Dakshina KannadaDistrictsKarnatakaLatestMain Post

ಶಿರಾಡಿ ಘಾಟ್ ರಸ್ತೆ ದುರಸ್ಥಿಗೆ ಮನವಿ- ಉದ್ಯಮಿಗಳಿಂದ ಸಂಸದ ವೀರೇಂದ್ರ ಹೆಗ್ಡೆಗೆ ಪತ್ರ

ಮಂಗಳೂರು: ಬಂದರು ನಗರಿ ಮಂಗಳೂರು (Mangaluru) ಹಾಗೂ ರಾಜ್ಯ ರಾಜಧಾನಿ ಬೆಂಗಳೂರು (Bengaluru) ಸಂಪರ್ಕಿಸುವ ಶಿರಾಡಿ ಘಾಟ್ ಹೆದ್ದಾರಿ ಸಂಪೂರ್ಣ ಹದಗೆಟ್ಟಿದೆ. ಇಲ್ಲಿನ ಹೊಂಡ ಗುಂಡಿಯ ರಸ್ತೆಯಿಂದಾಗಿ ಕೈಗಾರಿಕೋದ್ಯಮಿಗಳಿಗೆ ದೊಡ್ಡ ಮಟ್ಟದಲ್ಲೇ ಆರ್ಥಿಕ ಹೊಡೆತ ಬೀಳುತ್ತಿದೆ. ಇದೀಗ ಹೆದ್ದಾರಿ ರಿಪೇರಿಗಾಗಿ ಕೆನರಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಸಂಘಟನೆ ರಾಜ್ಯಸಭಾ ಸದಸ್ಯರು, ಧರ್ಮಸ್ಥಳ (Dharmasthala) ಧರ್ಮಾಧಿಕಾರಿ ಡಾ ಡಿ ವಿರೇಂದ್ರ ಹೆಗ್ಗಡೆಯವರ ಮೊರೆ ಹೋಗಿದ್ದಾರೆ.

ಮಂಗಳೂರು-ಬೆಂಗಳೂರಿನ ನಡುವೆ ಸಂಪರ್ಕ ಕಲ್ಪಿಸೋ ಅತ್ಯಂತ ಪ್ರಮುಖ ಹೆದ್ದಾರಿ ಶಿರಾಡಿ ಘಾಟ್ (Shiradi Ghat). ವಾಣಿಜ್ಯ ವ್ಯವಹಾರದ ದೃಷ್ಟಿಯಿಂದ ನಿತ್ಯ ನೂರಾರು ಟ್ಯಾಂಕರ್, ಟ್ರಕ್, ಬಸ್ ಮತ್ತಿತರ ವಾಹನಗಳು ಈ ಹೆದ್ದಾರಿಯಲ್ಲಿ ಸಂಚರಿಸುತ್ತವೆ. ರಾಜ್ಯದ ಅತ್ಯಂತ ವಾಹನದಟ್ಟನೆ ಹೊಂದಿರೋ ರಸ್ತೆಯೂ ಹೌದು. ಆದರೆ ಇದೀಗ ಶಿರಾಡಿ ಘಾಟ್ ರಸ್ತೆ ಅಂದ್ರೆ ಪ್ರಯಾಣಿಕರು ಬೆಚ್ಚಿ ಬೀಳ್ತಾರೆ. ಇದಕ್ಕೆ ಕಾರಣ ಇಲ್ಲಿನ ರಸ್ತೆಗುಂಡಿಗಳು. ಕಳೆದ ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದರೂ ಪರಿಹಾರ ಮಾತ್ರ ಕಂಡಿಲ್ಲ. ಹೀಗಾಗಿ ಮಂಗಳೂರಿನ ಕೆನರಾ ಚೇಂಬರ್ ಆಫ್ ಕಾರ್ಮಸ್ ಮತ್ತು ಇಂಡಸ್ಟ್ರಿ ಸಂಘಟನೆ (Kanara Chamber of Commerce & Industry) ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ ವಿರೇಂದ್ರ ಹೆಗ್ಗಡೆಯವರ ಮೊರೆ ಹೋಗಿದೆ.

ವಿರೇಂದ್ರ ಹೆಗ್ಗಡೆಯವರಿಗೆ ಪತ್ರದ ಮೂಲಕ ಮನವಿ ಮಾಡಿದ್ದು, ಕೇಂದ್ರ, ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಕೇಳಿಕೊಂಡಿದ್ದಾರೆ. ಹಾಸನ-ಸಕಲೇಶಪುರ-ದೋಣಿಗಲ್-ಮಾರಣಹಳ್ಳಿ ರಸ್ತೆಯನ್ನು ಚತುಷ್ಪಥ ಮಾಡುವಂತೆ ಬೇಡಿಕೆಯಿಟ್ಟಿದ್ದಾರೆ. ಮಾರಣಹಳ್ಳಿಯಿಂದ ಅಡ್ಡಹೊಳೆವರೆಗಿನ ಘಾಟ್ ರಸ್ತೆ, ಅಡ್ಡಹೊಳೆಯಿಂದ ಬಿ.ಸಿ.ರೋಡ್‍ವರೆಗಿನ ವ್ಯವಸ್ಥಿತ ರಸ್ತೆ ನಿರ್ಮಾಣ ಕಾರ್ಯ ಶೀಘ್ರ ಮುಗಿಸುವಂತೆ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಮಗನ ಅನಾರೋಗ್ಯ ನಿವಾರಿಸಿದ ಕೊರಗಜ್ಜನಿಗೆ ಉಕ್ರೇನ್ ಕುಟುಂಬದಿಂದ ಅಗೆಲು ಸೇವೆ

ಮಂಗಳೂರು ಪ್ರಮುಖ ವಾಣಿಜ್ಯ ಬಂದರನ್ನು ಹೊಂದಿರುವುದರಿಂದ ಹಡಗಿನಲ್ಲಿ ಬರುವ ಕಚ್ಛಾ ವಸ್ತುಗಳನ್ನು ಬೆಂಗಳೂರಿಗೆ ಸಾಗಾಟ ಮಾಡಲು ಸಾವಿರಾರು ಟ್ರಕ್ ಸಂಚರಿಸುತ್ತದೆ. ಆದ್ರೆ ಮಳೆಗಾಲದಲ್ಲಿ ರಸ್ತೆ ಕುಸಿತವಾಗಿ ತಿಂಗಳುಗಟ್ಟಲೆ ರಸ್ತೆ ಬ್ಲಾಕ್ ಆಗುವುದರಿಂದ ಕೈಗಾರಿಕೆಗಳಿಗೆ ಆರ್ಥಿಕವಾಗಿ ಹೊಡೆತ ಬೀಳುತ್ತಲಿದೆ. ಸದ್ಯ ಇನ್ನಾದರೂ ಈ ಹೆದ್ದಾರಿ ಸಂಕಷ್ಟ ಬಗೆಹರಿಯುತ್ತಾ ಎಂದು ಕಾದುನೋಡಬೇಕಾಗಿದೆ.

Live Tv

Leave a Reply

Your email address will not be published. Required fields are marked *

Back to top button