Connect with us

Districts

ಕಾಂಗ್ರೆಸ್ ವಿರುದ್ಧ ರಾಷ್ಟ್ರೀಯತೆಯ ಬಣ ಪ್ರಯೋಗಿಸಿದ ಮೋದಿ

Published

on

ಕಲಬುರಗಿ: ಕರ್ನಾಟಕ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ರಾಷ್ಟ್ರೀಯತೆಯ ಬಣ ಪ್ರಯೋಗಿಸಿದ್ದಾರೆ.

ಕಲಬುರಗಿ ನಗರದ ಎನ್‍ವಿ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಸೇನೆ ಹಾಗೂ ಯೋಧರ ಬಗ್ಗೆ ಗೌರವ ಇಲ್ಲದ ಕಾಂಗ್ರೆಸ್ ನಿಂದ ದೇಶಕ್ಕೆ ಗೌರವ ನೀಡುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿ ಜಿಲ್ಲೆ ಶರಣರು ಸಂತರು ನಡೆದಾಡಿದ ಪುಣ್ಯ ಭೂಮಿ. ಅನೇಕ ಮಹಾಪುರಷರು ನಡೆದಾಡಿದ ಈ ನೆಲಕ್ಕೆ ಜನರಿಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು ಎಂದು ಭಾಷಣ ಆರಂಭಿಸಿದ ಅವರು, ಇಂತಹ ಉರಿ ಬಿಸಿಲಲ್ಲೂ ಇಷ್ಟೊಂದು ಜನ ಸಮಾವೇಶದಲ್ಲಿ ಭಾಗವಹಿಸಿರುವುದನ್ನು ಗಮನಿಸಿದರೆ ದೇಶದಲ್ಲಿ ಕಾಂಗ್ರೆಸ್ ಮುಕ್ತ ಮಾಡಲು ಇದು ಸಕಾಲ ಎಂದೇನಿಸುತ್ತಿದೆ. ಇದು ಕಾಂಗ್ರೆಸ್‍ಗೆ ಎಚ್ಚರಿಕೆಯ ಗಂಟೆ. ಹಲವು ಚುನಾವಣೆಗಳು ಈ ಹಿಂದೆ ಬಂದಿದೆ ಹೋಗಿದೆ. ಆದ್ರೆ ಕರ್ನಾಟಕದ ಜನತೆ ಈ ಬಾರಿ ಸರ್ಕಾರ ಬದಲಿಸುವ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯದ ನಾಲ್ಕು ಮೂಲೆಗಳಲ್ಲಿ ಕೇಸರಿ ಬಾವುಟ ಹಾರಿಸಲಿದ್ದೇವೆ. ಕರ್ನಾಟಕವನ್ನು ಲೂಟಿ ಹೊಡೆಯಲು ಬಿಡುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿಯಿಂದ ಜನರಲ್ಲಿ ಹೊಸ ವಿಶ್ವಾಸ ಮೂಡಿದೆ. ಈ ಚುನಾವಣೆ ಕರ್ನಾಟಕದ ಯುವಜನತೆಯ ಭವಿಷ್ಯ ನಿರ್ಧರಿಸಲಿದೆ. ಇಲ್ಲಿಯ ಯುವಕರಿಗೆ ತಮ್ಮ ಹಕ್ಕು ದೊರೆಯಬೇಕಾಗಿದೆ. ಕರ್ನಾಟಕದ ಉಜ್ವಲ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ನೀಡಿ ಮನವಿ ಮಾಡಿದರು.

