ಕರ್ನಾಟಕದಲ್ಲಿರುವುದು ನಾಟಕ ಸರ್ಕಾರ, ಸುದ್ದಿಗೋಷ್ಠಿ ಸಮಾವೇಶದಲ್ಲೂ ಕಣ್ಣೀರು – ಮೋದಿ

Public TV
3 Min Read
modi 8

– ದುರ್ಬಲ ಸಿಎಂ ಕಣ್ಣೀರು ಹಾಕ್ತಾರೆ
– ಬಲಿಷ್ಠ ಸರ್ಕಾರ ನೋಡಲು ದೆಹಲಿಗೆ ಬನ್ನಿ
– ಕಾಂಗ್ರೆಸ್‍ಗೆ ಅಭದ್ರ ಸರ್ಕಾರ, ದುರ್ಬಲ ಸಿಎಂ ಬೇಕು

ಬಾಗಲಕೋಟೆ: ಕಳೆದ ಐದು ವರ್ಷಗಳಲ್ಲಿ ಬಲಿಷ್ಠ ಸರ್ಕಾರವನ್ನು ನೀವೆಲ್ಲರೂ ನೋಡಿದ್ದೀರಿ. ಸುಭದ್ರ ಸರ್ಕಾರ ನೋಡಲು ದೆಹಲಿ ನೋಡಿ, ಅಭದ್ರ ಸರ್ಕಾರ ನೋಡಲು ಬೆಂಗಳೂರು ನೋಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಾಗಲಕೋಟೆಯಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ಸರ್ಕಾರ ಪ್ರತಿ ಸುದ್ದಿಗೋಷ್ಠಿ, ಸಮಾವೇಶದಲ್ಲಿ ಕಣ್ಣೀರು ಹರಿಸುತ್ತಿದೆ. ಕರ್ನಾಟಕದ ನಾಟಕದಲ್ಲಿ ಎಮೋಷನ್, ಒಳಗೊಳಗೆ ಒಬ್ಬರ ಮೇಲೋಬ್ಬರು ದ್ವೇಷ ಕಾರುತ್ತಿದ್ದಾರೆ. ಕಾಂಗ್ರೆಸ್‍ಗೆ ಇಂತಹ ಅಭದ್ರ ಸರ್ಕಾರ, ದುರ್ಬಲ ಮುಖ್ಯಮಂತ್ರಿ ಬೇಕಾಗಿದ್ದಾರೆ. ಕರ್ನಾಟಕದ ದುರ್ಬಲ ಮುಖ್ಯಮಂತ್ರಿ ಕಣ್ಣೀರು ಹಾಕೋದನ್ನು ನಿಲ್ಲಿಸುತ್ತಿಲ್ಲ ಎಂದು ಕಿಡಿಕಾರಿದರು.

ಮೈತ್ರಿ ಸರ್ಕಾರ ಬಹುದಿನಗಳ ಕಾಲ ಉಳಿಯಲ್ಲ ಎಂಬುವುದು ಬಹುತೇಕ ನಾಯಕರಿಗೆ ಗೊತ್ತಾಗಿದೆ. ಹಾಗಾಗಿ ಐದು ವರ್ಷದಲ್ಲಿ ಬಾಚಿಕೊಳ್ಳಲು ಪ್ಲಾನ್ ಮಾಡಿದ್ದ ಹಣವನ್ನು ಈಗಲೇ ದೋಚಿಕೊಳ್ಳುತ್ತಿದ್ದಾರೆ. ಇಂತಹುದೇ ದುರ್ಬಲ, ಅಭದ್ರತೆಯ ಸರ್ಕಾರ ಕೇಂದ್ರದಲ್ಲಿತ್ತು. 5 ವರ್ಷದ ಹಿಂದೆ ದೆಹಲಿಯಲ್ಲಿ ರಿಮೋಟ್ ಕಂಟ್ರೋಲ್ ಪ್ರಧಾನಿಯಾಗಿದ್ದರು. ಆ ಸರ್ಕಾರ ಕೇವಲ ಹಗರಣದಿಂದ ಕೂಡಿತ್ತು. ಇದರಿಂದ ಬೇಸತ್ತ ದೇಶದ ಜನತೆ 2014ರಲ್ಲಿ ದೆಹಲಿಯಲ್ಲಿ ಚೌಕಿದಾರನ ಭದ್ರ ಸರ್ಕಾರವನ್ನು ನೇಮಕ ಮಾಡಿದರು ಎಂದರು.

2009ರಲ್ಲಿ ಮುಂಬೈ ಉಗ್ರರ ದಾಳಿ ಬಳಿಕ ಚುನಾವಣೆ ನಡೆದಿತ್ತು. ಅಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್, ದಾಳಿಯಲ್ಲಿ ಪಾಕಿಸ್ತಾನದ ಭಾಗಿಯಾಗಿದ್ದಾರೆ ಎಂದು ಪಾಕ್ ಒಪ್ಪುವಂತೆ ಮಾಡಿದ್ದೇವೆ ಎಂದು ಪ್ರಣಾಳಿಕೆಯಲ್ಲಿ ಬರೆದುಕೊಂಡಿತ್ತು. ಇದನ್ನು ದೊಡ್ಡ ಸಾಧನೆ ಎಂಬಂತೆ ಕಾಂಗ್ರೆಸ್ ಹೇಳಿಕೊಂಡಿತ್ತು. ಇಂದು ನಮ್ಮ ಸರ್ಕಾರ ಅವರ ಮನೆಯೊಳಗೆ ನುಗ್ಗಿ ಶತ್ರುಗಳನ್ನು ಹೊಡೆದುರುಳಿಸಿ ಬಂದಿದೆ. ಇದರ ಪರಿಣಾಮ ಪಾಕಿಸ್ತಾನ ವಿಶ್ವದಲ್ಲಿಯೇ ಕಣ್ಣೀರು ಹಾಕುತ್ತಿದೆ. ಹೋದ ಕಡೆಯಲ್ಲ ಮೋದಿ ನಮ್ಮ ಮೇಲೆ ದಾಳಿ ಮಾಡುತ್ತಾನೆ, ನಮ್ಮನ್ನ ರಕ್ಷಿಸಿ ಎಂದು ಸಹಾಯ ಕೇಳುತ್ತಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಮತ್ತು ಏರ್ ಸ್ಟ್ರೈಕ್ ನಮ್ಮ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.

ಪಾಕಿಸ್ತಾನ ವೈರಿಗಳ ಸತ್ತರೆ, ನಮ್ಮವರು ಅಳಲು ಆರಂಭಿಸಿದರು. ಗೂಗಲ್ ಮುಂದೆ ಕುಳಿತು ಬಾಲಕೋಟ್ ಭಾರತದಲ್ಲಿದೆ ಎಂದು ಹೇಳಿದರು. ಅವರಿಗೆ ಬಾಲಕೋಟ್ ಮತ್ತು ಬಾಗಲಕೋಟೆಯ ವ್ಯತ್ಯಾಸವು ಗೊತ್ತಾಗಲಿಲ್ಲ. ಇಂದಿಗೂ ಕಾಂಗ್ರೆಸ್ ಹಾಗೂ ಘಟಬಂಧನ್ ಪಕ್ಷಗಳು ಸರ್ಜಿಕಲ್ ಮತ್ತು ವೈಮಾನಿಕ ದಾಳಿಯನ್ನು ಒಪ್ಪಿಕೊಂಡಿಲ್ಲ. ಒಡೆದು ಆಳುವ ನೀತಿಯನ್ನ ಕಾಂಗ್ರೆಸ್ ಅನುಸರಿಸುತ್ತದೆ. ವಿಧಾನಸಭಾ ಚುನಾವಣೆ ಸಮಯದಲ್ಲಿ ಮತಗಳಿಗಾಗಿ ಒಂದೇ ತಾಯಿಯ ಮಕ್ಕಳನ್ನು ಬೇರ್ಪಡಿಸಲು ಪ್ರಯತ್ನಿಸಿದರು. ಲಿಂಗಾಯತ ಧರ್ಮವನ್ನು ಪ್ರತ್ಯೇಕಿಸಲು ಕಾಂಗ್ರೆಸ್ ಮುಂದಾಗಿತ್ತು. ಇಂದು ಲಿಂಗಾಯತ ವಿಚಾರದಲ್ಲಿ ಕಾಂಗ್ರೆಸ್ ಸಚಿವರೇ ಹೊಡೆದಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಬಸವಣ್ಣನನ್ನು ನೀಡಿದ ಜನ್ಮಭೂಮಿಯಲ್ಲಿದ್ದೇನೆ. ಬಸವಣ್ಣ ತಿಳಿಸಿದ ಮಾರ್ಗದಲ್ಲಿ ನಿಮ್ಮ ಸೇವಕ ಕೆಲಸ ಮಾಡುತ್ತಿದ್ದಾನೆ. ದೇಶ ಇಂದು ಏನೇ ಆಭಿವೃದ್ಧಿ ಕಂಡಿದ್ದರೂ ಎಲ್ಲದರ ಹಿಂದೆ ಜನತೆಯ ಆಶೀರ್ವಾದವಿದೆ. ಜಗತ್ತಿನ ಅತಿ ದೊಡ್ಡ ಆರೋಗ್ಯ ಯೋಜನೆ ನಮ್ಮ ದೇಶದಲ್ಲಿದೆ. ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಬಡ ಮತ್ತು ಸಾಮಾನ್ಯ ವರ್ಗದಲ್ಲಿ ಕಡಿಮೆ ದರದಲ್ಲಿ ಚಿಕಿತ್ಸೆ ಸಿಗುತ್ತಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗಡಿ ದಾಟಿ ಶತ್ರುಗಳನ್ನು ನಾಶ ಮಾಡಿದೆ. ಈ ಎಲ್ಲ ಕೆಲಸಗಳು ನಡೆಯಲು ಕೇವಲ ಸ್ಪಷ್ಟ ಪ್ರಾಮಾಣಿಕತೆಯಿಂದ ಸಾಧ್ಯವಾಗಿದೆ ಎಂದರು.

ಬಾಗಲಕೋಟೆ ಇಳಕಲ್ ಸೀರೆಯ ನೇಕಾರರಿಗೆ ಪಿಂಚಣಿ ಸಿಗುವಂತೆ ಯೋಜನೆಗಳನ್ನು ರೂಪಿಸಲಾಗುವುದು. ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸೂಕ್ತ ಬೆಲೆ ಸಿಗಲಿದೆ. ಆಲಮಟ್ಟಿ ಡ್ಯಾಂ ಹೂಳು ತೆಗೆಯಲು ಅನುದಾನ ಮತ್ತು ಎತ್ತರವನ್ನು ಹೆಚ್ಚಿಸಲಾಗುವುದು ಎಂದು ಈ ವೇಳೆ ಮೋದಿ ಭರವಸೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *