ಫೆ.1ರಂದು ಹಿನ್ನೆಲೆ ಗಾಯಕ, ಪದ್ಮಭೂಷಣ ಡಾ. ಎಸ್‍ಪಿಬಿಗೆ ಕಾಯಕಶ್ರೀ ಪ್ರಶಸ್ತಿ ಪ್ರಧಾನ

Public TV
2 Min Read
spb 1

ಬೆಳಗಾವಿ: ಕಾಯಕಯೋಗಿ ಲಿಂಗೈಕ್ಯ ಬಸವ ಮಹಾಸ್ವಾಮೀಜಿಯ 15ನೇ ಪುಣ್ಯಸ್ಮರಣೋತ್ಸವ ಹಾಗೂ 15ನೇ ಶರಣ ಸಂಸ್ಕೃತಿ ಉತ್ಸವ ಸಮಾರಂಭ ಫೆ.1ರಿಂದ 4ರವರೆಗೆ ನಗರದ ಶೂನ್ಯ ಸಂಪಾದನ ಮಠದಲ್ಲಿ ಅತೀ ವಿಜೃಂಭಣೆಯಿಂದ ಜರುಗಲಿದೆ ಎಂದು ಶರಣ ಸಂಸ್ಕೃತಿ ಉತ್ಸವ ಸಮಿತಿಯ ಅಧ್ಯಕ್ಷ ಈರಣ್ಣಾ ಕಡಾಡಿ ಹೇಳಿದರು.

ಸಮಿತಿಯ ಅಧ್ಯಕ್ಷ ಈರಣ್ಣಾ ಕಡಾಡಿ ಗುರುವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ 15ನೇ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದ ನಿಮಿತ್ಯ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಫೆ. 1ರಂದು ಸಂಜೆ 5 ಗಂಟೆಗೆ ಶ್ರೀಮಠದಿಂದ ನೀಡುವ 1 ಲಕ್ಷ ನಗದು, ಪ್ರಶಸ್ತಿ ಪತ್ರ ಒಳಗೊಂಡ ಕಾಯಕಶ್ರೀ ಪ್ರಶಸ್ತಿಗೆ ಈ ಬಾರಿ ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ನೀಡಿ ಗೌರವಿಸಲಾಗುವುದು.

blg spb

ಮುಂಜಾನೆ ನಗರದ ವಿದ್ಯಾರ್ಥಿಗಳಿಂದ ಅರಿವು, ಶಿಕ್ಷಣ, ಆರೋಗ್ಯ ಕಾಲ್ನಡಿಗೆ ಜಾಥಾ ಜರುಗಲಿದ್ದು, ನಂತರ ಘಟಸ್ಥಲ ಧ್ವಜಾರೋಹಣ ನಡೆಯಲಿದೆ. ಸಂಜೆ 6 ಗಂಟೆಗೆ ರೈತ ಸಮಾವೇಶ ಜರುಗಲಿದ್ದು, ಸಮಾವೇಶವನ್ನು ಐಎಎಸ್ ಅಧಿಕಾರಿ ಡಾ. ಅಶೋಕ ದಳವಾಯಿ ಉದ್ಘಾಟಿಸುವರು. ದಿವ್ಯ ಸಾನಿಧ್ಯವನ್ನು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿ ಹಾಗೂ ಬೆಳಗಾವಿ ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ವಹಿಸುವರು. ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಶರಣರಿಗೆ ಗೌರವ ಸನ್ಮಾನ ನಡೆಯಲಿದೆ ಎಂದರು.

