ಬೆಂಗಳೂರು: ಕೋವಿಡ್ ಸೋಂಕಿತರಿಗೆ ಹೆಚ್ಚು ಪರಿಣಾಮಕಾರಿ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿರುವ ಪ್ಲಾಸ್ಮಾ ಚಿಕಿತ್ಸೆಗೆ ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಅವರು ಈ ಉಪಕ್ರಮಕ್ಕೆ ಚಾಲನೆ ನೀಡಿದರು. ಗಂಭೀರ ಪರಿಸ್ಥಿತಿಯಲ್ಲಿರುವ ಕೊರೊನಾ ಸೋಂಕಿತ ವ್ಯಕ್ತಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ಪರಿಣಾಮಕಾರಿಯಾಗಿ ಇರುವುದು ಕಂಡು ಬಂದಿದೆ. ಇದೀಗ ರಾಜ್ಯದಲ್ಲಿ ಕೂಡ ಈ ಪ್ರಕ್ರಿಯೆ ಲಭ್ಯವಾದಂತಾಗಿದೆ.
Happy to announce the commencement of Clinical Trials for Plasma Therapy that holds great promise to treat severely infected #COVID19 patients. Health Min @sriramulubjp & I initiated this significant step at Victoria Hospital today morning.. @PMOIndia @BSYBJP @drharshvardhan pic.twitter.com/D2YOpRVFbm
— Dr Sudhakar K (@mla_sudhakar) April 25, 2020
ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು, ಕರ್ನಾಟಕ ರಾಜ್ಯಕ್ಕೆ ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಪ್ಲಾಸ್ಮಾ ಚಿಕಿತ್ಸೆಯಿಂದ ಸೋಂಕಿತರು ಗುಣಮುಖರಾದರೆ ಅತ್ಯಂತ ಸಂತೋಷದ ಸಂಗತಿ ಎಂದು ಹೇಳಿದರು. ಇಂದಿನಿಂದ ಇದರ ಕ್ಲಿನಿಕಲ್ ಪ್ರಯೋಗ ಆರಂಭವಾಗಿದ್ದು, ವೆಂಟಿಲೇಟರ್ ನಲ್ಲಿರುವ ಪೀಡಿತರಿಗೆ ಈ ಚಿಕಿತ್ಸೆ ನೀಡಲಾಗುವುದು. ಕೋವಿಡ್‍ನಿಂದ ಗುಣಮುಖರಾಗಿರುವ ವ್ಯಕ್ತಿಯೊಬ್ಬರು ಚಿಕಿತ್ಸೆಗೆ ಸಹಕರಿಸಲು ಮುಂದೆ ಬಂದಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.
ಈ ಚಿಕಿತ್ಸೆಗೆ ಗುಣಮುಖರಾಗಿರುವ ವ್ಯಕ್ತಿಗಳು ಸ್ವಯಂಪ್ರೇರಿತರಾಗಿ ಬಂದು ಸಹಕಾರ ನೀಡಬೇಕಾಗಿದೆ. ಗುಣಮುಖರಾಗಿರುವ ವ್ಯಕ್ತಿಗಳು 2 ವಾರದ ಅಂತರದಲ್ಲಿ ಕನಿಷ್ಠ ಇಬ್ಬರು ಅಥವಾ ಮೂವರಿಗೆ ಈ ನೆರವು ನೀಡಬಹುದಾಗಿದ್ದು, ಈ ನಿಟ್ಟಿನಲ್ಲಿ ಸಹಕರಿಸಬೇಕೆಂದು ಸಚಿವ ಸುಧಾಕರ್ ಹೇಳಿದರು
ವಿಕ್ಟೋರಿಯಾ ಆಸ್ಪತ್ರೆಯ ಡೀನ್ ಡಾ.ಸಿ.ಆರ್ ಜಯಂತಿ, ಬೆಂಗಳೂರು ಇನ್‍ಸ್ಟಿಟ್ಯೂಟ್ ಆಫ್ ಆಂಕಾಲಜಿಯ ಡಾ. ವಿಶಾಲ್ ರಾವ್ ಹಾಗೂ ಬೆಂಗಳೂರು ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ರಮೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.
This is the technology in covid designated Victoria Hospital to ensure safety of our Doctors & health workers treating Covid patients. pic.twitter.com/HWXwBYsaWf
— Dr Sudhakar K (@mla_sudhakar) April 25, 2020
ಪ್ಲಾಸ್ಮಾ ಥೆರಪಿ:
ಪ್ಲಾಸ್ಮಾ ಥೆರಪಿಯು ನೆರೆಯ ಕೇರಳ ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿದ್ದು, ಕರ್ನಾಟಕದಲ್ಲೂ ಇದನ್ನು ನಡೆಸಲು ಅನುಮತಿ ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಸರ್ಕಾರ ಮನವಿ ಸಲ್ಲಿಸಿತ್ತು. ಇತ್ತೀಚೆಗಷ್ಟೇ ಕೇಂದ್ರ ಸಾರ್ವಜನಿಕ ಆರೋಗ್ಯ ನಿರ್ದೇಶನಾಲಯವು ಬೆಂಗಳೂರು ಇನ್‍ಸ್ಟಿಟ್ಯೂಟ್ ಆಫ್ ಆಂಕಾಲಜಿಯ ವೈದ್ಯ ಡಾ. ವಿಶಾಲ್ ರಾವ್ ಅವರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಅನುಮತಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಪ್ಲಾಸ್ಮಾ ಥೆರಪಿಯನ್ನು ಈ ಹಿಂದೆಯೂ ಕೂಡ ಎಬೋಲಾ ಮತ್ತು ಸ್ವೈನ್ ಫ್ಲೂ ನಂತಹ ಕಾಯಿಲೆಗಳಿಗೆ ಯಶಸ್ವಿಯಾಗಿ ಉಪಯೋಗಿಸಲಾಗಿದ್ದು, ಕೋವಿಡ್ ಸೋಂಕಿತರಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಇದೊಂದು ಮಹತ್ವದ ಬೆಳವಣಿಗೆ ಎಂದೇ ಹೇಳಬಹುದಾಗಿದೆ.
ಏನಿದು ಪ್ಲಾಸ್ಮಾ ಥೆರಪಿ?
* ಪ್ಲಾಸ್ಮಾ ಎಂದರೆ ರಕ್ತದ ಕಣ (ಹಳದಿ ದ್ರವಾಂಶ). ರಕ್ತದಲ್ಲಿರುವ ರೋಗ ನಿರೋಧಕ ಅಂಶ ಇರುವುದು ಪ್ಲಾಸ್ಮಾದಲ್ಲಿ
* ಪ್ಲಾಸ್ಮಾ ಥೆರಪಿ ಎಂದರೆ ಗುಣಮುಖರಾಗಿರುವ ವ್ಯಕ್ತಿಯ ರಕ್ತದಲ್ಲಿರುವ ಪ್ಲಾಸ್ಮಾವನ್ನು ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಯ ರಕ್ತಕ್ಕೆ ಇಂಜೆಕ್ಟ್ ಮಾಡುವುದು.
* ಗುಣಮುಖರಾದವರ ರಕ್ತದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತೆ. ಇದೇ ರಕ್ತದಲ್ಲಿರುವ ಪ್ಲಾಸ್ಮಾವನ್ನು ರೋಗಿಗೆ ನೀಡಿದರೆ ಆಗ ಆ ರೋಗಿಯ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗಿ ಶೀಘ್ರ ಗುಣಮುಖರಾಗುತ್ತಾರೆ.
* ಕೊರೊನಾದಿಂದ ಗುಣಮುಖರಾಗಿರುವ ವ್ಯಕ್ತಿಯ ಪ್ಲಾಸ್ಮಾವನ್ನು ಕೊರೊನಾದಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಗೆ ಇಂಜೆಕ್ಟ್ ಮಾಡಿದರೆ ಆ ರೋಗಿಯ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಶೀಘ್ರ ಗುಣಮುಖರಾಗುತ್ತಾರೆ.
* ಪ್ಲಾಸ್ಮಾ ಚಿಕಿತ್ಸೆಯಿಂದ ರೋಗಿಗಳು 3 ರಿಂದ 7 ದಿನದೊಳಗೆ ಗುಣಮುಖರಾಗುವ ನಿರೀಕ್ಷೆ
ಯಾರು ಪ್ಲಾಸ್ಮಾ ದಾನ ಮಾಡಬಹುದು?
* ಕೊರೊನಾದಿಂದ ಗುಣಮುಖರಾಗಿರುವ ವ್ಯಕ್ತಿ ಪ್ಲಾಸ್ಮಾ ದಾನ ಮಾಡಬಹುದು
* ಕೊರೊನಾದಿಂದ ಗುಣಮುಖರಾದ ವ್ಯಕ್ತಿ 28 ದಿನಗಳ ಬಳಿಕ ಪ್ಲಾಸ್ಮಾ ದಾನ ಮಾಡಬಹುದು
* ಒಬ್ಬ ರೋಗಿಯನ್ನ ಗುಣಪಡಿಸಲು 200-250 ಮಿಲಿ ಲೀಟರ್ ಪ್ಲಾಸ್ಮಾ ಅಗತ್ಯ
* ಒಬ್ಬ ದಾನಿಯಿಂದ ಇಬ್ಬರಿಂದ ಐವರು ರೋಗಿಗಳನ್ನು ಗುಣಪಡಿಸಬಹುದು
* ರಕ್ತದಾನಕ್ಕಿಂತ ಪ್ಲಾಸ್ಮಾ ದಾನ ಭಿನ್ನ
* ರಕ್ತದಲ್ಲಿರುವ ಪ್ಲಾಸ್ಮಾವನ್ನಷ್ಟೇ ಸಂಗ್ರಹಿಸಿ ರಕ್ತವನ್ನು ಮತ್ತೆ ದಾನಿಗಳ ದೇಹಕ್ಕೆ ಬಿಡಲಾಗುತ್ತದೆ
* ಒಬ್ಬ ದಾನಿ ವಾರದಲ್ಲಿ ಎರಡು ಬಾರಿ ಪ್ಲಾಸ್ಮಾ ದಾನ ಮಾಡಬಹುದು