ಪ್ಲಾಸ್ಟಿಕ್ ಬ್ಯಾಗ್ ನಿಷೇಧ ತಂತು ಮಹಿಳಾ ಸಂಘಗಳಿಗೆ ಅದೃಷ್ಟ!

Public TV
2 Min Read
KWR PLASTIC

– ದಿನಕ್ಕೆ 1,200 ರೂ. ದುಡಿಯುತ್ತಿದ್ದಾರೆ ಬಡ ಮಹಿಳೆಯರು

ಕಾರವಾರ: ಕೇಂದ್ರ ಸರ್ಕಾರ ಪ್ಲಾಸ್ಟಿಕ್ ನಿಷೇಧವನ್ನು ಕಠಿಣವಾಗಿ ಜಾರಿಗೆ ತಂದಿದೆ. ಪರಿಣಾಮ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿ ಬಟ್ಟೆ ಹಾಗೂ ಪೇಪರ್ ಬ್ಯಾಗ್‍ಗಳಿಗೆ ಈಗ ಬೇಡಿಕೆ ಹೆಚ್ಚಾಗಿದೆ. ಆದರೆ ಈ ಬ್ಯಾಗುಗಳು ಅಂಗಡಿಗಳಿಂದ ಕೊಂಡುಕೊಳ್ಳುವ ಗ್ರಾಹಕರಿಗೆ ಹಾಗೂ ಅಂಗಡಿಯವರಿಗೆ ತುಟ್ಟಿಯಾಗುತಿತ್ತು. ಇದರಿಂದಾಗಿ ಕದ್ದುಮುಚ್ಚಿ ಪ್ಲಾಸ್ಟಿಕ್ ಬ್ಯಾಗ್‍ಗಳು ಬಿಕರಿಯಾಗುತಿತ್ತು. ಇದನ್ನು ಮನಗಂಡ ಕಾರವಾರ ನಗರಸಭೆ ಆಡಳಿತ ಪ್ರತಿ ದಿನ ಅಂಗಡಿಗಳಿಗೆ ದಾಳಿ ನಡೆಸಿ ಈ ವರೆಗೆ ಎರಡು ಕ್ವಿಂಟಾಲ್ ಪ್ಲಾಸ್ಟಿಕ್ ಬ್ಯಾಗ್ ವಶಪಡಿಸಿಕೊಂಡರೆ, ಉಪಯೋಗಿಸಿ ಬಿಸಾಡಿದ ಪ್ಲಾಸ್ಟಿಕ್ ಸಂಗ್ರಹಿಸಿ ಈಗಾಗಲೇ 40 ಟನ್ ಪ್ಲಾಸ್ಟಿಕ್ ಅನ್ನು ರೀ ಸೈಕ್ಲಿಂಗ್ ಮಾಡಿ ದಾಲ್ಮಿಯ ಸಿಮೆಂಟ್ ಕಾರ್ಖಾನೆಗೆ ಕಳುಹಿಸಿದೆ.