ಫೆ. 2ರಂದು ಸಂಜೆ 6 ಗಂಟೆಗೆ ಧಾರ್ಮಿಕ ಸಮಾವೇಶ ಜರುಗಲಿದ್ದು, ಚಿತ್ರದುರ್ಗದ ಜಗದ್ಗುರು ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮೀಜಿ, ಮೈಸೂರಿನ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮೀಜಿ, ಕಾಗಿನೆಲೆ ಶ್ರೀ ಕನಕ ಗುರುಪೀಠದ ಜಗದ್ಗುರು ನಿರಂಜನಾಂದಪುರಿ ಮಹಾಸ್ವಾಮೀಜಿ, ಹರಿಹರದ ಜಗದ್ಗುರು ವೇಮನಾನಂದ ಮಹಾಸ್ವಾಮೀಜಿ, ಚಿತ್ರದುರ್ಗದ ಜಗದ್ಗುರು ಇಮ್ಮಡಿ ಶ್ರೀ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ಹಾಗೂ ಜಗದ್ಗುರು ಬಸವಮಾಚಿದೇವ ಮಹಾಸ್ವಾಮೀಜಿ, ಹೊಸದುರ್ಗದ ಭಗೀರಥ ಗುರುಪೀಠದ ಜಗದ್ಗುರು ಡಾ, ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ, ಚಿತ್ರದುರ್ಗದ ಜಗದ್ಗುರು ಡಾ. ಬಸವಕುಮಾರ ಸ್ವಾಮೀಜಿ ಆಗಮಿಸುವರು. ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಶರಣರಿಗೆ ಗೌರವ ಸನ್ಮಾನ ಜರುಗಲಿದೆ ಎಂದು ತಿಳಿಸಿದರು.

spb

ಫೆ. 3ರಂದು ಸಂಜೆ 6 ಗಂಟೆಗೆ ಶ್ರೀಮಠದಿಂದ ನೀಡುವ ಕಾಯಕಶ್ರೀ ಪ್ರಶಸ್ತಿಯನ್ನು ಮಹಿಳಾ ವಿಜ್ಞಾನಿ ಭಾರತದ ಕ್ಷಿಪಣಿ ಮಹಿಳೆ ಎಂದು ಪ್ರಸಿದ್ಧಿ ಪಡೆದ ಡಾ. ಟೆಸ್ಸಿ ಥಾಮಸ್ ಅವರಿಗೆ ನೀಡಿ ಗೌರವಿಸಲಾಗುವುದು. ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಶರಣರಿಗೆ ಗೌರವ ಸನ್ಮಾನ ಜರುಗಲಿದೆ. ಫೆ. 4ರಂದು ಮುಂಜಾನೆ ಶ್ರೀಮಠದ ಕರ್ತೃ ಗದ್ದುಗೆಗೆ ಅಭಿಷೇಕ ಹಾಗೂ ಬಿಲ್ವಾರ್ಚನೆ, ಸಹಸ್ರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಪಲ್ಲಕ್ಕಿ ಉತ್ಸವ, ಕುಂಭಮೇಳ, ಮಧ್ಯಾಹ್ನ ಮಹಾಪ್ರಸಾದ ಜರುಗಲಿದೆ.

ಸಂಜೆ 6 ಗಂಟೆಗೆ ಯುವ ಸಮಾವೇಶ ಕಾರ್ಯಕ್ರಮದ ದಿವ್ಯ ಸಾನಿಧ್ಯ ಇಳಕಲ್ ವಿಜಯಮಹಾಂತೇಶ್ವರ ಮಹಾಸಂಸ್ಥಾನಮಠದ ಗುರು ಮಹಾಂತ ಮಹಾಸ್ವಾಮೀಜಿ ವಹಿಸುವರು. ಶಿಗ್ಗಾಂವದ ಶ್ರೀ ಸಂಗನಬಸವ ಸ್ವಾಮೀಜಿ, ಮಹಾಗಾಂವದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಆಗಮಿಸುವರು. ವಿಹಿಂಪ ರಾಷ್ಟ್ರ ಸೇವಕ ಗೋಪಾಲಜೀ ಇವರಿಂದ ಉಪನ್ಯಾಸ ಜರುಗಲಿದೆ. ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಶರಣರಿಗೆ ಗೌರವ ಸನ್ಮಾನ ಜರುಗಲಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *