ಬೆಂಗಳೂರು: ಕಳೆದೊಂದು ವಾರದಿಂದ ಪರಪ್ಪನ ಅಗ್ರಹಾರದಲ್ಲಿರುವ ದುನಿಯಾ ವಿಜಿ, ಜೈಲಿನಿಂದ ಹೊರ ಬರ್ತಾರೋ ಇಲ್ವೋ ಅನ್ನೋದು ಇಂದು ನಿರ್ಧಾರವಾಗಲಿದೆ. ಇಂದು 8ನೇ ಎಸಿಎಂಎಂ ಕೋರ್ಟ್ ಜಂಗ್ಲಿಯ ಜಾಮೀನು ಅರ್ಜಿ ತೀರ್ಪು ನೀಡಲಿದೆ. ಈ ನಡುವೆ ಎರಡನೇ ಪತ್ನಿಗೆ ಭದ್ರತೆ ನೀಡುವಂತೆ ವಿಜಿ ಪೊಲೀಸರಿಗೆ ಪತ್ರ ಬರೆದಿದ್ದಾರೆ.
ಜಿಮ್ ಟ್ರೈನರ್ ಮಾರುತಿ ಗೌಡನನ್ನು ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ 8ನೇ ಎಸಿಎಂಎಂ ಕೋರ್ಟ್ ಇಂದಿಗೆ ತೀರ್ಪು ಮುಂದೂಡಿತ್ತು. ಇಂದು ಮಧ್ಯಾಹ್ನ 3 ಗಂಟೆಗೆ 8ನೇ ಎಸಿಎಂಎಂ ಕೋರ್ಟ್ ಜಾಮೀನು ಅರ್ಜಿಯ ತೀರ್ಪು ಪ್ರಕಟಿಸಲಿದೆ.
ಇನ್ನು ಹಲ್ಲೆಗೊಳಗಾದ ಮಾರುತಿ ಗೌಡ ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಹಾಗಾಗಿ ದುನಿಯಾ ವಿಜಿ ಜಾಮೀನು ಸಿಗೋ ನಿರೀಕ್ಷೆಯಲ್ಲಿದ್ದಾರೆ. ಇತ್ತ ಸೆಲೆಬ್ರಿಟಿ ಎಂಬ ಕಾರಣಕ್ಕೆ ಈ ಪ್ರಕರಣವನ್ನು ದೊಡ್ಡದು ಮಾಡಿದ್ದಾರೆ. ಇವರೇನು ರೌಡಿ ಅಲ್ಲ ಆಕಸ್ಮಿಕವಾಗಿ ಆದ ಜಗಳ ಅಂತಾ ದುನಿಯಾ ವಿಜಿ ಪರ ವಕೀಲರು ವಾದಿಸಿದ್ದರು.
ಇದೆಲ್ಲದರ ನಡುವೆ ದೊಡ್ಡೆಂಡ್ತಿ-ಚಿಕ್ಕೆಂಡ್ತಿ ಗಲಾಟೆಯಿಂದ ಜೈಲಲ್ಲೂ ಕಂಗಾಲಾಗಿರೋ ದುನಿಯಾ ವಿಜಯ್ ಇದೀಗ, ಕೀರ್ತಿಗೆ ಹೆಚ್ಚುಕಮ್ಮಿಯಾದ್ರೆ ನಾಗರತ್ನರವರೇ ನೇರ ಹೊಣೆ ಅಂತ ಸೆಂಟ್ರಲ್ ಜೈಲ್‍ನಿಂದಲೇ ಗಿರಿನಗರ ಪೊಲೀಸರಿಗೆ ವಿಜಯ್ ಪತ್ರ ಬರೆದಿದ್ದಾರೆ.
