ಬಿಜೆಪಿ ಸಂಸ್ಥಾಪನಾ ದಿನ ಆಚರಣೆಗೆ ದೀಪ ಬೆಳಗಬೇಕಾ?- ಮೋದಿ ಕರೆಗೆ ಎಚ್‍ಡಿಕೆ ಪ್ರಶ್ನೆ

Public TV
1 Min Read
HDK MODI 1

ಬೆಂಗಳೂರು: ಪ್ರಧಾನಿ ಮೋದಿ ಅವರು ಕೊರೊನಾ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡುವಂತೆ ಇಂದು ರಾತ್ರಿ 9 ಗಂಟೆಗೆ ದೀಪ ಬೆಳಗಲು ಕರೆ ನೀಡಿದ್ದಾರೆ. ಆದರೆ ಪ್ರಧಾನಿ ಮೋದಿ ಕರೆಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ.

ಕುಮಾರಸ್ವಾಮಿ ಅವರು ಟ್ವಿಟ್ಟರಿನಲ್ಲಿ ಸಾಲು ಸಾಲು ಟ್ವೀಟ್ ಮಾಡುವ ಮೂಲಕ ಬಿಜೆಪಿ ಸಂಸ್ಥಾಪನಾ ದಿನ ಆಚರಣೆಗೆ ದೀಪ ಬೆಳಗಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.

ಮೊದಲಿಗೆ “ಬಿಜೆಪಿಯ ಸಂಸ್ಥಾಪನಾ ದಿನ ಆಚರಿಸಲು ಕೊರೊನಾ ಸಂಕಷ್ಟವನ್ನು ಪ್ರಧಾನಿ ದುರುಪಯೋಗ ಮಾಡಿಕೊಂಡರೇ? ಏಪ್ರಿಲ್ 6, 1980 ಬಿಜೆಪಿ ಸಂಸ್ಥಾಪನಾ ದಿನ. ಇಂದಿನ ದಿನ ಅಂದರೆ 2020 ಏಪ್ರಿಲ್ 5ಕ್ಕೆ ಬಿಜೆಪಿಗೆ ನಲವತ್ತು ವರ್ಷ ತುಂಬುತ್ತವೆ” ಎಂಬು ಬರೆದುಕೊಂಡಿದ್ದಾರೆ.

ಮತ್ತೊಂದು ಟ್ವೀಟ್ ಮಾಡಿ “ತನ್ನ ಸಂಸ್ಥಾಪನಾ ದಿನದ ಸಂಭ್ರಮೋತ್ಸವವನ್ನು ಕೊರೊನಾ ಸಂಕಷ್ಟದ ದಿನಗಳಲ್ಲಿ ನೇರಾ-ನೇರ ಆಚರಿಸಲು ಹಿಂಜರಿದ ಬಿಜೆಪಿ ಪರೋಕ್ಷವಾಗಿ ಇಡೀ ದೇಶದ ಜನತೆಯ ಕೈಯಲ್ಲಿ ದೀಪ ಬೆಳಗಿಸಿ ತನ್ನ ಭಂಡತನವನ್ನು ಮೆರೆಯುತ್ತಿದೆಯೇ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ದೇಶದ ಸಂಕಟವನ್ನು ಬಗೆಹರಿಸುವ ಯಾವುದೇ ಮಾರ್ಗೋಪಾಯಗಳನ್ನು ದೇಶಕ್ಕೆ ಹೇಳದೇ ಪ್ರಧಾನಿ ಏಪ್ರಿಲ್ 5ನ್ನೇ ಆಯ್ದುಕೊಂಡದ್ದಕ್ಕೆ ಬೇರೆ ಏನು ವೈಜ್ಞಾನಿಕ, ವೈಚಾರಿಕ ಕಾರಣ ಎಂಬುದನ್ನು ಸ್ಪಷ್ಟ ಪಡಿಸಬೇಕು. ದೇಶ ಹಿಂದೆಂದೂ ಕಂಡರಿಯದ ಕಷ್ಟದ ದಿನಗಳಲ್ಲಿ ಇರುವಾಗ ದೀಪ ಬೆಳಗಿಸಿ ಒಗ್ಗಟ್ಟು ಪ್ರದರ್ಶಿಸುವ ನೆಪದಲ್ಲಿ ಈ ತರದ ತೋರಿಕೆಯ ಸಂಭ್ರಮ ಬೇಕೇ?” ಎಂದು ಪ್ರಶ್ನೆ ಮಾಡಿದ್ದಾರೆ.

ಜಗತ್ತು ಕೊರೊನಾ ಮಹಾಮಾರಿಯಿಂದ ತತ್ತರಿಸುವ ಸಂದರ್ಭದಲ್ಲಿ ಇಂತಹ ರಹಸ್ಯ ಕಾರ್ಯಸೂಚಿ ಅರ್ಥಾತ್ ಪರದೆ ಹಿಂದಿನ ಸತ್ಯ ಮರೆಮಾಚಿ ಅಕಾಲಿಕ ದೀಪಾವಳಿ ಮಾಡಬೇಕೆ? ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು” ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿ ವಿರೋಧ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *