್ಯದ ಎಂಟು ಕ್ವಿಂಟಾಲ್ ಮೀನುಗಳನ್ನು ಮಾರಾಟಮಾಡುತ್ತಾರೆ. ಇದರಲ್ಲಿ 1,20,000 ರೂ. ಲಾಭ ಪಡೆಯುತ್ತಿದ್ದಾರೆ.
ಕೇಂದ್ರ ಗೃಹ ಸಚಿವಾಲಯ ಮೇ 2025 ರಲ್ಲಿ ರಾಂಚಿ ಜಿಲ್ಲೆಯ ಜೊತೆಗೆ ಗುಮ್ಲಾ ಜಿಲ್ಲೆಯನ್ನು ಮಾವೋವಾದಿ ಪೀಡಿತ ಪ್ರದೇಶಗಳ ಪಟ್ಟಿಯಿಂದ ಕೈಬಿಟ್ಟಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ 4,800 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