ನವದೆಹಲಿ: ಅಜಾತ ಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ 94ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 100 ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಿದ್ದಾರೆ.
ನಾಣ್ಯ ಬಿಡುಗಡೆ ಮಾಡಿ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿ ಪ್ರಜಾಪ್ರಭುತ್ವದಲ್ಲಿ ನಂಬಿಕೆಯನ್ನು ಹೊಂದಿದ್ದರು. ಜನ ಸಂಘವನ್ನು ಸ್ಥಾಪಿಸಿದ್ದರು. ಆದರೆ ಪ್ರಜಾಪ್ರಭುತ್ವದ ರಕ್ಷಣೆಯ ಸಂದರ್ಭ ನಿರ್ಮಾಣವಾದಾಗ ವಾಜಪೇಯಿ ಸೇರಿದಂತೆ ಪ್ರಮುಖ ನಾಯಕರು ಜನತಾ ಪಾರ್ಟಿಯನ್ನು ಸೇರಿಕೊಂಡರು. ನಂತರ ಅದನ್ನು ತೊರೆದು ಬಿಜೆಪಿಯನ್ನು ಸ್ಥಾಪಿಸಿಕೊಂಡರು ಎಂದು ಜ್ಞಾಪಿಸಿಕೊಂಡರು.
Advertisement
Advertisement
ವಾಜಪೇಯಿಯವರು ತಮ್ಮ ಪಕ್ಷದ ಸಿದ್ಧಾಂತದ ಮೇಲೆ ಎಂದಿಗೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ಅವರು ಕಟ್ಟಿದ ಬಿಜೆಪಿ ಇಂದು ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದೆ. ಉತ್ತಮ ಭಾಷಣಕಾರರಾಗಿದ್ದ ಅವರು ಮಾತನಾಡುತ್ತಿದ್ದರೆ, ಇಡೀ ದೇಶವೇ ಕೇಳುತಿತ್ತು ಎಂದು ಹೇಳಿದ್ದಾರೆ.
Advertisement
ಅಟಲ್ ಜೀಯವರ ಆದರ್ಶ ತತ್ವಗಳನ್ನು ಪಾಲಿಸುತ್ತೇನೆ. ಇದೇ ಮಂಗಳವಾರ ವಾಜಪೇಯಿಯವರ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸುತ್ತೇನೆಂದು ತಿಳಿಸಿದ್ದಾರೆ.
Advertisement
PM @narendramodi releases commemorative coin in memory of former PM #AtalBihariVajpayee pic.twitter.com/q1l4HJAYtG
— PIB India (@PIB_India) December 24, 2018
ದೀರ್ಘ ಅನಾರೋಗ್ಯಕ್ಕೆ ತುತ್ತಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಆಗಸ್ಟ್ 16 ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. ಅಜಾತಶತ್ರು ಎಂದೇ ಕರೆಯಿಸಿಕೊಂಡಿದ್ದ ಅವರ ನಿಧನಕ್ಕೆ ದೇಶವೇ ಕಂಬನಿ ಮಿಡಿದಿತ್ತು. 1924ರ ಡಿಸೆಂಬರ್ 25 ರಂದು ಜನಿಸಿದ್ದ ಅವರಿಗೆ ಇದೇ ಮಂಗಳವಾರ 94ನೇ ಹುಟ್ಟುಹಬ್ಬದ ನಿಮಿತ್ತ ಕೇಂದ್ರ ಸರ್ಕಾರ ಅವರ ಸ್ಮರಣಾರ್ಥವಾಗಿ ನಾಣ್ಯ ಬಿಡುಗಡೆಗೊಳಿಸಿದೆ.
ಸಮಾರಂಭಕ್ಕೆ ಅಟಲ್ ಜೀಯವರೊಂದಿಗೆ ದೀರ್ಘ ಕಾಲ ಒಡನಾಟ ಹೊಂದಿದ್ದ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಸೇರಿದಂತೆ ಸ್ಪೀಕರ್ ಸುಮಿತ್ರಾ ಮಹಾಜನ್, ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಪ್ರಮುಖ ಗಣ್ಯರು ಆಗಮಿಸಿದ್ದರು.
ನಾಣ್ಯದ ವಿಶೇಷತೆಗಳೇನು?
* ನಾಣ್ಯದ ಒಂದು ಬದಿಯಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಭಾವಚಿತ್ರ ಹಾಗೂ ಹೆಸರನ್ನು ಇಂಗ್ಲೀಷ್ ಹಾಗೂ ದೇವನಗರಿ ಭಾಷೆಯಲ್ಲಿ ಮುದ್ರಿಸಲಾಗಿದೆ.
* ಅಟಲ್ ಜೀಯವರ ಹುಟ್ಟು ಹಾಗೂ ನಿಧನದ ವರ್ಷವನ್ನು ಭಾವಚಿತ್ರದ ಕೆಳಗೆ ಮುದ್ರಿಸಲಾಗಿದೆ.
* ಸಂಪೂರ್ಣ ನಾಣ್ಯವನ್ನು ಶೇ.50 ರಷ್ಟು ಬೆಳ್ಳಿ, ಶೇ.40 ರಷ್ಟು ತಾಮ್ರ, ಶೇ.5ರಷ್ಟು ನಿಕ್ಕಲ್ ಹಾಗೂ ಶೇ.5ರಷ್ಟು ಜಿಂಕ್ ಬಳಸಿ ನಿರ್ಮಿಸಲಾಗಿದೆ.
* ಒಂದು ನಾಣ್ಯದ ಸಂಪೂರ್ಣ ತೂಕ 135 ಗ್ರಾಂಗಳಷ್ಟು ಹೊಂದಿದೆ.
* ನಾಣ್ಯದ ಮತ್ತೊಂದು ಭಾಗದಲ್ಲಿ ಮೂರು ಸಿಂಹಗಳುಳ್ಳ ಅಶೋಕ ಸ್ತಂಭದ ಚಿಹ್ನೆಯ ಜೊತೆಗೆ ಸತ್ಯಮೇವ ಜಯತೆಯನ್ನು ಮುದ್ರಿಸಲಾಗಿದೆ.
* ನಾಣ್ಯದ ಎಡಬಲದಲ್ಲಿ ದೇವನಗರಿ ಲಿಪಿಯಲ್ಲಿ ಭಾರತ ಎಂದು ಮುದ್ರಿಸಿದ್ದರೆ, ಬಲ ಬದಿಯಲ್ಲಿ ಇಂಡಿಯಾ ಎಂದು ಇಂಗ್ಲೀಷ್ ಭಾಷೆಯಲ್ಲಿ ಮುದ್ರಿಸಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv