ಮಿಜೋರಾಂ ರಾಜಧಾನಿ ಐಜ್ವಾಲ್ ಅನ್ನು ದೆಹಲಿಯೊಂದಿಗೆ ಸಂಪರ್ಕಿಸುವ ರಾಜ್ಯದ ಮೊದಲ ರಾಜಧಾನಿ ಎಕ್ಸ್‌ಪ್ರೆಸ್ ರೈಲಿಗೆ ಸೆ.13ರಂದು ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದ್ದಾರೆ. ಈ ಮೂಲಕ ಅಲ್ಲಿನ ಜನತೆಯ ದಶಕದ ಕನಸು ನನಸಾಗಿದೆ. ಅಲ್ಲದೇ ಐಜ್ವಾಲ್ ನಗರ ಮೊಟ್ಟ ಮೊದಲ ಬಾರಿಗೆ ಭಾರತೀಯ ರೈಲ್ವೆ ಜಾಲ ಸೇರಿಕೊಂಡಿದೆ. ಮಿಜೋರಾಂ ಗುಡ್ಡಗಾಡಿನಿಂದ ಕೂಡಿದ ಪ್ರದೇಶವಾಗಿದ್ದು, ಇಲ್ಲಿ ರೈಲು ಮಾರ್ಗ ನಿರ್ಮಾಣ ಮಾಡುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಇದೀಗ ನಿಧಾನಗತಿಯಲ್ಲಿ ಸಾಗಿದ್ದ ರೈಲ್ವೆ ಕಾಮಗಾರಿ 11 ವರ್ಷಗಳ ಬಳಿಕ ಪೂರ್ಣಗೊಂಡಿದೆ. ಹಾಗಿದ್ರೆ ಇದರ ವಿಶೇಷತೆ ಏನು ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.
ಬೈರಾಬಿ- ಸೈರಾಂಗ್ ನಡುವಿನ ಈ ರೈಲು ಮಾರ್ಗವನ್ನು ಸೆ.13 ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ. ದುರ್ಗಮ ಗುಡ್ಡಗಾಡು ಪ್ರದೇಶ, ಆಳವಾದ ಕಂದಕ, ಕಣಿವೆಗಳಿಂದ ಕೂಡಿರುವ ಈಶಾನ್ಯ ರಾಜ್ಯದಲ್ಲಿರೈಲು ಮಾರ್ಗ ಕಾರ್ಯಗತಗೊಂಡಿದ್ದೇ ದೊಡ್ಡ ಸಾಹಸ. ಮೊದಲು ಸಿಲ್ಚಾರ್‌ನಿಂದ ಐಜ್ವಾಲ್‌ಗೆ 8-10 ಗಂಟೆ ಪ್ರಯಾಣ ಮಾಡಬೇಕಿತ್ತು. ಈಗ ಕೇವಲ 4 ಗಂಟೆಯಲ್ಲಿ ಐಜ್ವಾಲ್ ತಲುಪಬಹುದು.

