ಕಾರವಾರ: ಜಿಲ್ಲೆಯಲ್ಲಿ ನಡೆಯುತ್ತಿರುವ ರಂಗೋಲಿ ಜಾತ್ರೆ ನೋಡಲು ಖುದ್ದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಕಿಂಗ್ ಸ್ಟಾರ್ ಯಶ್ ‘ಕೆಜಿಎಫ್’ ಗೆಟಪ್ ನಲ್ಲಿ ಆಗಮಿಸಿದ್ದಾರೆ. ಮೋದಿ ಹಾಗೂ ಯಶ್ ಅವರು ನೋಡುಗರ ಮೊಬೈಲ್ ನಲ್ಲಿ ಸೆರೆಯಾಗಿದ್ದಾರೆ.
ಕಾರವಾರದ ಆಂಜನೇಯ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ರಂಗೋಲಿ ಚಿತ್ರಗಳು ಮೂಡಿ ಬಂದಿದೆ. ರಂಗೋಲಿ ಜಾತ್ರೆ ಎಂದೇ ಪ್ರಸಿದ್ಧವಾಗಿರುವ ಈ ಜಾತ್ರೆ ಇಂದು ಸಂಪನ್ನಗೊಂಡಿತು. ಆಂಜನೇಯನ ಉತ್ಸವದ ನಿಮಿತ್ತ ಮಾರುತಿ ಗಲ್ಲಿಯಲ್ಲಿ ನೂರಕ್ಕೂ ಹೆಚ್ಚು ರೀತಿಯ ರಂಗೋಲಿಗಳು ಅರಳಿ ನಿಂತಿದ್ದವು.
ಕೇವಲ ರಂಗೋಲಿಗಳಿಂದಲ್ಲದೇ ಧಾನ್ಯಗಳ ರಂಗೋಲಿ ಸಹ ಮೂಡಿಬಂದಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯ, ಹೊರ ರಾಜ್ಯದ ರಂಗೋಲಿ ಕಲಾವಿದರು ಮಾರುತಿ ಗಲ್ಲಿಯ ಮನೆ ಅಂಗಳದಲ್ಲಿ ರಂಗೋಲಿ ಬಿಡಿಸಿದ್ದರು. ಇದನ್ನು ವೀಕ್ಷಿಸಲು ಕಾರವಾರದ ಸುತ್ತಮುತ್ತಲ ಜನ ತಂಡೋಪತಂಡವಾಗಿ ಇಲ್ಲಿಗೆ ಆಗಮಿಸಿ ಈ ವಿಶಿಷ್ಟ ರಂಗೋಲಿ ನೋಡಿ ಸಂತಸಪಟ್ಟರು.
ಒಂದು ದಿನದವರೆಗೆ ನಡೆಯುವ ಈ ಆಂಜನೇಯ ಉತ್ಸವ ರಂಗೋಲಿ ಜಾತ್ರೆ ಎಂದೇ ಪ್ರಸಿದ್ಧವಾಗಿದೆ. ಉತ್ತಮವಾಗಿ ಬಿಡಿಸಿದ ರಂಗೋಲಿಗಳಿಗೆ ಪ್ರಶಸ್ತಿ ನೀಡುವ ಮೂಲಕ ಈ ಸಂಪ್ರದಾಯವನ್ನು ಕಳೆದ 40 ವರ್ಷಗಳಿಂದ ಉಳಿಸಿಕೊಂಡು ಬರಲಾಗಿದ್ದು, ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv