ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿ ಪಟ್ಟ ಅಲಂಕರಿಸಿದ ವರ್ಷದಿಂದಲೂ ಗಡಿಯಲ್ಲಿ ಯೋಧರ ಜೊತೆಯೇ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದಾರೆ. ಈ ಬಾರಿಯೂ ಗಡಿಯಲ್ಲಿ ಹೆಮ್ಮೆಯ ಯೋಧರೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸಲಿದ್ದಾರೆ ಎಂದು ವರದಿಯಾಗಿದೆ.
ದೀಪಾವಳಿ ಹಬ್ಬವನ್ನು ಖುಷಿಯಿಂದ ಆಚರಿಸಿದ ಬಳಿಕ ಯೋಧರೊಂದಿಗೆ ಗಡಿಯಲ್ಲಿನ ಪರಿಸ್ಥಿತಿ ಬಗ್ಗೆ ಪ್ರಧಾನಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಈ ವರ್ಷ ನಮೋ ದೀಪಾವಳಿ ಆಚರಿಸಲು ಜಮ್ಮು ಕಾಶ್ಮೀರದ ರಾಜೌರಿಯಲ್ಲಿ ಆಚರಿಸಲಿದ್ದಾರೆ. ಹೀಗಾಗಿ ಅವರು ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ದೀಪಾವಳಿ ಆಚರಿಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ದೇಶ ಹಾಗೂ ದೇಶ ವಾಸಿಗಳು ಸುಖವಾಗಿರಲಿ ಎಂದು ನಿಸ್ವಾರ್ಥ ಸೇವೆ ಸಲ್ಲಿಸುವ ಯೋಧರನ್ನು ಹುರಿದುಂಬಿಸಿ, ಅವರಿಗೆ ಪ್ರೋತ್ಸಾಹಿಸಲು ಮೋದಿ ಅವರು ಗಡಿಯಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸುತ್ತಾರೆ. 2014ರಲ್ಲಿ ಮೊದಲ ಬಾರಿಗೆ ಸಿಯಾಚಿನ್ ಪ್ರದೇಶದಲ್ಲಿ ದೀಪಾವಳಿ ಆಚರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
2015ರಲ್ಲಿ ಭಾರತ-ಪಾಕ್ ಯುದ್ಧದ 50ನೇ ವರ್ಷಾಚರಣೆ ಅಂಗವಾಗಿ ಪಂಜಾಬ್ ಗಡಿಯಲ್ಲಿ ಯೋಧರೊಂದಿಗೆ ಮೋದಿ ಸಮಯ ಕಳೆದಿದ್ದರು. ಹಾಗೆಯೇ 2016ರಲ್ಲಿ ಹಿಮಾಚಲಪ್ರದೇಶದಲ್ಲಿ ಮತ್ತು 2017ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಮೋದಿ ದೀಪಾವಳಿ ಆಚರಿಸಿ ಖುಷಿ ಪಟ್ಟಿದ್ದರು.
ಹಾಗೆಯೇ ಕಳೆದ ವರ್ಷ ಉತ್ತರಾಖಂಡದ ಭಾರತ-ಚೀನಾ ಗಡಿಯಲ್ಲಿ ಮೋದಿ ಯೋಧರು ಹಾಗೂ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿ ಜೊತೆ ಬೆಳಕಿನ ಹಬ್ಬ ಆಚರಿಸಿ ಸಂಭ್ರಮಿಸಿದ್ದರು.
ಆದ್ದರಿಂದ ಈ ಬಾರಿ ದೀಪಾವಳಿಯನ್ನು ಕೂಡ ತಾವು ರೂಡಿಸಿಕೊಂಡು ಬಂದಂತೆ ಯೋಧರೊಂದಿಗೆ ಗಡಿಯಲ್ಲಿ ಆಚರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಈ ವರ್ಷ ಮೋದಿ ಅವರು ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ರಾಜೌರಿಯಲ್ಲಿ ದೀಪಾವಳಿ ಆಚರಿಸಲು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕಣಿವೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಆಗಸ್ಟ್ 5ರಂದು ರದ್ದುಗೊಳಿಸಿದ ಬಳಿಕ ರಾಜ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಕಳೆದೆರಡು ತಿಂಗಳುಗಳಿಂದ ಜಮ್ಮು-ಕಾಶ್ಮೀರಕ್ಕೆ ಹೆಚ್ಚಿನ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ. ಅಲ್ಲದೆ ಇತ್ತೀಚೆಗೆ ಕಣಿವೆ ರಾಜ್ಯದಲ್ಲಿ ಉಗ್ರರ ಅಟ್ಟಹಾಸ ಕೂಡ ಹೆಚ್ಚಾಗುತ್ತಿರುವ ಬಗ್ಗೆ ವರದಿಯಾಗಿದೆ.