ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಶನಿವಾರ ಹಿರಿಯ ಬಿಜೆಪಿ ನಾಯಕ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಎಲ್.ಕೆ.ಅಡ್ವಾಣಿ (L.K.Advani) ಅವರನ್ನು ನಿವಾಸದಲ್ಲಿ ಭೇಟಿಯಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಧಾನಿ ಹಾರೈಸಿದ್ದಾರೆ.
ಎಲ್.ಕೆ.ಅಡ್ವಾಣಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅತ್ಯುನ್ನತ ದೃಷ್ಟಿ ಮತ್ತು ಬುದ್ಧಿಶಕ್ತಿಯಿಂದ ಆಶೀರ್ವದಿಸಲ್ಪಟ್ಟ ರಾಜಕಾರಣಿ. ಅಡ್ವಾಣಿ ಅವರ ಜೀವನವು ಭಾರತದ ಪ್ರಗತಿಯನ್ನು ಬಲಪಡಿಸಲು ಸಮರ್ಪಿತವಾಗಿದೆ. ಅವರು ಯಾವಾಗಲೂ ನಿಸ್ವಾರ್ಥ ಕರ್ತವ್ಯ ಮತ್ತು ದೃಢ ತತ್ವಗಳ ಮನೋಭಾವವನ್ನು ಸಾಕಾರಗೊಳಿಸಿದ್ದಾರೆ. ಅವರ ಕೊಡುಗೆಗಳು ಭಾರತದ ಪ್ರಜಾಪ್ರಭುತ್ವ ಮತ್ತು ಸಾಂಸ್ಕೃತಿಕ ಭೂದೃಶ್ಯದ ಮೇಲೆ ಅಳಿಸಲಾಗದ ಗುರುತು ಬಿಟ್ಟಿವೆ. ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಸಿಗಲಿ ಎಂದು ಎಕ್ಸ್ ಖಾತೆಯಲ್ಲಿ ಪ್ರಧಾನಿ ಬರೆದುಕೊಂಡಿದ್ದಾರೆ.
Went to Shri LK Advani Ji’s residence and greeted him on the occasion of his birthday. His service to our nation is monumental and greatly motivates us all. pic.twitter.com/02Y1LvZRYR
— Narendra Modi (@narendramodi) November 8, 2025
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಅಡ್ವಾಣಿ ಅವರಿಗೆ ಶುಭಾಶಯ ಕೋರಿದ್ದು, ಲಕ್ಷಾಂತರ ಬಿಜೆಪಿ ಕಾರ್ಯಕರ್ತರಿಗೆ ಸ್ಫೂರ್ತಿ ಎಂದು ಬಣ್ಣಿಸಿದ್ದಾರೆ.
ಬಿಜೆಪಿಯ ಸ್ಥಾಪಕ ಸದಸ್ಯರಾಗಿ ಮತ್ತು ಮಾಜಿ ರಾಷ್ಟ್ರೀಯ ಅಧ್ಯಕ್ಷರಾಗಿ, ‘ಭಾರತ ರತ್ನ’ ಎಲ್.ಕೆ.ಅಡ್ವಾಣಿ ಅವರು ತಮ್ಮ ಇಡೀ ಜೀವನವನ್ನು ರಾಷ್ಟ್ರಕ್ಕೆ ಅತ್ಯಂತ ನಿಸ್ವಾರ್ಥತೆಯಿಂದ ಮುಡಿಪಾಗಿಟ್ಟಿದ್ದಾರೆ. ಪಕ್ಷವನ್ನು ತಳಮಟ್ಟದಲ್ಲಿ ಬಲಪಡಿಸುವುದರಿಂದ ಹಿಡಿದು ಗೃಹ ಸಚಿವರಾಗಿ ದೇಶದ ಆಂತರಿಕ ಭದ್ರತೆಯನ್ನು ಹೆಚ್ಚಿಸುವವರೆಗೆ, ಅವರ ಕೊಡುಗೆಗೆ ಸಾಟಿಯಿಲ್ಲ. ರಾಮ ಜನ್ಮಭೂಮಿ ಚಳವಳಿಯ ಸಮಯದಲ್ಲಿ ಅವರ ನಾಯಕತ್ವವು ಭಾರತದಾದ್ಯಂತ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸಿತು ಎಂದು ಗೃಹ ಸಚಿವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಮಾಜಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಟ್ವೀಟ್ ಮಾಡಿ, ಭಾರತೀಯ ರಾಜಕೀಯದ ಅತ್ಯುನ್ನತ ವ್ಯಕ್ತಿ, ಉಕ್ಕಿನ ಮನುಷ್ಯ ಮತ್ತು ವೈಯಕ್ತಿಕವಾಗಿ ನನಗೆ ತಂದೆ ಸಮಾನರಾದ ಎಲ್.ಕೆ.ಅಡ್ವಾಣಿ ಅವರ ಜನ್ಮದಿನದಂದು, ನಾನು ನವದೆಹಲಿಯಲ್ಲಿರುವ ಅವರ ನಿವಾಸಕ್ಕೆ ಹೋಗಿ ನನ್ನ ಶುಭಾಶಯಗಳನ್ನು ತಿಳಿಸಿದ್ದೇನೆ. ಅಡ್ವಾಣಿ ಅವರ ದೇಶಭಕ್ತಿ, ಶಿಸ್ತು, ಸಮರ್ಪಣೆ ಮತ್ತು ಅಚಲ ಸಂಕಲ್ಪ ಯುವಕರಿಗೆ ಅನುಕರಣೀಯವಾಗಿದೆ. ದೇವರು ಅವರಿಗೆ ಪರಿಪೂರ್ಣ ಆರೋಗ್ಯವನ್ನು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಹಾರೈಸಿದ್ದಾರೆ.