8,070 ಕೋಟಿ ರೂ. ವೆಚ್ಚದ ಯೋಜನೆ:
ಭಾರತೀಯ ರೈಲ್ವೆ (ಎನ್‌ಎಫ್‌ಆರ್) ಈ ನೂತನ ರೈಲು ಮಾರ್ಗವನ್ನು ನಿರ್ಮಿಸಿದೆ. ಅಸ್ಸಾಂ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಈ ರಾಜ್ಯದ ಗಡಿ ಭಾಗದವರೆಗೆ ರೈಲ್ವೆ ಸಂಪರ್ಕ ಈ ಹಿಂದೆಯೇ ಇತ್ತು. ಆದರೆ, ರಾಜ್ಯದೊಳಗೆ ಇನ್ನೂ ರೈಲು ಸಂಪರ್ಕ ಕಲ್ಪಿಸಿರಲಿಲ್ಲ. ಈಗ ರಾಜ್ಯದೊಳಗೆ ರೈಲಿನ ಸದ್ದು ಮೊಳಗಲಿದೆ. 2014ರ ನವೆಂಬರ್ 29ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಿಜೋರಾಂ ರಾಜ್ಯದಲ್ಲಿ ಬೈರಾಬಿಯಿಂದ ಸೈರಾಂಗ್ ತನಕ ಹೊಸ ರೈಲು ಮಾರ್ಗದ ಶಿಲಾನ್ಯಾಸ ನೆರವೇರಿಸಿದ್ದರು. 2016ರ ಮಾ.21ರಂದು ಅಸ್ಸಾಂನಿಂದ ಬೈರಾಬಿವರೆಗೆ ರೈಲು ಮಾರ್ಗವನ್ನು ಬ್ರಾಡ್‌ಗೇಜ್‌ಗೆ ಪರಿವರ್ತನೆ ಮಾಡುವ ಮೂಲಕ ಮಿಜೋರಾಂನ ಬೈರಾಬಿಗೆ ಮೊದಲ ರೈಲು ತಲುಪಿತು. ಈ ಯೋಜನೆಗೆ 8,070 ಕೋಟಿ ರೂ. ವೆಚ್ಚವಾಗಿದೆ.
11 ವರ್ಷಗಳ ಬಳಿಕ ಕಾಮಗಾರಿ ಪೂರ್ಣ:
ರೈಲ್ವೆ ಟ್ರ್ಯಾಕ್ ಬಹುತೇಕ ಸುರಂಗ ಮತ್ತು ಸೇತುವೆ ಮೇಲೆಯೇ ನಿರ್ಮಾಣವಾಗಿದೆ. ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೂ ಇಲ್ಲಿಭಾರಿ ಮಳೆ ಸುರಿಯುತ್ತಿರುತ್ತದೆ. ಈ ಸಂದರ್ಭದಲ್ಲಿಕೆಲಸ ಮಾಡಲು ಸಾಧ್ಯವೇ ಇಲ್ಲ. ವರ್ಷದಲ್ಲಿ ನಾಲ್ಕೈದು ತಿಂಗಳು ಮಾತ್ರವೇ ಕಾಮಗಾರಿ ಸಾಧ್ಯ. ಸಣ್ಣ ಮಳೆ ಬಂದರೂ ಕಾರ್ಮಿಕರು ಕಾಮಗಾರಿ ಪ್ರದೇಶಕ್ಕೆ ತಲುಪುವುದೇ ದೊಡ್ಡ ಸಾಹಸ. ಯಾವಾಗ ಗುಡ್ಡ ಕುಸಿದು ಬೀಳುತ್ತದೆಯೋ ಎನ್ನುವ ಆತಂಕ. ನಿರ್ಮಾಣಕ್ಕೆ ಬೇಕಾದ ಭಾರಿ ವಾಹನಗಳನ್ನು ತೆಗೆದುಕೊಂಡು ಹೋಗುವುದು ಇನ್ನಷ್ಟು ದುಸ್ತರ. ಈ ಎಲ್ಲಾಕಷ್ಟಗಳ ಹೊರತಾಗಿಯೂ ಸುಸಜ್ಜಿತ ಟ್ರ್ಯಾಕ್ ನಿರ್ಮಾಣವಾಗಿದೆ. ಇಂಥ ರೈಲು ಮಾರ್ಗದಲ್ಲಿಸಾಗುವುದೇ ಒಂದು ಸುಂದರ ಅನುಭವ. ಈ ಮಾರ್ಗದಲ್ಲಿಹೊರ್ಟೋಕಿ, ಕೌನ್ಪುಯಿ, ಮುವಾಲ್ಖಾಂಗ್ ಮತ್ತು ಸೈರಾಗ್ ಸೇರಿದಂತೆ ಒಟ್ಟು ನಾಲ್ಕು ರೈಲು ನಿಲ್ದಾಣಗಳಿವೆ.
45 ಸುರಂಗ, 153 ಸೇತುವೆ:
ಬೈರಾಬಿ- ಸೈರಾಂಗ್ ರೈಲು ಮಾರ್ಗದಲ್ಲಿಒಟ್ಟು 45 ಸುರಂಗಗಳಿದ್ದು ಒಟ್ಟು ಮಾರ್ಗದ 15.885 ಕಿ.ಮೀ ನಷ್ಟು (31%) ದೂರವನ್ನು ಸುರಂಗ ಮಾರ್ಗಗಳೇ ಒಳಗೊಂಡಿವೆ. ಒಟ್ಟು ಸೇತುವೆಗಳ ಉದ್ದ 11.78 ಕಿ.ಮೀ ಇದ್ದು, ಮೇಲ್ಸೇತುವೆ, ಕೆಳಸೇತುವೆ ಸೇರಿ ಒಟ್ಟು 153 ಸೇತುವೆಗಳಿವೆ. ನೆಲದಿಂದ 114 ಮೀಟರ್ ಎತ್ತರದಲ್ಲಿ ಕಂಬ ನಿರ್ಮಿಸಿ ಸೇತುವೆ ನಿರ್ಮಿಸಲಾಗಿದೆ. ಸೇತುವೆ ಹಾಗೂ ಸುರಂಗಗಳನ್ನು ಹೊರತುಪಡಿಸಿ 23.715 ಕಿ.ಮೀ ರೈಲ್ವೆ ಮಾರ್ಗ ಬಯಲಿನಲ್ಲಿದೆ. ಕೆಲವೆಡೆ ಮಳೆಯಿಂದಾಗಿ ಭೂಕುಸಿತ ತಡೆಯಲು ಗುಡ್ಡಗಳನ್ನು ಸೂಕ್ತ ರಕ್ಷಣಾ ಯೋಜನೆಗಳೊಂದಿಗೆ ಬಲಪಡಿಸಲಾಗಿದೆ. ಸದ್ಯಕ್ಕೆ ಈ ಮಾರ್ಗದಲ್ಲಿ 3 ರೈಲು ಸಂಚಾರ ಆರಂಭಿಸಲಾಗಿದೆ. ಐಜ್ವಾಲ್- ದಿಲ್ಲಿ ರಾಜಧಾನಿ ಎಕ್ಸ್‌ಪ್ರೆಸ್, ಐಜ್ವಾಲ್- ಕೋಲ್ಕತ್ತಾ ಎಕ್ಸ್‌ಪ್ರೆಸ್ ಮತ್ತು ಐಜ್ವಾಲ್- ಗುವಾಹಟಿ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಆರಂಭಗೊಂಡಿದೆ.

ಸುರಂಗಗಳಲ್ಲಿ ಈಶಾನ್ಯ ಸಂಸ್ಕೃತಿ ಚಿತ್ರಣ:
ಸುರಂಗಗಳ ಮುಖಭಾಗಗಳಲ್ಲಿ ಮಿಜೋರಾಂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾತ್ಮಕ ಚಿತ್ರಗಳನ್ನು ಮೂಡಿಸಲಾಗಿದೆ.ಇವುಗಳಲ್ಲಿ ಮಿಜೋರಾಂ ಜನರ ಉಡುಪು, ಹಬ್ಬ, ಸಂಪ್ರದಾಯಗಳು, ಗ್ರಾಮೀಣ ಜೀವನಶೈಲಿ, ಹಾಗೆಯೇ ರಾಜ್ಯದ ಸಸ್ಯಜೀವಿ ಮತ್ತು ಪ್ರಾಣಿಜೀವಿಗಳ ಚಿತ್ರಣ ನೀಡಲಾಗಿದೆ.
722 ಕಿ.ಮೀ. ಅಂತಾರಾಷ್ಟ್ರೀಯ ಗಡಿ:
ಮಿಜೋರಾಂ 21,087 ಚ.ಕಿ.ಮೀ ಗಳಷ್ಟು ವಿಸ್ತಾರವಾಗಿದ್ದು, ಪಶ್ಚಿಮಕ್ಕೆ ಬಾಂಗ್ಲಾದೇಶ ಮತ್ತು ಪೂರ್ವ ಮತ್ತು ದಕ್ಷಿಣಕ್ಕೆ ಮ್ಯಾನ್ಮಾರ್‌ನೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಇದು 722 ಕಿ.ಮೀ. ಗಳ ಅಂತಾರಾಷ್ಟ್ರೀಯ ಗಡಿಯನ್ನು ಹೊಂದಿದೆ. ಮಿಜೋರಾಂನ ರಾಜಧಾನಿ ಐಜ್ವಾಲ್. ಇದು ತನ್ನ ಅಪೂರ್ವ ಪ್ರಕೃತಿ ಸೌಂದರ್ಯದಿಂದ ಮೈದುಂಬಿಕೊಂಡಿದೆ. ಐಜ್ವಾಲ್ ಸಮುದ್ರಮಟ್ಟದಿಂದ ಸುಮಾರು 1,131 ಮೀಟರ್ ಎತ್ತರದಲ್ಲಿದ್ದು, ಮುಗಿಲೆತ್ತರದ ಬೆಟ್ಟಗಳಿಂದ ರಮಣೀಯವಾಗಿ ಕಂಗೊಳಿಸುತ್ತಿದೆ.
ಪ್ರವಾಸೋದ್ಯಮಕ್ಕೆ ಲಾಭ:
ಮಿಜೋರಾಂನಲ್ಲಿ ಸದ್ಯಕ್ಕೆ ಪ್ರವಾಸೋದ್ಯಮ, ಬಿದಿರಿನ ಕರಕುಶಲ ವಸ್ತುಗಳು, ಶುಂಠಿ, ಅಡಿಕೆ, ಅರಣ್ಯಜನ್ಯ ಉತ್ಪನ್ನಗಳನ್ನೇ ಅವಲಂಬಿಸಿದೆ. ದೊಡ್ಡ ಶಿಕ್ಷಣ ಸಂಸ್ಥೆಗಳಾಗಲಿ, ವೈದ್ಯಕೀಯ ಕ್ಷೇತ್ರದಲ್ಲಾಗಲಿ ಮುಂಚೂಣಿಯಲ್ಲಿಲ್ಲ. ಆದರೆ, ಸಂಪೂರ್ಣ ಸಾಕ್ಷರತೆಯನ್ನು ಘೋಷಿಸಿಕೊಂಡಿರುವುದು ಹೆಮ್ಮೆಯ ವಿಷಯವೇ ಸರಿ. ರೈಲ್ವೆ ಸಂಪರ್ಕದಿಂದ ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುವುದರ ಜೊತೆಗೆ, ಉನ್ನತ ಶಿಕ್ಷಣ, ವ್ಯಾಪಾರ, ವೈದ್ಯಕೀಯ ಕ್ಷೇತ್ರದಲ್ಲಿ ಜನರು ಬೇರೆ ರಾಜ್ಯದೊಂದಿಗೆ ಸುಲಭ ಸಂಪರ್ಕಕ್ಕೆ ಸಹಕಾರಿಯಾಗಿದೆ. 2025ರ ಆಗಸ್ಟ್‌ನಲ್ಲಿ ಐಆರ್‌ಸಿಟಿಸಿ ಮಿಜೋರಾಂ ಸರ್ಕಾರದೊಂದಿಗೆ 2 ವರ್ಷಗಳ ಅವಧಿಗೆ ಪ್ರವಾಸೋದ್ಯಮ ಪ್ರೋತ್ಸಾಹಕ್ಕಾಗಿ ಒಪ್ಪಂದ ಮಾಡಿಕೊಂಡಿದೆ.