ಕಲಬುರಗಿ ಭಾರತ ಐಕ್ಯತೆಯ ಸಂಕೇತ: ಕಲಬುರಗಿಯೊಂದಿಗೆ ದೇಶದ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರಿಗೆ ವಿಶೇಷವಾದ ನಂಟಿದೆ. ಸ್ವಾತಂತ್ರ್ಯ ನಂತರ ಹೈದರಾಬಾದ್ ನಿಜಾಮರು ಭಾರತದೊಂದಿಗೆ ವಿಲೀನಗೊಳ್ಳಲು ನಿರಾಕರಿಸಿದ್ದರು. ಈ ವೇಳೆ ಪಟೇಲರು ನಿಜಾಮ ಸೆದೆಬಡಿದು ಕಲಬುರಗಿಯನ್ನು ಭಾರತದೊಳಗೆ ವಿಲೀನಗೊಳಿಸಿದರು. ಕಲಬುರುಗಿ ವಿಲೀನ ನಂತರವೂ ನಿಜಾಮರು ಇಲ್ಲಿ ಹಿಂಸಾಚಾರ ನಡೆಸಿದ್ದರು. ಈ ವೇಳೆ ಹಲವು ಯೋಧರು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಇದನ್ನು ನೆನೆಯಲು ಕಾಂಗ್ರೆಸ್ ಸರ್ಕಾರಕ್ಕೆ ಅವಕಾಶವಿತ್ತು, ಆದ್ರೆ ಇದನ್ನು ಕಾಂಗ್ರೆಸ್ ಮಾಡಿಲ್ಲ. ದೇಶದ ಯೋಧರಿಗೆ ಕಾಂಗ್ರೆಸ್ ಅಗೌರವ ಸೂಚಿಸಿದೆ. ಸರ್ಜಿಕಲ್ ಸ್ಟ್ರೈಕ್ ವೇಳೆ ಸಾಕ್ಷ್ಯ ಕೇಳಿದರು. ಯೋಧರು ವಿರೋಧಿಗಳ ಮೇಲೆ ದಾಳಿ ನಡೆಸುವ ವೇಳೆ ಕ್ಯಾಮೆರಾ ತೆಗೆದುಕೊಂಡು ಹೋಗಬೇಕಾ ಅಥವಾ ಬಂದುಕು ತೆಗೆದುಕೊಂಡು ಹೋಗ ಬೇಕಾ ಎಂದು ಮೋದಿ ಪ್ರಶ್ನಿಸಿದರು.

ಪಾಟೇಲ್ ಅವರ ಹೆಸರು ಕೇಳಿದರೆ ಕಾಂಗ್ರೆಸ್ ಒಂದು ಪರಿವಾರಕ್ಕೆ ನಿದ್ದೆ ಬರುವುದಿಲ್ಲ. ಕಾಂಗ್ರೆಸ್ ಗೆ ಕರ್ನಾಟಕದ ಶ್ರೇಷ್ಠ ಸೇನಾ ಅಧಿಕಾರಿಗಳಾದ ಜನರಲ್ ತಿಮ್ಮಯ್ಯ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಗ್ಗೆಯೂ ಗೌರವವಿಲ್ಲ. ವಂದೇ ಮಾತರಂ ಗೀತೆಗೆ ಅಪಮಾನ ಮಾಡಿದ ಕಾಂಗ್ರೆಸ್ ಗೆ ದೇಶ ಪ್ರೇಮದ ಅರ್ಥ ಎನ್ ಗೊತ್ತು ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

ಖರ್ಗೆ ಸಿಎಂ ಸ್ಥಾನ : ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸಂಪತ್ತು ಎಷ್ಟಿದೆ ನಿಮಗೊತ್ತಾ ಎಂದು ಪ್ರಶ್ನಿಸಿರುವ ಮೂಲಕ ಪ್ರಧಾನಿ ಮೋದಿ ಖರ್ಗೆಗೆ ಟಾಂಗ್ ನೀಡಿದರು. ಈ ಹಿಂದೆ ಚುನಾವಣೆಯಲ್ಲಿ ದಲಿತರ ಕಲ್ಯಾಣ ಮಾಡುತ್ತೇವೆ ಎಂದು ಹೇಳಿ ಖರ್ಗೆ ಅವರನ್ನು ಸಿಎಂ ಮಾಡುವುದಾಗಿ ಕಾಂಗ್ರೆಸ್ ಹೇಳಿತ್ತು. ಆದರೆ ಅಧಿಕಾರ ಬಂದ ಮೇಲೆ ಗುಪ್ತ ಮತದಾನದ ಹೆಸರಿನಲ್ಲಿ ಖರ್ಗೆಯವರನ್ನು ಸಿಎಂ ಮಾಡದೇ ಕಾಂಗ್ರೆಸ್ ದಲಿತರಿಗೆ ಮೋಸ ಮಾಡಿದೆ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಕಮಲ ಅರಳುತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅವರ ಕುಟುಂಬ ಅರಳುತ್ತೆ ಎಂದು ಟಾಂಗ್ ನೀಡಿದರು.

Click to comment

Leave a Reply

Your email address will not be published. Required fields are marked *