Connect with us

Districts

ಮಂಗ್ಳೂರಲ್ಲಿ ಪ್ರಧಾನಿ ಮೋದಿ ಸಂಚಲನ – ನೂರಾರು ಕಾರ್ಯಕರ್ತರ ಜೊತೆ `ನಮೋ’ ವಿಜಯೋತ್ಸವ

Published

on

ಕಾರವಾರ: ಗುಜರಾತ್ ಹಾಗೂ ಹಿಮಾಚಲಪ್ರದೇಶ ಚುನಾವಣಾ ಫಲಿತಾಂಶದ ವಿಜಯೋತ್ಸವ ಬೆನ್ನಲ್ಲೇ ಪ್ರಧಾನಿ ಮೋದಿ ಮಂಗಳೂರಿನಲ್ಲಿ ಸಂಚಲನ ಸೃಷ್ಠಿಸಿದ್ದಾರೆ. ರಾತ್ರೋರಾತ್ರಿ ಲಕ್ಷದ್ವೀಪಕ್ಕೆ ತೆರಳಲು ಕಡಲ ನಗರಿಗೆ ಆಗಮಿಸಿದ್ದಾರೆ.

ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ತೆರಳಲು ಮೊದಲೇ ನಿಗದಿಯಾದಂತೆ ಪ್ರಧಾನಿ ಮೋದಿ ರಾತ್ರಿ 11.45 ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದರು. ವಿಮಾನ ನಿಲ್ದಾಣದಿಂದ ಹೊರಬಂದು ತಮ್ಮ ಬುಲೆಟ್ ಪ್ರೂಫ್ ವಾಹನದಲ್ಲಿ ಹೊರಗೆ ನೆರೆದಿದ್ದ ಕಾರ್ಯಕರ್ತರತ್ತ ಆಗಮಿಸಿದ್ದಾರೆ. ಕೈಬೀಸುತ್ತಲೇ ವಾಹನದಿಂದಿಳಿದ ಪ್ರಧಾನಿ, ಅಲ್ಲಿಂದ ನೇರವಾಗಿ ಕಾರ್ಯಕರ್ತರತ್ತ ನಡೆದುಕೊಂಡು ಆಗಮಿಸಿದ್ದಾರೆ. ಪೊಲೀಸ್ ಸರ್ಪಗಾವಲಿನ ಮಧ್ಯೆ ಒಂದೆಡೆ ಸೇರಿದ್ದ 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು `ಮೋದಿ, ಮೋದಿ’ ಎಂದು ಹರ್ಷೋದ್ಘಾರ ಹಾಕತೊಡಗಿದ್ದಾರೆ.

ನೆಚ್ಚಿನ ನಾಯಕನನ್ನು ನೋಡಲು ಸುಮಾರು 2 ಗಂಟೆಗಳಿಗೂ ಮೊದಲೇ ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಪ್ರಧಾನಿ ಆಗಮಿಸುತ್ತಿದ್ದಂತೆ, `ಮೋದಿ..ಮೋದಿ’ ಎಂಬ ಹರ್ಷೋದ್ಘಾರ ವ್ಯಕ್ತಪಡಿಸಿದ್ರು. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ವಿವಿಧೆಡೆಗಳಿಂದ ಬಂದಿದ್ದ ಸಾವಿರಾರು ಕಾರ್ಯಕರ್ತರು ಕೊಂಬು, ಕಹಳೆ, ಚೆಂಡೆ, ಗೊಂಬೆ ಕುಣಿತಗಳೊಂದಿಗೆ ಪ್ರಧಾನಿಯನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಕಾರ್ಯಕರ್ತರ ಜತೆಗೆ ವಿಜಯೋತ್ಸವದ ಆಚರಿಸಿದ ಪ್ರಧಾನಿ ಮೋದಿ, ಕಾರ್ಯಕರ್ತರು ಹಾಗೂ ಜನತೆಯತ್ತ ವಿಜಯದ ಸಂಕೇತ ತೋರುವ ಮೂಲಕ ಅಭಿನಂದನೆ ಸಲ್ಲಿಸಿದರು.

ಬಳಿಕ ಮೋದಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಉದ್ದಕ್ಕೂ ಕಾರ್ಯಕರ್ತರ ಕೈಕುಲುಕುತ್ತಲೇ ನಡೆಯುತ್ತಾ ಬಂದಿದ್ದಾರೆ. ಈ ವೇಳೆ ಯುವ ಕಾರ್ಯಕರ್ತರಂತೂ ಪೊಲೀಸರು ಹಾಕಿದ್ದ ಬ್ಯಾರಿಕೇಡನ್ನೂ ಲೆಕ್ಕಿಸದೇ ನೆಚ್ಚಿನ ಪ್ರಧಾನಿಯನ್ನು ಹತ್ತಿರದಿಂದ ನೋಡಲು ಮುಗಿಬಿದ್ದರು.

ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಏರ್ ಪೋರ್ಟ್ ಆವರಣದಲ್ಲಿ ಸೇರಿದ್ದರು. ಕೀಲು ಕುದುರೆ, ಚೆಂಡೆ, ಕೊಂಬು ವಾದ್ಯಗಳ ಕಹಳೆಗೆ ಕುಣಿದು ಕುಪ್ಪಳಿಸತೊಡಗಿದ್ದರು. ಸಂಸದ ನಳಿನ್ ಕುಮಾರ್ ಸೇರಿದಂತೆ ಹಲವು ಜಿಲ್ಲಾ ಮುಖಂಡರು ಕಾರ್ಯಕರ್ತರಿಗೆ ಸಾಥ್ ನೀಡಿದ್ದರು. ಎರಡು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತಲೇ ಕರ್ನಾಟಕಕ್ಕೆ ಆಗಮಿಸಿ ಮಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ರಾತ್ರಿ ತಂಗಿದ್ದ ಮೋದಿ, ಬೆಳಗ್ಗೆ 7.30 ಕ್ಕೆ ಲಕ್ಷದ್ವೀಪಕ್ಕೆ ಹೊರಟಿದ್ದಾರೆ. ಇತ್ತೀಚೆಗೆ ಓಖಿ ಚಂಡಮಾರುತದಿಂದ ಹಾನಿಗೀಡಾದ ಲಕ್ಷದ್ವೀಪದ ಪ್ರದೇಶಗಳಿಗೆ ಭೇಟಿ ನೀಡಿ, ಪುನರ್ವಸತಿ ಕಾರ್ಯಗಳನ್ನು ವೀಕ್ಷಿಸಲಿದ್ದಾರೆ. ಸಂಜೆ ಅಲ್ಲಿಂದ ತಿರುವನಂತಪುರದ ಮೂಲಕ ದೆಹಲಿಗೆ ಪ್ರಯಾಣಿಸಲಿದ್ದಾರೆ.

 

Click to comment

Leave a Reply

Your email address will not be published. Required fields are marked *