ತುಮಕೂರು: ಜನವರಿ 2 ರಂದು ಪ್ರಧಾನಿ ಮೋದಿ ಕಲ್ಪತರು ನಾಡು ತುಮಕೂರಿಗೆ ಆಗಮಿಸುತ್ತಿದ್ದಾರೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದ ಶಿವೈಕ್ಯ ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ಕೊಡಬೇಕು ಎಂಬ ಭಕ್ತಾದಿಗಳ ಆಗ್ರಹ ಮತ್ತೇ ಮನ್ನೆಲೆಗೆ ಬಂದಿದೆ. ಸಂತರ ತಪೋ ಭೂಮಿಗೆ ಬರುತ್ತಿರುವ ಪ್ರಧಾನಿ ಮೋದಿ ತ್ರಿವಿಧ ದಾಸೋಹಿಗಳಿಗೆ ಭಾರತ ರತ್ನ ಘೋಷಿಸಬೇಕು ಎಂದು ಭಕ್ತಾದಿಗಳು ಆಗ್ರಹಿಸಿದ್ದಾರೆ.
ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಕೇಂದ್ರ ಸರ್ಕಾರದ ರೈತ ಸಮ್ಮಾನ್ ಯೋಜನೆಯ ಎರಡನೇ ಹಂತದ ಕಾರ್ಯಕ್ರಮ ಜನವರಿ 2 ರಂದು ನಡೆಯಲಿದೆ. ಪ್ರಧಾನಿ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಲಿದ್ದಾರೆ. ಪ್ರಧಾನಿ ಮೋದಿ ಮಠಕ್ಕೆ ಭೇಟಿ ನೀಡುತ್ತಿದ್ದಾರೆ ಎಂಬ ವಿಚಾರ ತಿಳಿಯುತಿದ್ದಂತೆಯೇ ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂಬ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಜನವರಿ 21 ರಂದು ಶ್ರೀಗಳ ವರ್ಷದ ಸಮಾರಾಧನೆ ಇದ್ದು ಮಠಕ್ಕೆ ಭೇಟಿ ನೀಡುವ ಪ್ರಧಾನಿಗಳು ಭಾರತ ರತ್ನ ಘೋಷಣೆ ಮಾಡುವ ಮೂಲಕ ಸಿಹಿ ಸುದ್ದಿ ಕೊಡಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.
ಕಳೆದ ವರ್ಷ ಜನವರಿ 21 ರಂದು ಶಿವಕುಮಾರ ಶ್ರೀಗಳು ಶಿವೈಕ್ಯರಾಗಿದ್ದರು. ಜನವರಿ 25 ರಂದು ಭಾರತ ರತ್ನ ಪ್ರಶಸ್ತಿ ಘೋಷಣೆಯಾಗಬಹುದು ಎಂದು ಕೋಟ್ಯಂತರ ಭಕ್ತಾದಿಗಳು ಎದುರು ನೋಡುತ್ತಿದ್ದರು. ಆದರೆ ಭಕ್ತರ ನಿರೀಕ್ಷೆ ಹುಸಿಯಾಗಿತ್ತು. ತ್ರಿವಿಧ ದಾಸೋಹಿ, ಶತಾಯುಷಿಗಳಾಗಿದ್ದ ಶ್ರೀಗಳಿಗೆ ಭಾರತ ರತ್ನ ಕೊಡಮಾಡದ ಕೇಂದ್ರದ ವಿರುದ್ಧ ಶ್ರೀಮಠದ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಈಗ ಸ್ವತಃ ಮೋದಿಯವರೇ ಮಠಕ್ಕೆ ಬರುತ್ತಿದ್ದು ಪ್ರಶಸ್ತಿ ಘೋಷಣೆ ಮಾಡಲಿ ಅನ್ನೋದು ಭಕ್ತರ ಒತ್ತಾಸೆಯಾಗಿದೆ. ಭಕ್ತ ಗಣದ ಆಗ್ರಕ್ಕೆ ವಸತಿ ಸಚಿವ ವಿ.ಸೋಮಣ್ಣ ಕೂಡ ದನಿಗೂಡಿಸಿದ್ದಾರೆ. ಭಾರತ ರತ್ನ ನೀಡುವ ಕುರಿತು ಈಗಾಗಲೇ ಕೇಂದ್ರದ ಗಮನಕ್ಕೆ ತಂದಿದ್ದೇವೆ. ಪ್ರಧಾನಿಗಳು ಮಠಕ್ಕೆ ಬಂದಾಗ ಆ ಕುರಿತು ಇನ್ನೊಮ್ಮೆ ಒತ್ತಾಯ ಮಾಡುತ್ತೇವೆ ಎಂದಿದ್ದಾರೆ.
ಅನ್ನ, ಅಕ್ಷರ ಹಾಗೂ ಆಶ್ರಯ ದಾಸೋಹ ಮಾಡಿ ತ್ರಿವಿಧ ದಾಸೋಹಿ ಎನಿಸಿ ಮೋದಿ ನಡೆದಾಡಿದ ದೇವರಿಗೆ ಭಾರತ ರತ್ನ ಕೊಟ್ಟರೆ ಆ ಪ್ರಶಸ್ತಿಯ ಮೌಲ್ಯವೇ ಹೆಚ್ಚಾಗಲಿದೆ ಎಂದು ಭಕ್ತರು ನಂಬಿದ್ದಾರೆ.