ಉಡುಪಿ: ಸಾಮಾನ್ಯವಾಗಿ ಮನೆಯಲ್ಲಿ ಮಗು ಹುಟ್ಟಿದರೆ ಸಿಹಿ ಹಂಚುವ ಸಂಪ್ರದಾಯ ಇದೆ. ನಾಮಕರಣಕ್ಕೆ ನೂರಾರು ಜನ ಬಂಧು-ಮಿತ್ರರಿಗೆ ಊಟ ಹಾಕಿ ಖುಷಿ ಹಂಚಿಕೊಳ್ಳುತ್ತಾರೆ. ಆದರೆ ಜಿಲ್ಲೆಯಲ್ಲಿ ನಾಮಕರಣಕ್ಕೆ ಬಂದ ಬಂಧು-ಮಿತ್ರರಿಗೆಲ್ಲ ಸ್ಪೆಷಲ್ ಗಿಫ್ಟ್ ಕೊಡಲಾಗಿದೆ.
ಉಡುಪಿಯಲ್ಲಿ ನಡೆದ ಧಾರ್ಮಿಕ ಕಾರ್ಯದ ಸಭಾಂಗಣಕ್ಕೆ ಬಂದ ಎಲ್ಲರ ರಾಶಿ ನಕ್ಷತ್ರ ಕೇಳಿದ್ದು ವಿಶೇಷವಾಗಿದೆ. ಉಡುಪಿಯ ಮಟ್ಟುವಿನಲ್ಲಿ ವಿಶಿಷ್ಟ ಕಾರ್ಯಕ್ರಮವೊಂದು ನಡೆದಿದೆ. ಇಲ್ಲಿನ ವಿಷ್ಣುಮೂರ್ತಿ ದೇವಸ್ಥಾನದ ತಂತ್ರಿಗಳಿಗೆ ಪುತ್ರ ಸಂತಾನವಾಗಿದೆ. ಈ ಪ್ರಯುಕ್ತ ಊರಿಗೆಲ್ಲಾ ಊಟ ಹಾಕಿಸಿದರು. ಊಟ ಮಾಡಿ ಕೈ ತೊಳೆಯುವಷ್ಟರಲ್ಲಿ ಅಪರೂಪದ ತಳಿಯ ಗಿಡಗಳನ್ನು ಹಂಚಿದ್ದಾರೆ. ಗಿಡಗಳನ್ನು ಹಂಚುವಾಗಲು ಕೂಡ ಧಾರ್ಮಿಕ ಪ್ರಜ್ಞೆಯನ್ನು ಮೆರೆದಿದ್ದಾರೆ. ತಮ್ಮ ಬಂಧುಗಳು ಹಾಗೂ ಸ್ನೇಹಿತರ ನಕ್ಷತ್ರ ಮತ್ತು ರಾಶಿಗೆ ಅನುಗುಣವಾಗಿ ಗಿಡಗಳನ್ನು ಕೊಟ್ಟು ವಿಶಿಷ್ಟ ಪರಂಪರೆಗೆ ನಾಂದಿ ಹಾಡಿದ್ದಾರೆ.
Advertisement
Advertisement
ನಮ್ಮ ನಕ್ಷತ್ರಕ್ಕೂ ನಮ್ಮ ಸುತ್ತಲೂ ಇರಬೇಕಾದ ಸಸ್ಯ ಸಂಪತ್ತಿಗೂ ಒಂದು ನಂಟಿದೆ. ನಮ್ಮ ಜಾತಕದ ಅನುಸಾರ ನಮಗೆ ಬಾಧಿಸಬಹುದಾದ ಅನಾರೋಗ್ಯಗಳನ್ನು ಹೋಗಲಾಡಿಸುವ ಗಿಡಗಳನ್ನು ನೆಟ್ಟರೆ ಹೆಚ್ಚು ಅನುಕೂಲವಾಗುತ್ತದೆ. ಉದಾಹರಣೆಗೆ ಭರಣಿ ನಕ್ಷತ್ರದವರು ನೆಲ್ಲಿಯ ಗಿಡನೆಟ್ಟರೆ ದಾತು ವೃದ್ಧಿಯಾಗುತ್ತೆ ಅನ್ನೋದು ಶಾಸ್ತ್ರ. ರೋಹಿಣಿ ನಕ್ಷತ್ರವರಿಗೆ ನೇರಳೆ ಮರ, ಪುನರ್ವಸು ನಕ್ಷತ್ರಕ್ಕೆ ಬಿದಿರು, ಪುಷ್ಯ ನಕ್ಷತ್ರಕ್ಕೆ ಅಶ್ವತ್ಥ ಮರ. ಹೀಗೆ 27 ನಕ್ಷತ್ರಕ್ಕೂ ನಾನಾ ಬಗೆಯ ಗಿಡಗಳು ಅನುಕೂಲಕರವಾಗಲಿದೆ ಎಂದು ಧಾರ್ಮಿಕ ವಿದ್ವಾಂಸರು ನವೀನ್ ತಂತ್ರಿ ತಿಳಿಸಿದ್ದಾರೆ.
Advertisement
ತಮ್ಮ ಮನೆಗೆ ಬಂದ ಪುಟ್ಟ ಕಂದಮ್ಮ ಕೇವಲ ತಮ್ಮ ಮನೆ ಬೆಳಗಿದರೆ ಸಾಲದು, ಊರನ್ನೂ ತಂಪಾಗಿಡಬೇಕು ಅನ್ನೋ ಪ್ರವೀಣ್ ತಂತ್ರಿಗಳ ಪರಿಸರ ಪ್ರಜ್ಞೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲೂ ವಿಷ್ಣುಮೂರ್ತಿ ದೇವರ ಸನ್ನಿಧಾನದಲ್ಲಿ ಪಡೆದ ಈ ಗಿಡಗಳನ್ನು ದೇವರ ಪ್ರಸಾದವೆಂದೇ ಭಾವಿಸಿ ಜನರು ಲಾಲನೆ ಪಾಲನೆ ಮಾಡುವುದರಿಂದ ಪರಿಸರಕ್ಕೂ ಅನುಕೂಲವಾಗಲಿದೆ.