ನವದೆಹಲಿ: ಎಲ್ಲ ಸಂಸದರು ನಿಮ್ಮ ಕ್ಷೇತ್ರಗಳಲ್ಲಿ 150 ಕಿ.ಮೀ.ಪಾದಯಾತ್ರೆ ಮಾಡಿ ಎಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ.
ಬಿಜೆಪಿ ಸಂಸದರೊಂದಿಗೆ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಹಾತ್ಮಾ ಗಾಂಧಿ ಅವರ 150ನೇ ಜನ್ಮ ದಿನಾಚರಣೆ ‘ಗಾಂಧಿ 150’ ಕಾರ್ಯಕ್ರಮದ ಅಂಗವಾಗಿ ಪಾದಯಾತ್ರೆ ಮಾಡುವಂತೆ ಈ ಸೂಚನೆ ನೀಡಿದ್ದಾರೆ.
Advertisement
Advertisement
ಅ.2 ಹಾಗೂ ಅ.31 ಗಾಂಧೀಜಿ ಹಾಗೂ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಅಂಗವಾಗಿ ಅ.2ರಿಂದ 31ರ ನಡುವೆ ಪ್ರತಿ ದಿನ 15 ಕಿ.ಮೀ. ಪಾದಯಾತ್ರೆ ಮೂಲಕ ಕ್ರಮಿಸುವಂತೆ ಎಲ್ಲ ಸಂಸದರಿಗೂ ಸೂಚಿಸಿದ್ದಾರೆ. ಅಲ್ಲದೆ, ರಾಜ್ಯಸಭಾ ಸದಸ್ಯರೂ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದು, ಪಕ್ಷ ಸಂಘಟನೆ ದುರ್ಬಲ ಇರುವ ಕಡೆ ಪಾದಯಾತ್ರೆ ನಡೆಸುವಂತೆ ಸೂಚಿಸಿದ್ದಾರೆ.
Advertisement
Advertisement
ರಾಜ್ಯಸಭಾ ಸದಸ್ಯರಿಗೆ ಕ್ಷೇತ್ರವನ್ನು ಹಂಚಿಕೆ ಮಾಡಲಾಗುವುದು. ಪ್ರತಿಯೊಂದು ಕ್ಷೇತ್ರದಲ್ಲೂ ಕನಿಷ್ಠ 15ರಿಂದ 20 ತಂಡಗಳನ್ನು ರಚಿಸಬೇಕು. ಅವರ ನೇತೃತ್ವದಲ್ಲಿ ಪ್ರತಿದಿನ 15 ಕಿಲೋ ಮೀಟರ್ ಪಾದಯಾತ್ರೆ ನಡೆಸಬೇಕು. ಗಾಂಧೀಜಿ ಅವರ ಸ್ವಾತಂತ್ರ್ಯ ಹೋರಾಟ ಹಾಗೂ ಸಸಿ ನಡೆಯುವ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಮೋದಿ ಸಭೆಯಲ್ಲಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಷಿ, ಹಳ್ಳಿಗಳ ಪುನರ್‍ಜೀವನ ಮತ್ತು ಸ್ವಾವಲಂಬಿಗಳನ್ನಾಗಿ ಮಾಡುವುದು. ಗಿಡ ನೆಡುವುದು ಹಾಗೂ ಶೂನ್ಯ ಬಜೆಟ್ ಕೃಷಿಯತ್ತ ಗಮನಹರಿಸುವಂತೆ ತಿಳುವಳಿಕೆ ನೀಡುವ ಉದ್ದೇಶದಿಂದ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.
ನಾವು ‘ಸಂಕಲ್ಪ ಪತ್ರ’ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವುದು ನಮ್ಮ ಭವಿಷ್ಯದ ಗುರಿಯಾಗಬೇಕೆಂದು ಮೋದಿ ಸಭೆಯಲ್ಲಿ ಸೂಚಿಸಿದ್ದಾರೆ ಎಂದು ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.
ಪ್ರತಿ ದಿನ 15 ಕಿ.ಮೀ.ಪಾದಯಾತ್ರೆ ಮಾಡುವುದರಿಂದ ಎಲ್ಲ ಬೂತ್‍ಗಳನ್ನು ಕವರ್ ಮಾಡಬಹುದು. ಇದೇ ಅವಕಾಶವನ್ನು ಬಳಸಿಕೊಂಡು ಸಂಸದರು ಮಹಾತ್ಮಾ ಗಾಂಧಿ ಅವರ ಸಂದೇಶ, ಸಿದ್ಧಾಂತ ಹಾಗೂ ಜೀವನದ ಕುರಿತು ವಿವರಿಸಿ ಎಂದು ತಿಳಿಸಿದ್ದಾರೆ.
ಇದೇ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಕುರಿತು ಸಂಸದರಿಗೆ ವಿವರಿಸಿದ್ದು, ದೂರದೃಷ್ಟಿ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಇದೇ ವೇಳೆ ಬಜೆಟ್ ಒಳ್ಳೆಯ ಅಂಶಗಳನ್ನು ಜನರಿಗೆ ತಲುಪಿಸುವಂತೆ ತಿಳಿಸಿದ್ದಾರೆ.