ಧಾರವಾಡ: ರಾಮಮಂದಿರ ನಿರ್ಮಾಣ ಮಾಡದೇ ಇದ್ದರೆ, ಪ್ರಧಾನಿ ನರೇಂದ್ರ ಮೋದಿಯವರು ಹಿಂದೂಗಳಿಗೆ ದ್ರೋಹ ಬಗೆದಂತಾಗುತ್ತದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣ ಆಗಬೇಕೆಂದು 100 ಕೋಟಿ ಹಿಂದೂಗಳ ಆಶಯವಾಗಿದೆ. ಆದರೆ ಇದು ಬಿಜೆಪಿಯವರಿಗೆ ಲಾಭ ಆಗುತ್ತಿದೆ. ಬಿಜೆಪಿಯವರು ರಾಮ ಮಂದಿರ ನಿರ್ಮಿಸುತ್ತೇವೆ ಎಂದು ತಮ್ಮ ಪ್ರಣಾಳಿಕೆಯಲ್ಲಿ ಹಾಕಿದ್ದರು. ಅಲ್ಲದೇ ಜನರು, ಸಂತರೂ ಸಹ ಈಗ ಒತ್ತಾಯ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆ ವೇಳೆಗೆ ರಾಮ ಮಂದಿರ ನಿರ್ಮಾಣವಾಗಬೇಕು. ಈ ಬಾರಿ ಮಾಡದೇ ಇದ್ದರೆ, ಪ್ರಧಾನಿ ಮೋದಿಯವರು ಹಿಂದೂಗಳಿಗೆ ದ್ರೋಹ ಬಗೆದಂತಾಗುತ್ತದೆ. ಈ ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಇದೇ ರೀತಿ ಮಾಡಿದ್ದರು. ಹೀಗಾಗಿ ನಾವು ಅವರನ್ನು ಕೆಳಗೆ ಇಳಿಸಿದ್ದೇವು ಎಂದರು.
ಇದೇ ವೇಳೆ ಗೋರಕ್ಷಕರ ಮೇಲೆ ಹಲ್ಲೆ ಕುರಿತು ಪ್ರತಿಕ್ರಿಯಿಸಿ, ಹಿಂದೂ ಕಾರ್ಯಕರ್ತರಿಗೆ ಗೋಮಾಂಸ ಸಾಗಾಟದ ವಿಷಯ ಗೊತ್ತಾಗುತ್ತದೆ. ಆದರೆ ಪೊಲೀಸರಿಗೆ ಸಾಗಾಟದ ಬಗ್ಗೆ ಮಾಹಿತಿ ಗೊತ್ತಿರಲಿಲ್ಲವೇ? ಪೊಲೀಸರ ಕೆಲಸ ಇರೋದೆ ಪತ್ತೆ ಮಾಡುವುದಕ್ಕೆ. ಹಾಗಾದರೇ ಅವರು ಏನು ಕತ್ತೆ ಕಾಯುತ್ತಿದ್ದರಾ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಪೊಲೀಸ್ ಇಲಾಖೆ ವಿರುದ್ಧ ಹರಿಹಾಯ್ದ ಅವರು, ಅಕ್ರಮವಾಗಿ ಗೋಮಾಂಸವನ್ನು ಸಾಗಿಸುತ್ತಾರೆ. ಅವರ ಹಿಂದೆ ಕಾರುಗಳನ್ನು ಫಾಲೋ ಮಾಡಿ, ಅದು ಬಿಟ್ಟು ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ. ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಲು ನಿಮ್ಮನ್ನು ನೇಮಿಸಲಾಗಿದೆ. ಆದರೆ ಈ ಬಗ್ಗೆ ಪೊಲೀಸರನ್ನು ಪ್ರಶ್ನಿಸಿದರೆ, ಅಕ್ರಮ ಇಲ್ಲ ಪರವಾನಿಗೆ ಇದೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಪರವಾನಿಗೆ ಇದ್ದಿದ್ದರೆ, ಅದನ್ನು ತೋರಿಸಬೇಕಿತ್ತು. ಕದ್ದು ಮುಚ್ಚಿ ಏಕೆ ಹೋಗಬೇಕಿತ್ತು ಎಂದು ಪ್ರಶ್ನಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv