ಮಂಗಳೂರು: ಸರಣಿ ಕೊಲೆಗಳಿಂದ ಈ ಭಾಗದ ಜನರು ಆತಂಕದಿಂದ ಭಯದ ವಾತಾವರಣದಲ್ಲಿ ಇದ್ದಾರೆ. ಆತ್ಮವಿಶ್ವಾಸ ಮಾತು ಹಾಗೂ ಜನರು ನಿರ್ಭಯದಲ್ಲಿ ಓಡಾಡುವಂತಹ ಕೆಲಸ ಸರ್ಕಾರ ಮಾಡಬೇಕಿದೆ. ದಯವಿಟ್ಟು ಯಾರೂ ಪ್ರಚೋದನೆ ಕೊಡುವಂತಹ ಹೇಳಿಕೆ ಕೊಡಬೇಡಿ ಎಂದು ಮಾಜಿ ಸಚಿವ ಯು.ಟಿ ಖಾದರ್ ಮನವಿ ಮಾಡಿಕೊಂಡಿದ್ದಾರೆ.
ಸುರತ್ಕಲ್‍ನಲ್ಲಿ ಫಾಝಿಲ್ ಅಂತಿಮ ದರ್ಶನ ಪಡೆದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, 10 ದಿನಗಳ ಅಂತರದಲ್ಲಿ ಮೂವರ ಹತ್ಯೆ ನಡೆದಿದೆ. ಮತಾಂಧ ಶಕ್ತಿಗಳ ಅಟ್ಟಹಾಸಕ್ಕೆ ಮೂವರು ಅಮಾಯಕರು ಬಲಿಯಾಗಿದ್ದಾರೆ. ಈ ಸರ್ಕಾರದಿಂದ ಜನರಿಗೆ ರಕ್ಷಣೆ ಇಲ್ಲ ಎಂದು ಗೊತ್ತಾಗಿದೆ. ಫಾಝೀಲ್ ಎಂ.ಬಿ.ಎ ಮಾಡಿ ಫೈರ್ ಸೇಫ್ಟಿ ಕೋರ್ಸ್ ಮಾಡಿದ್ದ. ಉದ್ಯೋಗ ಸಿಗದೆ ಗ್ಯಾಸ್ ಲೋಡ್ ಅನ್ ಲೋಡಿಂಗ್ ಕೆಲಸ ಮಾಡ್ತಿದ್ದ. ಇಂತಹ ಅಮಾಯಕರ ಕೊಲೆಯಾಗಿದೆ. ಸರ್ಕಾರ ಇಂತಹ ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪರಿಹಾರ ನೀಡುವ ವಿಚಾರದಲ್ಲಿಯೂ ಸರ್ಕಾರ ತಾರತಮ್ಯ ಮಾಡಬಾರದು ಎಂದರು.
ನೈಜ್ಯ ಅಪರಾಧಿಗಳನ್ನ ಪತ್ತೆ ಹಚ್ಚುವಂತಹ ಕೆಲಸ ಸರ್ಕಾರ ಮಾಡಬೇಕು. ಈ ಘಟನೆಗಳಿಗೆ ಕುಮ್ಮಕ್ಕು ಕೊಟ್ಟವರು, ಸಹಕರಿಸಿದವರನ್ನ ಪತ್ತೆ ಹಚ್ಚುವಂತ ಕೆಲಸ ಸರ್ಕಾರ ಹಾಗೂ ಪೊಲೀಸರು ಮಾಡಬೇಕು. ಈ ಮೂಲಕ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಸರ್ಕಾರ ಯಾವುದೇ ತಾರತಮ್ಯ ಮಾಡದೆ ಸಮಾನತೆಯಿಂದ ಸರಣಿ ಕೊಲೆಗಳ ಬಗ್ಗೆ ತನಿಖೆ ನಡೆಸಬೇಕು. ಅವರಿಗೆ ಕೊಡುವ ಪರಿಹಾರದಲ್ಲೂ ತಾರತಮ್ಯ ಮಾಡದೆ ಸರ್ಕಾರದ ವಿಶ್ವಾಸ ಬರುವಂತ ಕೆಲಸ ಮಾಡಬೇಕು ಎಂದು ಹೇಳಿದರು.
ಇದು ಪೊಲೀಸರ ವೈಫಲ್ಯ ಅಲ್ಲ, ಸರ್ಕಾರದ ವೈಫಲ್ಯ. ಸರ್ಕಾರ ಹಸ್ತಕ್ಷೇಪ ಮಾಡದೆ ಪೊಲೀಸರಿಗೆ ಸ್ವಾತಂತ್ರ್ಯ ತನಿಖೆ ಮಾಡಲು ಬಿಡಬೇಕು. ಆಗ ಪೊಲೀಸರು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಾರೆ. ಸರ್ಕಾರ ಯಾವುದೇ ತಾರತಮ್ಯ ಇಲ್ಲದ, ಸೌಹರ್ದತೆ ನಿಲುವನ್ನ ತೆಗೆದುಕೊಳ್ಳಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಕೊಲೆಗಳಾದಾಗ ಯಾವ ರೀತಿ ನಿಭಾಯಿಸಬೇಕು ಅಂತಾ ನಮಗೆ ಗೊತ್ತಿದೆ: ಬೊಮ್ಮಾಯಿ ಕಿಡಿ
ಇದೇ ವೇಳೆ ಯುಪಿ ಮಾದರಿಯಲ್ಲಿ ಕಾನೂನು ಜಾರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಖಾದರ್, ಕರ್ನಾಟಕ ದೇಶಕ್ಕೇ ಮಾದರಿ. ಯುಪಿ ಮಾದರಿ ಏನು ಎಂದು ಅಲ್ಲಿ ಹೋದರೆ ಗೊತ್ತಾಗುತ್ತೆ. ನಾವು ಬೇರೆಯವರನ್ನ ನೋಡಿ ಕಲಿಯಬೇಕಿಲ್ಲ, ನಾವು ದೇಶಕ್ಕೆ ಮಾದರಿಯಾಗಬೇಕು. ನಾವು ಸರ್ಕಾರಕ್ಕೆ ಸಂಪೂರ್ಣ ಸಹಕಾರ ಕೊಡುತ್ತೇವೆ, ಧಿಟ್ಟವಾದ ನಿರ್ಧಾರ ತೆಗೆದುಕೊಳ್ಳಿ. ಪ್ರಚೋದನಕಾರಿ ಹೇಳಿಕೆ, ವಿಷ ಬೀಜ ಬಿತ್ತುವವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಮದು ಆಗ್ರಹಿಸಿದರು.