ಕೊಪ್ಪಳ: ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಗಂಟೆ ಸದ್ದನ್ನು ಬಂದು ಮಾಡುವಂತೆ ಜಿಲ್ಲಾ ಚುನಾವಣಾ ಆಯೋಗದ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ನಗರದ ಬಸವೇಶ್ವರ ವೃತ್ತದಲ್ಲಿ ಅಳವಡಿಸಿರುವ ಗಡಿಯಾರ ಗಂಟೆಗೊಮ್ಮೆ ಸದ್ದು ಮಾಡುತ್ತದೆ. ಈ ಗಂಟೆಯ ಧ್ವನಿಯಿಂದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳರಿಗೆ ಓಟ್ ಹೋಗುತ್ತದೆ. ಈ ಕಾರಣದಿಂದ ಗಡಿಯಾರ ಗಂಟೆಯ ಧ್ವನಿಯನ್ನು ನಿಲ್ಲಿಸಬೇಕೆಂದು ಬಿಜೆಪಿ ಮುಖಂಡರು ಕೊಪ್ಪಳ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಬಿಜೆಪಿ ಆಕ್ಷೇಪ ಏನು?
ನಗರದ ಮುಖ್ಯರಸ್ತೆಯಲ್ಲಿರುವ ಬಸವೇಶ್ವರ ವೃತ್ತದಲ್ಲಿ 20 ಲಕ್ಷರೂಪಾಯಿ ವೆಚ್ಚದಲ್ಲಿ ಶಾಸಕರು ಕೊಡುಗೆ ಗಡಿಯಾರ ಮತ್ತು ಗೋಪುರ ನೀಡಿದ್ದಾರೆ. ಈ ಗಂಟೆ ಇದೀಗ ಪ್ರತೀ ಗಂಟೆಗೊಮ್ಮೆ ಭಾರಿಸುವುದರಿಂದ ಮತದಾರರ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೇ ಈ ಗಂಟೆಯ ಸದ್ದು ಶಾಸಕರ ಕೊಡುಗೆಯನ್ನು ನೆನಪು ಮಾಡಿಕೊಡುತ್ತದೆ. ಈ ಕಾರಣಕ್ಕಾಗಿ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಚುನಾವಣೆ ಮುಗಿಯುವವರೆಗೂ ಗಂಟೆ ಭಾರಿಸುವುದನ್ನು ನಿಲ್ಲಿಸಬೇಕೆಂದು ದೂರಿನಲ್ಲಿ ಮುಖಂಡರು ವಿನಂತಿಸಿಕೊಂಡಿದ್ದಾರೆ.
ಸದ್ಯ ಚುನಾವಣೆ ಅಧಿಕಾರಿಗಳು ದೂರನ್ನು ಪರಿಗಣಿಸಿ, ಗಡಿಯಾರದಲ್ಲಿ ಹಾಕಲಾಗಿರುವ ಶಾಸಕರ ಫೋಟೊವನ್ನ ಮರೆಮಾಚಿದ್ದಾರೆ. ಆದ್ರೆ ಗಂಟೆಯ ಧ್ವನಿ ನೀತಿ ಸಂಹಿತೆಗೆ ಒಳಪಡುವುದಿಲ್ಲ. ಹೀಗಾಗಿ ಧ್ವನಿಯನ್ನ ನಿಲ್ಲಿಸುವುದಿಲ್ಲ ಮತ್ತು ಇದು ಸಮಂಜಸವಾದ ದೂರು ಅಲ್ಲ ಎಂದು ಕೊಪ್ಪಳ ಚುನಾವಣಾಧಿಕಾರಿ ಗೀತಾ ಸ್ಪಷ್ಟನೆ ನೀಡಿದ್ದಾರೆ.