ನವದೆಹಲಿ: ಪ್ರಧಾನಿ ಮೋದಿ (PM Modi) ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ರಾಜೀನಾಮೆ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಒತ್ತಾಯಿಸಿದ್ದಾರೆ.
ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದ ಖರ್ಗೆ, ನ್ಯಾಷನಲ್ ಹೆರಾಲ್ಡ್ ಪ್ರಕರಣವು ರಾಜಕೀಯ ಸೇಡಿನಿಂದ ನಡೆಸಲ್ಪಟ್ಟಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕತ್ವವನ್ನು ಗುರಿಯಾಗಿಸುವ ಪಕ್ಷಪಾತದ ಉದ್ದೇಶದಿಂದ ಈ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಬಿಜೆಪಿ ವಿರುದ್ಧ ಗುಡುಗಿದ್ದಾರೆ. ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಕೇಸ್ – ಸೋನಿಯಾ, ರಾಹುಲ್ ಗಾಂಧಿಗೆ ರಿಲೀಫ್
ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ಆರೋಪಪಟ್ಟಿಯನ್ನು ಪರಿಗಣಿಸಲು ದೆಹಲಿ ನ್ಯಾಯಾಲಯ ಮಂಗಳವಾರ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ. ರಾಜಕೀಯ ವಿರೋಧಿಗಳಿಗೆ ಕಿರುಕುಳ ನೀಡಲು ಕೇಂದ್ರ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಖರ್ಗೆ ಆರೋಪಿಸಿದ್ದಾರೆ.
ಬಿಜೆಪಿಯವರು ರಾಜಕೀಯ ದ್ವೇಷಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ಈ ಪ್ರಕರಣ ಗಾಂಧಿ ಕುಟುಂಬಕ್ಕೆ ತೊಂದರೆ ಕೊಡಲು ಮಾತ್ರ. ಈ ಪ್ರಕರಣದಲ್ಲಿ ಯಾವುದೇ ಎಫ್‌ಐಆರ್ ಇಲ್ಲ. ನಮ್ಮ ಘೋಷಣೆ ‘ಸತ್ಯಮೇವ ಜಯತೇ’. ಪ್ರಕರಣದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿಯಿಂದ ಗ್ರಾಮೀಣ ಕುಟುಂಬಗಳಿಗೆ ವರವಾಗಿದ್ದ ಯೋಜನೆ ನಾಶ: ರಾಹುಲ್ ಆಕ್ರೋಶ


