– ಭಾರತ-ಚೀನಾ ಬಾಂಧವ್ಯ ಜಾಗತಿಕ ಪ್ರಗತಿಗೆ ಮುಖ್ಯ: ಮೋದಿ
ಮಾಸ್ಕೋ: ರಷ್ಯಾದ ಬ್ರಿಕ್ಸ್ ಶೃಂಗಸಭೆ ಇಡೀ ಜಗತ್ತಿನ ಗಮನ ಸೆಳೆದಿದೆ. 5 ವರ್ಷಗಳ ಬಳಿಕ ಭಾರತ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ (Xi Jinping) ನಡುವೆ ದ್ವಿಪಕ್ಷೀಯ ಮಾತುಕತೆ ನಡಿದಿದೆ.
ಪೂರ್ವ ಲಡಾಖ್‌ನ ಗಡಿ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಎರಡೂ ದೇಶಗಳ ಸೇನೆ ಗಸ್ತು ತಿರುಗುವ ಒಪ್ಪಂದವನ್ನು ಉಭಯ ನಾಯಕರು ಸ್ವಾಗತಿಸಿದ್ದಾರೆ. ಅಲ್ಲದೇ ದ್ವಿಪಕ್ಷೀಯ ಸಭೆಯಲ್ಲಿ, ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಗಡಿ ಸಂಬಂಧಿತ ವಿಷಯಗಳಲ್ಲಿ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವಂತಹ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೇ ಇರುವ ಅಗತ್ಯವನ್ನು ಮೋದಿ ಒತ್ತಿ ಹೇಳಿದ್ದಾರೆ. ಭಾರತ-ಚೀನಾ ಗಡಿ (India-China Border) ಸಮಸ್ಯೆಗೆ ಸಂಬಂಧಿಸಿದಂತೆ ವಿಶೇಷ ಪ್ರತಿನಿಧಿಗಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಮತ್ತು ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂಬ ಅಂಶವನ್ನು ಉಭಯ ನಾಯಕರು ಪ್ರಸ್ತಾಪಿಸಿದ್ದಾರೆ.
ಈ ವೇಳೆ ಮಾತನಾಡಿರುವ ಪ್ರಧಾನಿ ಮೋದಿ, ನಾವು 5 ವರ್ಷಗಳ ನಂತರ ಔಪಚಾರಿಕ ಸಭೆ ನಡೆಸುತ್ತಿದ್ದೇವೆ. ಭಾರತ-ಚೀನಾ ಬಾಂಧವ್ಯವು ನಮ್ಮ ಜನರಿಗೆ ಮಾತ್ರವಲ್ಲದೇ ಜಾಗತಿಕ ಶಾಂತಿ, ಸ್ಥಿರತೆ ಮತ್ತು ಪ್ರಗತಿಗೆ ಬಹಳ ಮುಖ್ಯವಾಗಿದೆ ಎಂದು ನಂಬುತ್ತೇವೆ. ಅದೇ ರೀತಿ ಗಡಿಯಲ್ಲಿ ಪರಸ್ಪರ ನಂಬಿಕೆ, ಪರಸ್ಪರ ಗೌರವ ಮತ್ತು ಸಂವೇದನಾಶೀಲತೆ ನಮ್ಮ ಆದ್ಯತೆಯಾಗಿ ಉಳಿಯಬೇಕು ಎಂದು ಕರೆ ನೀಡಿದ್ದಾರೆ.
5 ವರ್ಷಗಳ ಬಳಿಕ ಮುಖಾಮುಖಿ:
2020ರಲ್ಲಿ ನಡೆದ ಗಲ್ವಾನ್ ಘರ್ಷಣೆಯ ಬಳಿಕ ಭಾರತ ಹಾಗೂ ಚೀನಾ ಮಧ್ಯೆ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸತತ 4 ವರ್ಷಗಳಿಂದ ಭಾರತ ಮತ್ತು ಚೀನಾ ಜೊತೆಗಿನ ಮಾತುಕತೆ ಯಶಸ್ವಿಯಾಗಿದೆ. ಶಾಂತಿ ನೆಲೆಸದಿದ್ದರೆ ಚೀನಾ ಜೊತೆಗೆ ಶಾಂತಿ ಮಾತುಕತೆ ಸಾಧ್ಯವಿಲ್ಲ ಎಂದು ಭಾರತ ಹೇಳಿತ್ತು.
ಅಕ್ಟೋಬರ್ 2019 ರಲ್ಲಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ಪ್ರಧಾನಿ ಮೋದಿ ಮತ್ತು ಕ್ಷಿ ಜಿನ್‌ಪಿಂಗ್ ನಡುವೆ ಕೊನೆಯ ಬಾರಿ ಔಪಚಾರಿಕ ಸಭೆ ನಡೆದಿತ್ತು. ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಜಿನ್‍ಪಿಂಗ್ ಅವರನ್ನು ತಮಿಳುನಾಡಿನ ಸರ್ಕಾರವು ಅದ್ಧೂರಿಯಾಗಿ ಸ್ವಾಗತಿಸಿತ್ತು. ತಮಿಳುನಾಡಿನ ಸಾಂಪ್ರದಾಯಿಕ ಧಿರಿಸು ಬಿಳಿ ಪಂಚೆ, ಬಿಳಿ ಅಂಗಿ, ಶಲ್ಯ ಧರಿಸಿದ್ದ ಮೋದಿ, ಜಿನ್‍ಪಿಂಗ್ ಅವರಿಗೆ ಆತ್ಮೀಯ ಸ್ವಾಗತ ಕೋರಿದ್ದರು. ಆರಾಮಾಗಿ ಸುತ್ತಾಡುತ್ತಾ ಪಲ್ಲವರ ಕಾಲದ ದೇಗುಲಗಳ ಪರಿಚಯ ಮಾಡಿಕೊಟ್ಟಿದ್ದರು. ಮಹಾಭಾರತದ ಅರ್ಜುನ ತಪಸ್ಸು ಮಾಡಿದ್ದ ಸ್ಥಳ, ಒಂದೆಕಲ್ಲಿನಲ್ಲಿ ಕೆತ್ತಿದ ಪಂಚ ರಥ, ಹೀಗೆ ಹಲವು ಸ್ಥಳಗಳ ಮಹಿಮೆಯನ್ನು ವಿವರಿಸಿದ್ದರು.
ಮೋದಿ ಮತ್ತು ಜಿನ್‍ಪಿಂಗ್ ಸಮುದ್ರ ತೀರದಲ್ಲಿ ವಿಹರಿಸಿದ್ದರು. ಕೋವಲಂನ ಕೋವ್ ಹೋಟೆಲ್‍ನಲ್ಲಿ ಇರಿಸಲಾಗಿದ್ದ ಕಲಾಕೃತಿಗಳು ಮತ್ತು ಕೈಮಗ್ಗ ಪ್ರದರ್ಶನವನ್ನು ವೀಕ್ಷಿಸಿದ್ದರು. ಈ ವೇಳೆ ಕೈಯಿಂದ ನೇಯ್ದ ಕ್ಸಿ ಜಿಂಗ್‍ಪಿಂಗ್ ಭಾವಚಿತ್ರವನ್ನು ಪ್ರಧಾನಿ ಮೋದಿ ಚೀನಾ ಅಧ್ಯಕ್ಷರಿಗೆ ನೀಡಿದ್ದರು.