ಅಂದಾಜು 15 ಲಕ್ಷ ಜನಸಂಖ್ಯೆವುಳ್ಳ ಮಿಜೋರಾಂ ರಾಜ್ಯದ ಸಾಮಾಜಿಕ, ಆರ್ಥಿಕ ಪ್ರಗತಿಗೆ ಬೈರಾಬಿ ಸೈರಾಂಗ್ ರೈಲು ಮಾರ್ಗವು ವಿಶೇಷ ಕೊಡುಗೆ ನೀಡಲಿದೆ. ಬಹುತೇಕ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಮಿಜೋ ಭಾಷಿಗರ ಜನರ ಜೀವನ ಮಟ್ಟ ಸುಧಾರಿಸುವುದರ ಜೊತೆಗೆ ವ್ಯಾಪಾರ ವಹಿವಾಟಿಗೆ ಈ ಮಾರ್ಗವು ಪೂರಕವಾಗಿ ಕಾರ್ಯನಿರ್ವಹಿಸಲಿದೆ. ಅಸ್ಸಾಂನ ಗುವಾಹಟಿ, ಸಿಲ್ವಾರ್, ದಿಲ್ಲಿಗೆ ನೇರ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಇದಾಗಿದೆ. ಶಿಕ್ಷಣ ಮತ್ತು ಆರೋಗ್ಯ ಕೇಂದ್ರಗಳಿಗೆ ಉತ್ತಮ ಪ್ರವೇಶ ಸಿಕ್ಕಂತಾಗಿದೆ. ನೂತನ ಮಾರ್ಗದಿಂದ ಐಜ್ವಾಲ್ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಲಿದ್ದು, ಸ್ಥಳೀಯ ಅರಣ್ಯ ಉತ್ಪನ್ನಗಳು, ಕುಶಲಕಲೆಗಳು, ತೋಟಗಾರಿಕೆ ಉತ್ಪನ್ನಗಳ ಸಾಗಾಟ ಸುಲಭವಾಗಲಿದೆ.
ಮ್ಯಾನ್ಮಾರ್‌ವರೆಗೆ ವಿಸ್ತರಣೆ ಗುರಿ:
ಐಜ್ವಾಲ್ ಹೊರಭಾಗದಲ್ಲಿರುವ ಸೈರಾಂಗ್‌ನಿಂದ ಮ್ಯಾನ್ಮಾರ್ ಗಡಿಯಲ್ಲಿರುವ ಝರಿನ್ನುಯಿವರೆಗೆ ರೈಲು ಮಾರ್ಗವನ್ನು ವಿಸ್ತರಿಸುವ ಪ್ರಾಥಮಿಕ ಸಮೀಕ್ಷೆ ಪೂರ್ಣಗೊಂಡಿದೆ. ಬಂಗಾಲ ಕೊಲ್ಲಿಯ ಮೂಲಕ 539 ಕಿ.ಮೀ. ಸಮುದ್ರ ಮಾರ್ಗದಲ್ಲಿ ಕೋಲ್ಕತಾ ಬಂದರಿನ ಮೂಲಕ ಮಿಜೋರಾಂಗೆ ಸಂಪರ್ಕಿಸುವ ಗುರಿ ಇದೆ. ಈ ಮಾರ್ಗ ನಿರ್ಮಾಣವಾದರೆ ಆಗ್ನೆಯ ಏಷ್ಯಾದೊಂದಿಗೆ ವ್ಯಾಪಾರ, ಸಂಪರ್ಕ ಇನ್ನಷ್ಟು ಸುಲಭವಾಗಲಿದೆ.
ಈ ರೈಲ್ವೆ ಯೋಜನೆ ಮಿಜೋರಾಂ ಸಾರ್ವಜನಿಕ ಸಾರಿಗೆಯಲ್ಲಿ ಹೊಸ ಮನ್ವಂತರ ಸೃಷ್ಟಿಸಲಿದೆ. ದೇಶದ ಬೇರೆಬೇರೆ ರಾಜ್ಯಗಳೊಂದಿಗೆ ಸಂಪರ್ಕಕ್ಕೆ ಅನುಕೂಲವಾಗಲಿದ್ದು. ರಾಜ್ಯದ ಆರ್ಥಿಕ, ಶೈಕ್ಷಣಿಕ, ಆರೋಗ್ಯ ಮತ್ತು ಪ್ರವಾಸೋದ್ಯಮದ ಬೆಳವಣಿಗೆಗೆ ಸಹಕಾರಿಯಾಗಲಿದೆ.

