ಬಾಗಲಕೋಟೆ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಬಂಧನದ ವಿಚಾರವಾಗಿ ಮಾಧ್ಯಮಗಳು ಪ್ರಶ್ನೆ ಕೇಳಿದಾಗ ಡಿಸಿಎಂ ಗೋವಿಂದ ಕಾರಜೋಳ ಅದರ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದು ಕೈ ಮುಗಿದಿದ್ದಾರೆ.
ಮೊದಲು ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ನಾಡಿನ ಎಲ್ಲಾ ಶಿಕ್ಷಕರಿಗೆ ಶುಭಾಶಯ ತಿಳಿಸಿದರು. ಬಳಿಕ ಮಾಧ್ಯಮದವರು ಡಿ.ಕೆ ಶಿವಕುಮಾರ್ ಬಂಧನದ ಕುರಿತು ಪ್ರಶ್ನಿಸಿದಾಗ, ಕ್ಷಮಿಸಿ ಅದರ ಬಗ್ಗೆ ನನ್ನನ್ನು ಏನೂ ಕೇಳಬೇಡಿ. ಅಂತಹ ಯಾವುದೇ ಕಾಂಟ್ರವರ್ಸಿ ಪ್ರಶ್ನೆಗಳನ್ನ ಕೇಳಬೇಡಿ ಎಂದು ಕೈ ಮುಗಿದರು.
Advertisement
Advertisement
ನಾನು ಹೇಳುವುದೇ ಒಂದಾದರೆ, ನೀವು ಮಾಧ್ಯಮದಲ್ಲಿ ಬಿಂಬಿಸುವುದೇ ಬೇರೆ ಆಗಿರುತ್ತದೆ. ಅದಕ್ಕೆ ದಯವಿಟ್ಟು ಬೇಡ, ಮುಗಿದು ಹೋಗಿದೆ, ಕ್ಲೋಸ್ ಮಾಡಿ, ಏನೂ ಕೇಳಬೇಡಿ. ಕಾನೂನು ಪ್ರಕಾರ ಏನು ಆಗುತ್ತೋ ಅದೇ ಆಗುತ್ತದೆ. ನಾನು ಸಹಜವಾಗಿ ನಮ್ಮ ಉತ್ತರ ಕರ್ನಾಟಕದ ಆಡು ಭಾಷೆಯಲ್ಲಿ ಕೆಲವು ಶಬ್ದಗಳನ್ನು ಬಳಸಿರುತ್ತೇನೆ. ಆದರೆ ಮೀಡಿಯಾದವರು ಕನಕಪುರ ಬಂಡೆಗೆ ಡಿಚ್ಚಿ ಎಂದು ತೋರಿಸಿದರೆ, ನನ್ನ ಗತಿ ಏನು? ಅದು ಸರಿ ಅಲ್ಲ. ದಯವಿಟ್ಟು ಬೇಡ ಎಂದು ಪ್ರತಿಕ್ರಿಯಿಸಲು ನಿರಾಕರಿಸಿದರು.
Advertisement
ಈ ಹಿಂದೆ ಅಬಕಾರಿ ಸಚಿವ ನಾಗೇಶ್ ಅವರಿಗೆ ಡಿಕೆಶಿ ಬಗ್ಗೆ ಕೇಳಿದಾಗ, ಈ ಬಗ್ಗೆ ಸಿಎಂ ಆಗಲೇ ಮೂವರು ಸಚಿವರಿಗೆ ಹೇಳಿಕೆ ಕೊಡದಂತೆ ವಾರ್ನ್ ಮಾಡಿದ್ದಾರೆ. ಹೀಗಾಗಿ ಈ ಬಗ್ಗೆ ನಾನೇನು ಹೇಳಲ್ಲ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದರು.
Advertisement
ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ವಿಚಾರವಾಗಿ ಮಾತನಾಡಿ, ಎಲ್ಲ ಶಾಸಕರನ್ನು ಕರೆದು ಸಭೆ ಮಾಡಿ ಸೂಚನೆ ಕೊಟ್ಟಿದ್ದೇನೆ. ಯಾವುದೇ ತಾರತಮ್ಯ ಆಗಬಾರದು. ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಸಿಗುವಂತೆ ನೋಡಿಕೊಳ್ಳಲು ಸೂಚನೆ ಕೊಟ್ಟಿದ್ದೇನೆ. ಪದೇ ಪದೇ ಮೀಟಿಂಗ್ ಮಾಡುವುದರಿಂದ ಅಧಿಕಾರಿಗಳು ಕೆಲಸ ಮಾಡೋದಕ್ಕೆ ಆಗುವುದಿಲ್ಲ. ಒಂದು ವಾರ ಕಾಯಿರಿ ಎಲ್ಲವೂ ಸರಿಯಾಗುತ್ತದೆ. ನೇರವಾಗಿ ಮನೆ ಮನೆಗೆ ಹೋಗಿ ಅಧಿಕಾರಿಗಳು ಚೆಕ್ ಮಾಡಿ, ಪರಿಹಾರವನ್ನು ನೇರವಾಗಿ ಕೊಡುವಂತೆ ಸೂಚಿಸಿದ್ದೇವೆ ಎಂದು ತಿಳಿಸಿದರು.
ಮಧ್ಯಂತರ ಚುನಾವಣೆಗೆ ಸಿದ್ದರಾಮಯ್ಯ ಸಿದ್ಧತೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಸ್ವಾಭಾವಿಕ ಯಾಕೆಂದರೆ ಅವರು ಈಗ ಖಾಲಿ ಇದ್ದಾರೆ. ಮಧ್ಯಂತರ ಚುನಾವಣೆ ಜಪ ಮಾಡುತ್ತಿದ್ದಾರೆ. ಯಾವ ಕಾರಣಕ್ಕೂ ಮಧ್ಯಂತರ ಚುನಾವಣೆ ಬರೋದಿಲ್ಲ. ಯಡಿಯೂರಪ್ಪ ನಾಯಕತ್ವದಲ್ಲಿ ಬಿಜೆಪಿ ಸರ್ಕಾರದ ಅವಧಿ ಪೂರ್ಣಗೊಳಿಸುತ್ತದೆ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟರು.
ಮತ್ತೇ ಆಪರೇಷನ್ ಕಮಲ ವಿಚಾರವಾಗಿ ಪ್ರಶ್ನಿಸಿದಾಗ, ಬಿಜೆಪಿ ನಿಂತ ನೀರಲ್ಲ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಯಾರೇ ಪಕ್ಷದ ಸಿದ್ಧಾಂತಗಳನ್ನ ಒಪ್ಪಿ ಬಂದರೆ ಸ್ವಾಗತಿಸುತ್ತೇವೆ ಎಂದರು. ಈ ಹೇಳಿಕೆ ಮೂಲಕ ಮತ್ತಷ್ಟು ಶಾಸಕರು ಬಿಜೆಪಿಗೆ ಬರುವ ಪರೋಕ್ಷ ಸುಳಿವನ್ನು ಡಿಸಿಎಂ ಕೊಟ್ಟಿದ್ದಾರೆ.