ರಾಯಚೂರು: ಈ ಹಿಂದೆ ಕಾಣಿಸಿಕೊಳ್ಳುತ್ತಿದ್ದ ಗಂಟಲು ಮಾರಿ ರೋಗ ಅಥವಾ ಡಿಫ್ತಿರಿಯಾ ಹಲವಾರು ವರ್ಷಗಳಿಂದ ಸಂಪೂರ್ಣ ಮಾಯವಾಗಿತ್ತು. ಆದ್ರೆ ಕಳೆದ ಎರಡು ತಿಂಗಳಿಂದ ರಾಯಚೂರಿನಲ್ಲಿ ಕಾಣಿಸಿಕೊಂಡಿದ್ದು, ನಾಲ್ಕು ಮಕ್ಕಳನ್ನ ಬಲಿ ತೆಗೆದುಕೊಂಡಿದೆ. 50 ಕ್ಕೂ ಹೆಚ್ಚು ಮಕ್ಕಳು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಡಿಫ್ತಿರಿಯಾ ಅಂಟುರೋಗವಾಗಿರುವುದರಿಂದ ಜಿಲ್ಲೆಯಲ್ಲಿ ಆತಂಕದ ಪರಸ್ಥಿತಿ ನಿರ್ಮಾಣವಾಗಿದೆ.
ಚಿಕ್ಕಮಕ್ಕಳಿಗೆ ನಾನಾ ಲಸಿಕೆ, ಚುಚ್ಚುಮದ್ದುಗಳನ್ನ ಹಾಕಿಸಲಾಗುತ್ತೆ ಅದರಲ್ಲಿ ಡಿಪಿಟಿಯೂ ಒಂದು. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಹಾಕುವ ಈ ಚುಚ್ಚುಮದ್ದನ್ನ ಹೆತ್ತವರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಹಾಕಿಸಲೇಬೇಕು. ಯಾಕಂದ್ರೆ ಡಿಫ್ತಿರಿಯಾ ಅಥವಾ ಗಂಟಲು ಮಾರಿ ಅಂತ ಕರೆಯಿಸಿಕೊಳ್ಳುವ ರೋಗ ಚಿಕ್ಕಮಕ್ಕಳಲ್ಲಿ ಈಗ ಪುನಃ ಕಾಣಿಸಿಕೊಳ್ಳುತ್ತಿದೆ.
Advertisement
ರಾಯಚೂರಿನ ರಿಮ್ಸ್ ಆಸ್ಪತ್ರೆಯೊಂದರಲ್ಲೇ ಎರಡು ತಿಂಗಳಲ್ಲಿ 4 ಮಕ್ಕಳು ಸಾವನ್ನಪ್ಪಿವೆ. 50 ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲಾಗಿವೆ. 30 ಮಕ್ಕಳ ಮಾದರಿಯನ್ನ ಪರೀಕ್ಷೆಗೊಳಪಡಿಸಲಾಗಿದ್ದು 11 ಮಕ್ಕಳಲ್ಲಿ ಗಂಟಲು ಮಾರಿ ರೋಗ ಪತ್ತೆಯಾಗಿದೆ. ಮಕ್ಕಳು ಜನಿಸಿದ ಬಳಿಕ ಒಂದುವರೆ ತಿಂಗಳು, ಎರಡುವರೆ ತಿಂಗಳು, ಮೂರುವರೆ ತಿಂಗಳು, 18 ನೇ ತಿಂಗಳು ಹಾಗೂ 5 ವರ್ಷವಿದ್ದಾಗ ಡಿಪಿಟಿ ಚುಚ್ಚುಮದ್ದು ಕೊಡಿಸಲೇಬೇಕು. ನಾನಾ ಕಾರಣಕ್ಕೆ ಪೋಷಕರು ಮರೆತ ಪರಿಣಾಮ ಮಕ್ಕಳಲ್ಲಿ ಮಾರಕ ರೋಗ ಕಾಣಿಸಿಕೊಂಡಿದೆ.
Advertisement
ಬಾಧಿತ ಮಕ್ಕಳಲ್ಲಿ ಕೆಮ್ಮು, ಜ್ವರದಂತಹ ಲಕ್ಷಣದ ಜೊತೆಗೆ ಹೃದಯಾಘಾತ, ಉಸಿರಾಟ ತೊಂದರೆ, ನರ ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಚುಚ್ಚುಮದ್ದು ಹಾಕಿಸದ ಮಕ್ಕಳಲ್ಲಿ 5 ವರ್ಷಕ್ಕೆ ಕಾಣಿಸಿಕೊಳ್ಳುವ ರೋಗ 10 ವರ್ಷದ ಮಕ್ಕಳಲ್ಲಿ ಕಾಣಿಸುತ್ತಿದೆ. ರೋಗಕ್ಕೆ ತುತ್ತಾಗಿರುವ ಮಕ್ಕಳಿಗೆ ಟೈಟಾನಸ್, ಡಿಫ್ತಿರಿಯಾ ಚುಚ್ಚುಮದ್ದನ್ನ ನೀಡಲಾಗುತ್ತಿದೆ. ಮಕ್ಕಳಲ್ಲಿ ಸಾಮಾನ್ಯ ಕೆಮ್ಮು, ಜ್ವರ ಬಂದರೂ ನಿರ್ಲಕ್ಷ್ಯ ಮಾಡಬೇಡಿ ಅಂತ ವೈದ್ಯರು ಪೋಷಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.
Advertisement
ಗಂಟಲು ಮಾರಿ ರೋಗ ಅಂಟುರೋಗವಾಗಿರುವುದರಿಂದ ಹೆಚ್ಚಿನ ಆತಂಕ ಸೃಷ್ಟಿಸಿದೆ. ಕೂಡಲೇ ಚಿಕ್ಕಮಕ್ಕಳಿಗೆ ಡಿಪಿಟಿ ಚುಚ್ಚುಮದ್ದು ಹಾಕಿಸಲು ವೈದ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ. ಅಲ್ಲದೆ ರಿಮ್ಸ್ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಪ್ರಮಾಣದ ಡಿಪಿಟಿ ಹಾಗೂ ಟಿಡಿ ಚುಚ್ಚುಮದ್ದನ್ನ ಸಂಗ್ರಹಿಸಿಟ್ಟುಕೊಳ್ಳಲಾಗುತ್ತಿದೆ.
Advertisement