– ವಿಧಾನ ಪರಿಷತ್ ಅಥವಾ ರಾಜ್ಯಸಭೆಯ ಸದಸ್ಯತ್ವ ನೀಡಿ ಎಂದು ಮನವಿ
ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯತ್ವದಿಂದ ನನ್ನ ಹೆಸರು ಕೈಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿ (Akkai Padmashali) ಪತ್ರ ಬರೆದಿದ್ದಾರೆ.
ನಿನ್ನೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರನ್ನಾಗಿ ಅಕ್ಕಯ್ ಪದ್ಮಶಾಲಿ ಅವರನ್ನು ಸರ್ಕಾರ ಆಯ್ಕೆ ಮಾಡಿತ್ತು. ಈಗ ಸದಸ್ಯತ್ವ ಬೇಡ ಎಂದು ಸರ್ಕಾರಕ್ಕೆ ಅಕ್ಕಯ್ ಪದ್ಮಶಾಲಿ ಪತ್ರ ಬರೆದಿದ್ದಾರೆ.
ನಮ್ಮ ಸಮುದಾಯದ ಶೇಯೋಭಿವೃದ್ದಿಗಾಗಿ ಕರ್ನಾಟಕ ವಿಧಾನ ಪರಿಷತ್ ಅಥವಾ ರಾಜ್ಯಸಭೆಯ ಸದಸ್ಯತ್ವ ನೀಡಬೇಕಾಗಿ ಮನವಿ ಮಾಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯತ್ವ ನೀಡಿದ್ದಕ್ಕೆ ಸಂತೋಷ ಇದೆ. ಆದರೆ ನನ್ನ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ರಾಜಕೀಯ ಪ್ರಾತಿನಿಧ್ಯ ನೀಡುವಂತೆ ಕೋರಿದ್ದಾರೆ.
ಪತ್ರದಲ್ಲೇನಿದೆ?
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರನ್ನಾಗಿ ನನ್ನನ್ನು ಗುರುತಿಸಿ ಆಯ್ಕೆ ಮಾಡಿರುವುದಕ್ಕೆ ತಮಗೆ ಹಾಗೂ ತಮ್ಮ ನೇತೃತ್ವದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಆದರೆ ನನ್ನ ಸದಸ್ಯತ್ವವನ್ನು ಕೈಬಿಡಬೇಕಾಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ.
ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸಾಮಾಜಿಕ ಹಾಗೂ ರಾಜಕೀಯದ ವಿಚಾರವಾಗಿನ ನನ್ನ ಹೋರಾಟವು ಪ್ರಪಂಚದಾದ್ಯಂತ ಪಸರಿಸಿದೆ. ನಮ್ಮ ಸಮುದಾಯದ ಸಂಪೂರ್ಣ ಶ್ರೇಯೋಭಿವೃದ್ಧಿಗಾಗಿ ಹಾಗೂ ಸಾಮಾಜಿಕ ಬಹಿಷ್ಕಾರದ ವಿರುದ್ಧ ನನ್ನ ಹೋರಾಟ ಮುಂದುವರಿಸಲಿದ್ದೇನೆ.
ತಾವು ಇದರ ಬಗ್ಗೆ ಗಮನಹರಿಸಿ ನನ್ನನ್ನು ಮುಂಬರುವ ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಅಥವಾ ರಾಜ್ಯಸಭೆ ಸದಸ್ಯರನ್ನಾಗಿ ಸ್ಥಾನಮಾನ ನೀಡಿ. ಶಾಸನಸಭೆಯ ಭಾಗವಾಗಿ ನಮ್ಮ ಸಮುದಾಯದ ರಾಜಕೀಯ ಪ್ರಾತಿನಿಧ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟದ ನಾಡಿನಲ್ಲಿ ಸಾಕ್ಷಿಯಾಗಬೇಕಾಗಿರುವ ವಾತಾವರಣ ನಿರ್ಮಾಣವಾಗಬೇಕಿದೆ. ಇದರ ಬಗ್ಗೆ ತಾವು ವಿಶೇಷ ಕಾಳಜಿವಹಿಸಿ ಕ್ರಮವಹಿಸಿಬೇಕೆಂದು ವಿನಂತಿಸುತ್ತೇನೆ ಎಂದು ಅಕ್ಕಯ್ ಪದ್ಮಶಾಲಿ ಪತ್ರದಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ.