ಚಾಮರಾಜನಗರ: “ಪ್ಲಾಸ್ಟಿಕ್ ಬ್ಯಾಗ್ ಹಾಗೂ ವಸ್ತುಗಳನ್ನು ತಂದುಕೊಡಿ, ಆಕರ್ಷಕ ಬಹುಮಾನ ಪಡೆಯಿರಿ” ಎಂದು ಚಾಮರಾಜನಗರ ನಗರಸಭೆ ಪ್ಲಾಸ್ಟಿಕ್ ಸಂಗ್ರಹಣೆಗೆ ಹೊಸ ಅಭಿಯಾನವನ್ನು ಪ್ರಾರಂಭಿಸಿದೆ.
ಕೇಂದ್ರ ಸರ್ಕಾರದ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದಡಿ ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ಸಾರ್ವಜನಿಕರನ್ನು ಪ್ರೋತ್ಸಾಹಿಸಲು ಚಾಮರಾಜನಗರ ನಗರಸಭೆ ವಿಭಿನ್ನ ರೀತಿಯ ಪ್ಲಾಸ್ಟಿಕ್ ಸಂಗ್ರಹಣೆಯನ್ನು ಆಯೋಜಿಸಿದೆ.
Advertisement
Advertisement
ಮನೆಯಲ್ಲಿರುವ ಪ್ಲಾಸ್ಟಿಕ್ ಚೀಲ, ಬಳಕೆಗೆ ಯೋಗ್ಯವಲ್ಲದ ಪ್ಲಾಸ್ಟಿಕ್ ವಸ್ತುಗಳನ್ನು ತಂದು ಕೊಟ್ಟರೆ ಚಾಮರಾಜನಗರ ನಗರಸಭೆ ಆಕರ್ಷಕ ಬಹುಮಾನಗಳನ್ನು ನೀಡುತ್ತಿದೆ. ಇದಕ್ಕಾಗಿ ನಗರದ 31 ವಾರ್ಡ್ ಗಳಲ್ಲೂ ಪ್ರತಿ ದಿನ ಒಂದೊಂದು ವಾರ್ಡಿನಲ್ಲಿ ಪ್ಲಾಸ್ಟಿಕ್ ಸಂಗ್ರಹಣಾ ಮಳಿಗೆ ತೆರೆಯುತ್ತಿದೆ. ಗೃಹಿಣಿಯರು ಪ್ಲಾಸ್ಟಿಕ್ ಚೀಲ ಹಾಗೂ ಇತರ ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಬೀಸಾಡದೆ ಈ ಮಳಿಗೆಗೆ ತಂದು ಕೊಟ್ಟರೆ ಅಂತಹವರಿಗೆ ಕಾಲುಂಗುರ, ಕಿವಿಯೋಲೆ, ಸರ, ಪರ್ಸ್, ಹೇರ್ ಬ್ಯಾಂಡ್, ಹೇರ್ ಕ್ಲಿಪ್, ಮೆಹಂದಿ ಇತ್ಯಾದಿ ಆಕರ್ಷಕ ವಸ್ತುಗಳನ್ನು ಬಹುಮಾನವಾಗಿ ನೀಡಲಾಗುತ್ತಿದೆ.
Advertisement
ಈ ಆಕರ್ಷಕ ಬಹುಮಾನ ಪಡೆಯಲು ಒಂದು ಸುಲಭವಾದ ಷರತ್ತು ಪೂರೈಸಬೇಕು. ಕನಿಷ್ಠ 50 ಗ್ರಾಂ. ಗಿಂತ ಹೆಚ್ಚು ಪ್ಲಾಸ್ಟಿಕ್ ವಸ್ತಗಳನ್ನು ಸಂಗ್ರಹಣಾ ಮಳಿಗೆಗೆ ತಂದು ಕೊಡಬೇಕು. ಅಂತಹವರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತಿದೆ.
Advertisement
ದೀಪಾವಳಿ ಅಂಗವಾಗಿ ವಿವಿಧ ಶೋ ರೂಂಗಳು, ಕಂಪನಿಗಳು, ವ್ಯಾಪಾರಸ್ಥರು ಆಕರ್ಷಕ ಬಹುಮಾನ ಪ್ರಕಟಿಸುವುದು ಸಾಮಾನ್ಯ. ಆದರೆ ಚಾಮರಾಜನಗರ ನಗರಸಭೆ ಪ್ಲಾಸ್ಟಿಕ್ ತಂದು ಕೊಟ್ಟವರಿಗೆ ದೀಪಾವಳಿ ಗಿಫ್ಟ್ ನೀಡುವ ಮೂಲಕ ಪ್ಲಾಸ್ಟಿಕ್ ಸಂಗ್ರಹಣಾ ಮಹೋತ್ಸವ ಆಚರಿಸುತ್ತಿದೆ. ಈ ಮೂಲಕ ಪ್ಲಾಸ್ಟಿಕ್ ಮುಕ್ತ ಭಾರತ ಕನಸನ್ನು ನನಸು ಮಾಡುವುದಕ್ಕೆ ಮೊದಲ ಹೆಜ್ಜೆಯನ್ನಿಟ್ಟಿದೆ.