ಉಡುಪಿ: ದೃಷ್ಠಿಯಿಲ್ಲದೆ ರಿಯಾಲಿಟಿ ಶೋ ಗೆದ್ದ ಛಲದಂಕ ಮಲ್ಲ, ಸಾಧನೆಯ ಮೂಲಕ ಪ್ಲೇ ಬ್ಯಾಕ್ ಸಿಂಗರ್ ಆಗಿರುವ ಮೆಹಬೂಬ್ ಸಾಬ್ ಅವರು ಕನ್ನಡ ನಾಡಿನಲ್ಲಿ ಮನೆಮಾತಾಗಿದ್ದಾರೆ. ಆದ್ರೆ ಇದೀಗ ಅವರಿಗೆ ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಭೇಟಿ ಮಾಡಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಕತ್ತಲೆಕೋಣೆ ಚಿತ್ರತಂಡದ ಜೊತೆ ನಡೆದ ಸಂವಾದದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮೆಹಬೂಬ್, ಬೆಂಗಳೂರಿನಲ್ಲಿ ಎಲ್ಲಾದ್ರೂ ಅಂಬರೀಶ್ ಅವರನ್ನು ಭೇಟಿಯಾಗಬೇಕು ಅಂತ ಹೇಳಿದ್ರು.
ಮೆಹಬೂಬ್ ಅವರಿಗೆ ಈಗಾಗಲೇ ನಾಲ್ಕು ಸಿನೆಮಾಗಳಿಗೆ ಆಫರ್ ಸಿಕ್ಕಿದ್ದು, ಜೀವನವನ್ನು ರೂಪಿಸುವತ್ತ ಮೆಹಬೂಬ್ ಸಾಬ್ ಮುನ್ನಡೆಯುತ್ತಿದ್ದಾರೆ. ಆದ್ರೆ ಹಲವು ದಿನಗಳಿಂದ ಮೆಹಬೂಬ್ ಅವರಿಗೆ ನಟ ಅಂಬರೀಶ್ ಅವರನ್ನು ಭೇಟಿ ಮಾಡುವ ಕನಸು ಕನಸಾಗಿಯೇ ಉಳಿದಿದೆ. ಒಂದು ಸಾರಿ ಅಂಬಿಯನ್ನು ಮುಟ್ಟಿ ಹತ್ತಿರ ನಿಂತು ಮಾತನಾಡಿಸಬೇಕು ಅಂತ ಇದೀಗ ಅವರು ಹೇಳುತ್ತಿದ್ದಾರೆ.
ರಿಯಾಲಿಟಿ ಶೋ ಸಂದರ್ಭ ಅಂಬರೀಶ್ ಅವರು ಮೆಹಬೂಬ್‍ಗೆ 50 ಸಾವಿರ ರೂಪಾಯಿ ಧನ ಸಹಾಯ ಮಾಡಿದ್ದರು. ಆದ್ರೆ ಯಾರು ಸಹಾಯ ಮಾಡಿದ್ದು ಅಂತ ಗಾಯಕನಿಗೆ ಹೇಳಬೇಡಿ ಅಂದಿದ್ದರು. ಹೇಗೋ ಗೊತ್ತು ಮಾಡಿಕೊಂಡ ಮೆಹಬೂಬ್ ಇದೀಗ ಅಂಬರೀಶ್ ಭೇಟಿ ಕುರಿತಾದ ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಮದುವೆಗಿನ್ನೂ ನಾಲ್ಕು ವರ್ಷ ಟೈಂ ಇದೆ. ತಾನೊಂದು ಸಂಗೀತ ಶಾಲೆ ತೆರೆಯಬೇಕು ಎಂಬ ಧ್ಯೇಯವನ್ನೂ ಇಟ್ಟುಕೊಂಡಿರುವ ಬಗ್ಗೆ ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಮೆಹಬೂಬ್ ತಮ್ಮ ಇಷ್ಟದ ಹಾಡುಗಳನ್ನು ಹಾಡಿದ್ದಾರೆ, ಜೀವನಗಾಥೆಯನ್ನು ಬಿಚ್ಚಿಟ್ಟಿದ್ದಾರೆ. ಇದಾದ ನಂತರ ಮೆಹಬೂಬ್, ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿಕೊಟ್ಟು ಕೃಷ್ಣನ ಸಾನಿಧ್ಯದಲ್ಲೂ ಸಂಗೀತ ಸೇವೆ ನೀಡಿದರು. ಕನಕನ ಕಿಂಡಿ ಮತ್ತು ನವಗ್ರಹ ಕಿಂಡಿ ಮೂಲಕ ಕೃಷ್ಣನಿಗೆ ನಮಸ್ಕರಿಸಿದರು. ಪರ್ಯಾಯ ಪಲಿಮಾರು ಮಠಾಧೀಶರನ್ನು ಭೇಟಿ ಮಾಡಿ ಕೃಷ್ಣಪ್ರಸಾದ ಸ್ವೀಕಾರ ಮಾಡಿದರು.