– ಪ್ಲಾಸ್ಮಾ ಥೆರಪಿಯಿಂದ ಕೊರೊನಾಗೆ ಮದ್ದು
– ಸರ್ಕಾರಕ್ಕೆ ಐಸಿಎಂಆರ್ ಸಲಹೆ
ನವದೆಹಲಿ: ಕೊರೊನಾಗೆ ಇನ್ನೂ ಔಷಧಿ ಸಿಕ್ಕಿಲ್ಲ. ವಿಶ್ವಾದ್ಯಂತ ಹಲವು ಲ್ಯಾಬ್‍ಗಳಲ್ಲಿ ಪರೀಕ್ಷೆ ನಡೆಯುತ್ತಿರುವ ಬೆನ್ನಲ್ಲೇ ಕೊರೊನಾ ರೋಗಿಯನ್ನು ಪ್ಲಾಸ್ಮಾ ಥೆರಪಿ ಮೂಲಕ ಗುಣಪಡಿಸಬಹುದು ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ.
ಹೌದು. ಜಗತ್ತನ್ನೇ ಆತಂಕಕ್ಕೆ ದೂಡಿರುವ ಮಹಾಮಾರಿ ಕೊರೊನಾಗೆ ಸೋಂಕಿನಿಂದ ಗುಣಮುಖರಾದ ವ್ಯಕ್ತಿಯ ರಕ್ತವೇ ಔಷಧಿ ಎನ್ನಲಾಗುತ್ತಿದೆ. ಗುಣಮುಖರಾಗಿರುವ ಕೊರೊನಾ ರೋಗಿಗಳ ರಕ್ತದ ಕಣಗಳನ್ನೇ ಸೋಂಕಿತ ವ್ಯಕ್ತಿಗೆ ಮದ್ದಾಗಿ ಬಳಸಬಹುದಂತೆ. ಇದಕ್ಕೆ ಪ್ಲಾಸ್ಮಾ ಥೆರಪಿ ಎಂದು ಕರೆಯಲಾಗುತ್ತಿದ್ದು, ಇದನ್ನೇ ಕೊರೊನಾಗೆ ಮದ್ದಾಗಿ ಬಳಸಲು ಕೇಂದ್ರ ಸರ್ಕಾರಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಸಲಹೆ ನೀಡಿದೆ. ಈಗ ಔಷಧ ನಿಯಂತ್ರಣ ಪ್ರಾಧಿಕಾರದ ಅನುಮತಿಯೊಂದು ಬಾಕಿಯಿದ್ದು ಅನುಮತಿ ನೀಡಿದರೆ ಪ್ರಯೋಗ ಭಾರತದಲ್ಲೂ ನಡೆಯಬಹುದು.
Advertisement
Advertisement
ಏನಿದು ಪ್ಲಾಸ್ಮಾ ಥೆರಪಿ?
ಕೊರೊನಾದಿಂದ ಗುಣಮುಖರಾದ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿ ಜಾಸ್ತಿ ಇರುತ್ತದೆ. ಅವರ ರಕ್ತ ಕಣಗಳನ್ನು ಬೇರ್ಪಡಿಸಿ ಸೋಂಕಿತರ ಚಿಕಿತ್ಸೆಗೆ ಬಳಸಲಾಗುತ್ತದೆ. ಕೊರೊನಾ ವೈರಸ್ಸಿನೊಂದಿಗೆ ಹೋರಾಡಿದ ಪರಿಣಾಮ ಈ ರಕ್ತಕ್ಕೆ ವೈರಸ್ ಗಳನ್ನು ತಡೆಯುವ ಶಕ್ತಿ ಇರುತ್ತದೆ. ಹೀಗಾಗಿ ಪ್ಲಾಸ್ಮಾ ಥೆರಪಿ ನೀಡಿದರೆ ಉತ್ತಮ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.
Advertisement
ಪ್ರಯೋಗ ನಡೆದಿದೆಯೇ?
ಚೀನಾದಲ್ಲೂ ಕೂಡ ಕೊರೊನಾ ನಿಯಂತ್ರಣಕ್ಕೆ ಸೋಂಕಿನಿಂದ ಗುಣಮುಖರಾದ ವ್ಯಕ್ತಿಯ ಪ್ಲಾಸ್ಮಾವನ್ನೇ ಬಳಸಲಾಗಿದೆ. ಚೀನಾದ 2 ವೈದ್ಯರ ತಂಡ 2 ಪ್ರತ್ಯೇಕ ಆಸ್ಪತ್ರೆಗಳಲ್ಲಿ 15 ಮಂದಿ ಸೋಂಕಿತರಿಗೆ ಮೊದಲು ಈ ಪರೀಕ್ಷೆ ನಡೆಸಿ ಅವರಲ್ಲಿ ಸುಧಾರಣೆ ಕಂಡದ್ದನ್ನು ದಾಖಲಿಸಿವೆ. ಸದ್ಯ ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಪ್ಲಾಸ್ಮಾ ಥೆರಪಿ ಬಳಕೆಗೆ ಚಿಂತಿಸಲಾಗಿದೆ. ದೇಶದಲ್ಲಿ ಕೇರಳ ರಾಜ್ಯದಲ್ಲಿ ಈ ಮದ್ದು ಮೊದಲ ಬಾರಿಗೆ ಬಳಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಕರ್ನಾಟಕದಲ್ಲೂ ಇದನ್ನು ಜಾರಿಗೆ ತರುವ ಸಾಧ್ಯತೆಯಿದೆ.
Advertisement
ಒಬ್ಬನಿಂದ ಎಷ್ಟು ಮಂದಿಗೆ ನೀಡಬಹುದು?
ಒಬ್ಬನಿಂದ ಇಷ್ಟೇ ಮಂದಿಗೆ ನೀಡಬಹುದು ಎಂದು ಹೇಳಲು ಸಾಧ್ಯವಿಲ್ಲ. ಎಷ್ಟು ಪ್ರಮಾಣದಲ್ಲಿ ಪ್ಲಾಸ್ಮಾ ಸಿಗುತ್ತದೆ ಎಂಬುದರ ಮೇಲೆ ಎಷ್ಟು ಮಂದಿಗೆ ನೀಡಬಹುದು ಎನ್ನುವ ಲೆಕ್ಕಾಚಾರವನ್ನು ಹಾಕಲಾಗುತ್ತದೆ. ಒಬ್ಬನಿಂದ ಕನಿಷ್ಟ ಇಬ್ಬರು ಗರಿಷ್ಟ 5 ಮಂದಿಗೆ ಪ್ಲಾಸ್ಮಾ ನೀಡಬಹುದು. ಒಬ್ಬ ರೋಗಿಯನ್ನು ಗುಣಪಡಿಸಲು ಅಂದಾಜು 200-250 ಎಂಎಲ್ ಪ್ಲಾಸ್ಮಾ ಬೇಕಾಗುತ್ತದೆ.
ಎಷ್ಟು ದಿನಗಳ ನಂತರ ಪ್ಲಾಸ್ಮಾ ಸಂಗ್ರಹಿಸಬಹುದು?
ಇದು ಬಹಳ ಕಠಿಣ ಪ್ರಶ್ನೆ. ಕೊರೊನಾ ವಾಸಿಯಾದ ನಂತರವು ಸೋಂಕು ಬಂದಿದೆ ಎನ್ನುವ ವರದಿಗಳು ಚೀನಾದಲ್ಲಿ ದಾಖಲಾಗಿದೆ. ಹೀಗಾಗಿ ರೋಗಿ ಸಂಪೂರ್ಣವಾಗಿ ಗುಣವಾದ 28 ದಿನಗಳ ನಂತರ ಪ್ಲಾಸ್ಮಾವನ್ನು ಸಂಗ್ರಹಿಸಬಹುದು ಎನ್ನುವ ಲೆಕ್ಕಾಚಾರಕ್ಕೆ ಬರಲಾಗಿದೆ.
ಯಾರಿಗೆ ನೀಡಬಹುದು?
ಕೊರೊನಾ ಪೀಡಿತ ಎಲ್ಲರಿಗೆ ಈ ಥೆರಪಿಯ ಅಗತ್ಯವಿಲ್ಲ. ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ವ್ಯಕ್ತಿಗಳು ಉತ್ತಮ ಆಹಾರ, ಔಷಧಿ, ತಮ್ಮಲ್ಲಿನ ದೃಢ ವಿಶ್ವಾಸದಿಂದಲೇ ಗುಣಮುಖರಾಗುತ್ತಾರೆ. ಆದರೆ ಗಂಭೀರವಾಗಿರುವ ರೋಗಿಗಳಿಗೆ ನೀಡಲು ಯಾವುದೇ ಔಷಧ ಇಲ್ಲದ ಕಾರಣ ಈ ಥೆರಪಿ ನೀಡಬಹುದು. ಈ ಥೆರಪಿ ಮೂಲಕ ರೋಗಿಯನ್ನು 5-7 ದಿನಗಳಲ್ಲಿ ಗುಣಪಡಿಸಬಹುದು ಎನ್ನುವ ಅಭಿಪ್ರಾಯಕ್ಕೆ ಬರಲಾಗಿದೆ.
ಅನುಮತಿ ಸಿಕ್ಕಿದ್ರೆ ಪ್ರಾರಂಭಿಸಬಹುದೇ?
ಸರ್ಕಾರದಿಂದ ಅನುಮತಿ ಸಿಕ್ಕಿದ್ರೆ ಮರುದಿನವೇ ಈ ಥೆರಪಿ ಮಾಡಬಹುದು. ಈಗಾಗಲೇ ಆರೋಗ್ಯ ಇಲಾಖೆಯಲ್ಲಿ ಕೊರೊನಾ ಬಂದು ಗುಣಮುಖರಾದ ರೋಗಿಗಳ ಸಂಪೂರ್ಣ ವಿವರ ಇರುತ್ತದೆ. ಇವರನ್ನು ಸಂಪರ್ಕಿಸುವ ಮೂಲಕ ಕೆಲಸ ಆರಂಭಿಸಬಹುದು.
ಮಲೇರಿಯಾ ಮಾತ್ರೆಯಿಂದ ಅಪಾಯ?
ಮಲೇರಿಯಾ ಜ್ವರಕ್ಕೆ ನೀಡುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಕೊರೊನಾಗೆ ನೀಡಲಾಗುತ್ತಿದೆ. ಈ ಮಧ್ಯೆ, ಆ್ಯಂಟಿ ಮಲೇರಿಯಾ ಲಸಿಕೆ ಬಳಕೆಯಿಂದ ಹೃದಯಾಘಾತದ ಅಪಾಯ ಇದೆ ಅಂತಲೂ ಹೇಳಲಾಗ್ತಿದೆ. ಹೀಗಾಗಿ, ವೈದ್ಯರ ಸಲಹೆ ಇಲ್ಲದೆ ಜನ ಯಾವುದೇ ಕಾರಣಕ್ಕೂ ಹೈಡ್ರಾಕ್ಸಿಕ್ಲೊರೊಕ್ವಿನ್ ತೆಗೆದುಕೊಳ್ಳಬಾರದು. ಇದನ್ನೂ ಓದಿ: ಟ್ರಂಪ್ ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗೆ ಬೇಡಿಕೆ ಇಟ್ಟಿದ್ದು ಯಾಕೆ? ಈ ಮಾತ್ರೆಯಿಂದ ಕೊರೊನಾ ವಾಸಿಯಾಗುತ್ತಾ?