Plastic bag

ಪ್ರತಿ ದಿನ ಏಳು ಕ್ವಿಂಟಾಲ್ ನಷ್ಟು ಪ್ಲಾಸ್ಟಿಕ್ ತ್ಯಾಜ್ಯ ಕೇವಲ ಕಾರವಾರ ನಗರದಿಂದ ಉತ್ಪತ್ತಿಯಾಗುತ್ತದೆ. ಹೀಗಾಗಿ ಕಾರವಾರ ನಗರಸಭೆ ಆಯುಕ್ತ ಯೋಗೀಶ್ವರ್ ರವರು ಕಠಿಣ ಕ್ರಮ ಕೈಗೊಂಡಿದ್ದಾರೆ. ಆದರೂ ಹೋಟೆಲ್, ಬೀದಿ ಬದಿಯ ಅಂಗಡಿಗಳು ಕದ್ದುಮುಚ್ಚಿ ಪ್ಲಾಸ್ಟಿಕ್ ಮಾರಾಟವನ್ನು ಮಾಡಿ ಪ್ರತಿ ಬಾರಿ ಸಿಕ್ಕಿಕೊಂಡು ದಂಡ ತೆತ್ತುತಿದ್ದುದನ್ನು ಹಾಗೂ ಅವರ ಅನಿವಾರ್ಯತೆಯನ್ನು ಮನಗಂಡು ಬಟ್ಟೆ ಬ್ಯಾಗ್‍ಗಳನ್ನು ಅವರಿಗೆ ನೀಡುವ ನಿರ್ಧಾರ ತೆಗೆದುಕೊಂಡರು. ಇದರ ಪ್ರತಿಫಲವಾಗಿ ಹಾಗೂ ಬಡ ಮಹಿಳೆಯರಿಗೆ ಸಹಾಯ ಆಗುವಂತೆ ಕಾರವಾರ ನಗರದ ಮಹಿಳಾ ಸಹಕಾರ ಸಂಘ ಸಂಸ್ಥೆಯನ್ನು ಬ್ಯಾಗ್ ತಯಾರಿಕೆಗೆ ಪ್ರೇರೇಪಿಸಿದ್ದಲ್ಲದೇ ಅವರ ಮೂಲಕ ಬಟ್ಟೆ ಬ್ಯಾಗ್ ತಯಾರಿಸಿ ನೇರವಾಗಿ ನಗರಸಭೆಯೇ ಹೋಟೆಲ್ ಗಳಿಗೆ ಸೇರಿದಂತೆ ಅಂಗಡಿ ಮುಂಗಟ್ಟುಗಳಿಗೆ ಪ್ರತಿ ಬ್ಯಾಗಿಗೆ 3 ರೂ. ನಂತೆ ಕೊಂಡುಕೊಳ್ಳುವ ವೇದಿಕೆ ಒದಗಿಸಿಕೊಟ್ಟಿತು.

KWR

ಇದರ ಪ್ರತಿಫಲವಾಗಿ ಕಾರವಾರದ ಜೈ ಸಂತೋಷಿನಿ ಮಾತಾ ಮಹಿಳಾ ಸಹಕಾರ ಸಂಘದ ಮಹಿಳೆಯರು ಬ್ಯಾಗ್‍ಗಳನ್ನು ಹೊಲಿಯುವ ಕಾರ್ಯ ಆರಂಭಿಸಿದ್ದಾರೆ. ಒಂಬತ್ತು ಜನರಿರುವ ಈ ಚಿಕ್ಕ ಸಂಘದಲ್ಲಿ ಏಳು ಜನ ಮಹಿಳೆಯರು ಹೊಲಿಗೆ ಯಂತ್ರ ಹೊಂದಿದ್ದು ಮನೆಯಲ್ಲಿ ಬಿಡುವಿನ ಸಮಯದಲ್ಲಿ ಬಟ್ಟೆ ಚೀಲವನ್ನು ಹೋಲಿದು ಕೊಡುತ್ತಿದ್ದಾರೆ.

ಸದ್ಯ ಹೋಟಲ್ ಹಾಗೂ ಅಂಗಡಿಗೆ ಬಟ್ಟೆ ಬ್ಯಾಗ್‍ಗಳನ್ನು ತಯಾರಿಸಿ ನೀಡುತ್ತಿದ್ದು, ಪ್ರತಿ ದಿನ ನೂರು ಬಟ್ಟೆಯ ಒಂದು ಬಂಡಲ್‍ನಂತೆ ನಾಲ್ಕು ಬಂಡಲ್ ಬಟ್ಟೆಯನ್ನು ಒಬ್ಬರು ತಯಾರಿಸಿ ದಿನಕ್ಕೆ 1,200 ರೂ.ಗಳಿಗೂ ಹೆಚ್ಚು ಹಣ ಗಳಿಸುತ್ತಿದ್ದಾರೆ. ಬ್ಯಾಗ್ ತಯಾರಿಸುತ್ತಿರುವ ಸಂಘದ ಪೂಜಾ ಸಂಜೀವ್ ಅರ್ಗೆಕರ್ ಹೇಳುವಂತೆ, ಗೃಹಿಣಿಯಾಗಿ ಮನೆಯ ಕೆಲಸ ಮುಗಿಸಿ ಸಂಜೆ ವೇಳೆ ಬಟ್ಟೆ ಚೀಲವನ್ನು ಹೊಲಿಯುತ್ತೇನೆ. ಇದರಿಂದ ನನ್ನ ಗಳಿಕೆ ಹೆಚ್ಚಾಗಿದ್ದು ಕುಟುಂಬಕ್ಕೆ ಸಹಕಾರವಾಗುತ್ತಿದೆ. ನಗರಸಭೆಯೇ ನೇರವಾಗಿ ಹೋಟಲ್ ಮತ್ತು ಅಂಗಡಿಗಳ ನಡುವೆ ನಮ್ಮ ಬಟ್ಟೆ ಬ್ಯಾಗ್ ತೆಗೆದುಕೊಳ್ಳುವಂತೆ ಒಪ್ಪಂದ ಮಾಡಿಸಿದೆ. ಇದರಿಂದಾಗಿ ನಾವು ಗ್ರಾಹಕರನ್ನು ಹುಡುಕಿ ಅಲೆಯುವುದು ತಪ್ಪಿದೆ, ಬ್ಯಾಗ್‍ಗೆ ಹೆಚ್ಚಿನ ಬೇಡಿಕೆ ಬರುತ್ತಿದೆ ಎನ್ನುತ್ತಾರೆ.

KWR a

ಎನಿಟೈಮ್ ಬ್ಯಾಗ್ ಮಿಷನ್‍ಗಳು: ಕೆಲವೇ ದಿನದಲ್ಲಿ ಈ ಮಹಿಳೆಯರು ತಯಾರಿಸಿದ ಬಟ್ಟೆ ಬ್ಯಾಗ್‍ಗಳನ್ನು ನೇರವಾಗಿ ನಗರಸಭೆ ಖರೀದಿಸಿ ಎಟಿಎಮ್ ಗಳು ಹೇಗಿವೆಯೋ ಅದೇ ಮಾದರಿಯಲ್ಲಿ ಎನಿಟೈಮ್ ಬ್ಯಾಗ್ ಮಿಷನ್‍ಗಳನ್ನು ನಗರದಲ್ಲಿ ಅಳವಡಿಸಲು ಸಿದ್ಧತೆ ನಡೆಸಿದೆ. ಈ ಮಿಷನ್‍ನಲ್ಲಿ ಐದು ರೂ. ನಾಣ್ಯ ಹಾಕಿದರೆ ಒಂದು ಬಟ್ಟೆ ಬ್ಯಾಗ್ ಬರುವಂತೆ ವ್ಯವಸ್ಥೆ ರೂಪಿಸಿದ್ದು, ಸಿದ್ಧತೆ ನಡೆದಿದೆ ಎಂದು ನಗರಸಭಾ ಆಯುಕ್ತ ಯೋಗೀಶ್ವರ್ ತಿಳಿಸಿದ್ದಾರೆ.

ಹೀಗಾಗಿ ಈಗಾಗಲೇ ಹಲವು ಮಹಿಳೆಯರು ಬಟ್ಟೆ ಬ್ಯಾಗ್ ತಯಾರಿಸುವಲ್ಲಿ ನಿರತರಾಗಿದ್ದು, ತಮ್ಮ ಬಿಡುವಿನ ಸಮಯದಲ್ಲಿ ಬಟ್ಟೆ ಬ್ಯಾಗ್ ಹೊಲಿಯುವ ಮೂಲಕ ಕೈತುಂಬ ಹಣ ಗಳಿಸುತ್ತಿದ್ದಾರೆ. ಪ್ಲಾಸ್ಟಿಕ್ ನಿಷೇಧ ಈ ಬಡ ಮಹಿಳೆಯರ ಬಾಳಲ್ಲಿ ಬೆಳಕಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *