– 524 ವರ್ಷಗಳಷ್ಟು ಹಳೆಯದಾದ ಜೀರ್ಣೋದ್ಧಾರಗೊಂಡ ತ್ರಿಪುರ ಸುಂದರಿ ದೇವಾಲಯ ಉದ್ಘಾಟಿಸಿದ ಮೋದಿ
ಅಗರ್ತಲಾ: ನವರಾತ್ರಿ ಉತ್ಸವದ ಮೊದಲ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗಡಿರಾಜ್ಯದ ʻಮಾತಾ ತ್ರಿಪುರ ಸುಂದರಿʼ ಅಮ್ಮನವರ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ತ್ರಿಪುರಾದ ಉದಯ್‌ಪುರದಲ್ಲಿರುವ ದೇಗುಲಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಗೋಮತಿ ಜಿಲ್ಲೆಯ ಉದಯಪುರ ಪಟ್ಟಣದಲ್ಲಿ ಜೀರ್ಣೋದ್ಧಾರಗೊಂಡಿರುವ ತ್ರಿಪುರೇಶ್ವರಿ ದೇಗುಲದ (Tripura Sundari Temple) ಉದ್ಘಾಟನೆ ನೆರವೇರಿಸಿದರು.

51 ಶಕ್ತಿಪೀಠಗಳಲ್ಲಿ ಒಂದು 
ದೇಶದಲ್ಲಿರುವ 51 ಶಕ್ತಿಪೀಠಗಳಲ್ಲಿ ತ್ರಿಪುರೇಶ್ವರಿ ದೇಗುಲವೂ ಒಂದು. ಮಹಾರಾಜ ಧನ್ಯ ಮಾಣಿಕ್ಯ 1,501ರಲ್ಲಿ ಈ ದೇಗುಲ ನಿರ್ಮಿಸಿದ್ದರು. ತೀರ್ಥಕ್ಷೇತ್ರ ಪುನರುಜ್ಜಿವನ ಮತ್ತು ಅಧ್ಯಾತ್ಮ ವಿಸ್ತರಣಾ ಅಭಿಯಾನ (PRASAD) ಅಡಿಯಲ್ಲಿ 52 ಕೋಟಿ ರೂ. ವೆಚ್ಚದಲ್ಲಿ ಈ ದೇಗುಲ ಜೀರ್ಣೋದ್ಧಾರಗೊಂಡಿದ್ದು, ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ.
ಸುಮಾರು 45 ನಿಮಿಷಗಳ ಕಾಲ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ತ್ರಿಪುರಾದ ಮುಖ್ಯಮಂತ್ರಿ ಮಾಣಿಕ್ ಸಾಹಾ ಹಾಗೂ ಸಂಪುಟದ ಸಚಿವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದರು.

ದೇಶದ ಶಕ್ತಿಪೀಠಗಳಲ್ಲಿ ಒಂದಾದ ಈ ದೇವಾಲಯದ ಆವರಣದಲ್ಲಿ ಅನೇಕ ಮಾರ್ಪಾಡುಗಳನ್ನು ತರಲಾಗಿದೆ. ಪ್ರವೇಶದ್ವಾರಗಳನ್ನು ನವೀಕರಿಸಲಾಗಿದೆ. ಧ್ಯಾನ ಮಂಡಪ, ಅತಿಥಿ ಗೃಹ, ಕಚೇರಿ ಕೊಠಡಿಗಳನ್ನು ಆಧುನಿಕ ರೂಪದಲ್ಲಿ ನಿರ್ಮಿಸಲಾಗಿದೆ. ಇದರಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ. ವ್ಯಾಪಾರ, ಉದ್ಯೋಗಾವಕಶಗಳು ಸೃಜಿಸಲಿವೆ ಎಂದು ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.
ಇದಕ್ಕೂ ಮುನ್ನ ಅರುಣಾಚಲ ಪ್ರದೇಶದ ಇಟಾನಗರದಲ್ಲಿ 5,100 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು.

ಇಟಾನಗರದಲ್ಲಿ 3,700 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಎರಡು ಪ್ರಮುಖ ಜಲವಿದ್ಯುತ್ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಅರುಣಾಚಲ ಪ್ರದೇಶದ ಸಿಯೋಮ್ ಉಪ-ಜಲಾನಯನ ಪ್ರದೇಶದಲ್ಲಿ ಹಿಯೋ ಜಲವಿದ್ಯುತ್ ಯೋಜನೆ (240 ಮೆಗಾವ್ಯಾಟ್) ಮತ್ತು ಟಾಟೊ-ಐ ಜಲವಿದ್ಯುತ್ ಯೋಜನೆ (186 ಮೆಗಾವ್ಯಾಟ್) ಅಭಿವೃದ್ಧಿಪಡಿಸುವುದಾಗಿ ತಿಳಿಸಿದರು.
 


 
		 
		 
		 
		 
		
 
		 
		 
		 
		