ಕಲಬುರಗಿ-ಬೆಂಗಳೂರು, ಮೈಸೂರು-ಚೆನ್ನೈ ಸೇರಿ 10 ಮಾರ್ಗಗಳ ವಂದೇ ಭಾರತ್‌ ರೈಲುಗಳಿಗೆ ಮೋದಿ ಚಾಲನೆ

Public TV
1 Min Read

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಗುಜರಾತ್‌ನ ಅಹಮದಾಬಾದ್‌ನಿಂದ ದೇಶದಾದ್ಯಂತ 10 ಹೈಸ್ಪೀಡ್ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದರು. ಕಲಬುರಗಿ-ಬೆಂಗಳೂರು ನಡುವಿನ ವಂದೇ ಭಾರತ್‌ ರೈಲಿಗೂ ಇದೇ ವೇಳೆ ಚಾಲನೆ ಸಿಕ್ಕಿತು.

ರೈಲ್ವೇ ಮೂಲಸೌಕರ್ಯ, ಸಂಪರ್ಕ ಮತ್ತು ಪೆಟ್ರೋಕೆಮಿಕಲ್ಸ್ ವಲಯಕ್ಕೆ ಪ್ರಮುಖ ಉತ್ತೇಜನ ನೀಡುವ ಸಲುವಾಗಿ ಅಹಮದಾಬಾದ್‌ನಲ್ಲಿರುವ ಡಿಎಫ್‌ಸಿಯ ಆಪರೇಷನ್ ಕಂಟ್ರೋಲ್ ಸೆಂಟರ್‌ಗೆ ಭೇಟಿ ನೀಡಿದ ಪ್ರಧಾನಿಗಳು ಶಂಕುಸ್ಥಾಪನೆ ನೆರವೇರಿಸಿದ್ದಾರೆ. 1,06,000 ಕೋಟಿ ರೂ. ಮೌಲ್ಯದ ರೈಲ್ವೆ ಮತ್ತು ಪೆಟ್ರೋಕೆಮಿಕಲ್ಸ್ ಯೋಜನೆಗಳಿಗೆ ಚಾಲನೆ ಕೊಟ್ಟರು.

ಅಹಮದಾಬಾದ್‌-ಮುಂಬೈ ಸೆಂಟ್ರಲ್‌, ಸಿಕಂದರಾಬಾದ್‌-ವಿಶಾಖಪಟ್ಟಣಂ, ಮೈಸೂರು-ಡಾ.ಎಂಜಿಆರ್‌ ಸೆಂಟ್ರಲ್‌ (ಚೆನ್ನೈ), ಪಾಟ್ನಾ-ಲಕ್ನೋ, ನ್ಯೂ ಜಲ್ಪೈಗುರಿ-ಪಾಟ್ನಾ, ಪುರಿ-ವಿಶಾಖಪಟ್ಟಣಂ, ಲಕ್ನೋ-ಡೆಹ್ರಾಡೂನ್‌, ಕಲಬುರಗಿ-ಸರ್‌. ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ ಬೆಂಗಳೂರು, ರಾಂಚಿ-ವಾರಣಾಸಿ, ಖಜುರಾಹೊ-ದೆಹಲಿ ನಡುವಿನ 10 ಹೊಸ ವಂದೇ ಭಾರತ್‌ ರೈಲುಗಳಿಗೆ ಪ್ರಧಾನಿ ಚಾಲನೆ ನೀಡಿದ್ದಾರೆ.

ಕಲಬುರಗಿ-ಬೆಂಗಳೂರು ನಡುವಿನ ವಂದೇ ಭಾರತ್ ರೈಲು ವಾರದ 6 ದಿನಗಳಲ್ಲಿ ಸಂಚರಿಸಲಿದೆ. ಈ‌ ಮೂಲಕ ಕಲಬುರಗಿ ಜಿಲ್ಲೆಯ ಜನರ ಹಲವು ದಿನಗಳ ಕನಸು ನನಸಾಗಿದೆ.

Share This Article