ಪತ್ರದಲ್ಲೇನಿದೆ?:
ಇಂದ
ಬಿ.ಆರ್.ವಿಜಯ್ ಕುಮಾರ್ ಸನ್ ಆಫ್ ಸಿ.ರುದ್ರಪ್ಪ
ಕೇಂದ್ರ ಕಾರಾಗೃಹ, ಬೆಂಗಳೂರು
ಮಾನ್ಯರೇ,
ವಿಷಯ: ನನ್ನ ಪತ್ನಿ ಕೀರ್ತಿ ಇವರಿಗೆ ಸೂಕ್ತ ಭದ್ರತೆ ಒದಗಿಸುವ ಕೋರಿ
ನನ್ನ ಪತ್ನಿ ಕೀರ್ತಿ ಕಳೆದ ಸೋಮವಾರ ನನ್ನನ್ನು ಭೇಟಿ ಮಾಡಲು ಕೇಂದ್ರ ಕಾರಾಗೃಹಕ್ಕೆ ಬಂದಿದ್ದು, ದಿನಾಂಕ 23/09/18ರಂದು ನಾಗರತ್ನರವರು ನನ್ನ ಪತ್ನಿ ಕೀರ್ತಿಯವರ ಮೇಲೆ ಹಲ್ಲೆ ನಡೆಸಿದ್ದಾರಂತೆ. ಇದರಿಂದ ನನ್ನ ಪತ್ನಿ ಕೀರ್ತಿಯವರು ತೀವ್ರ ಭಯಭೀತರಾಗಿರುತ್ತಾರೆ. ಹಾಗೂ ನನ್ನನ್ನು ಭೇಟಿ ಮಾಡಲು ಬರುವ ಸಮಯದಲ್ಲಿ ಕಾರ್ ಡ್ರೈವರ್ ಮಹಮ್ಮದ್‍ರವರಿಗೆ ಕರೆ ಮಾಡಿ ನಿನ್ನನ್ನು ಅಂದರೆ ಕೀರ್ತಿಯವರನ್ನು ಸುಮ್ಮನೆ ಬಿಡುವುದಿಲ್ಲ. ನೀನು ಮತ್ತೆ ಮನೆಗೆ ಬಂದರೆ ನಿನಗೆ ಒಂದು ಗತಿ ಕಾಣಿಸುತ್ತೇನೆ ಎಂದು ಧಮ್ಕಿ ಹಾಕಿರುತ್ತಾರೆ ಹಾಗೂ ಕೊಲೆ ಬೆದರಿಕೆಯೊಡ್ಡಿರುತ್ತಾರೆ. ಸುಮ್ಮನೆ ನನ್ನ ಪತ್ನಿ ಮೇಲೆ ಆರೋಪ ಮಾಡಿ ಪ್ರಕರಣ ದಾಖಲು ಮಾಡುತ್ತಿದ್ದು, ದಯಮಾಡಿ ನನ್ನ ಹೆಂಡತಿ ಕೀರ್ತಿಗೆ ಸೂಕ್ತ ಭದ್ರತಾ ವ್ಯವಸ್ಥೆ ನೀಡಬೇಕೆಂದು ತಮ್ಮಲ್ಲಿ ಕಳಕಳಿಯಿಂದ ಪ್ರಾರ್ಥಿಸುತ್ತಿದ್ದೇನೆ. ಹಾಗೂ ನನ್ನ ಪತ್ನಿ ಕೀರ್ತಿಯವರಿಗೆ ಪ್ರಾಣ ಬೆದರಿಕೆ ಇದ್ದು, ಸೂಕ್ತ ಭದ್ರತೆ ಒದಗಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ. ನನ್ನ ಪತ್ನಿ ಕೀರ್ತಿಯವರು ಮಾನಸಿಕ ಕಿರುಕುಳದಿಂದ ನೊಂದಿದ್ದು, ಮತ್ತೆ ಈ ರೀತಿಯ ಘಟನೆ ಜರುಗಿದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿರುತ್ತಾರೆ. ನನ್ನ ಪತ್ನಿ ಕೀರ್ತಿಯವರಿಗೆ ಏನಾದರೂ ತೊಂದರೆಯಾದಲ್ಲಿ ನಾಗರತ್ನರವರೇ ನೇರ ಹೊಣೆಗಾರರಾಗಿರುತ್ತಾರೆ.
ವಂದನೆಗಳೊಂದಿಗೆ
ಇಂತಿ ತಮ್ಮ ವಿಶ್ವಾಸಿ
ಬಿ.ಆರ್.ವಿಜಯ್ ಕುಮಾರ್
ಒಟ್ಟಿನಲ್ಲಿ ಇಂದು ದುನಿಯಾ ವಿಜಿಗೆ ಜಾಮೀನು ಸಿಕ್ಕರೆ ಬಿಗ್ ರಿಲೀಫ್ ಸಿಕ್ಕಂತಾಗಲಿದ್ದು, ಇಲ್ಲದೆ ಹೋದ್ರೆ ಇನ್ನಷ್ಟು ದಿನ ಜೈಲೂಟ ಗ್ಯಾರಂಟಿಯಾಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv