– 2014-2023 ವರದಿ ಹೇಳೋದೇನು? – ತಜ್ಞರ ಆತಂಕವೇನು?
ಈ ಮನುಕುನ ಉಳಿಯಬೇಕು ಎಂದಿದ್ದರೆ, ಇನ್ನೂ 100 ವರ್ಷಗಳಲ್ಲಿ ಭೂಮಿ ಬಿಟ್ಟು ಹೊರಡಿ ಎಂದು ವಿಶ್ವವಿಖ್ಯಾತ ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್ ಆರು ವರ್ಷಗಳ ಹಿಂದೆ ಎಚ್ಚರಿಕೆ ನೀಡಿದ್ದರು. ಅವರ ಮಾತು ನಿಜ ಎನ್ನುವಂತಹ ಒಂದೊಂದು ಸನ್ನಿವೇಶಗಳು ಈ ಭೂಮಿ ಮೇಲೆ ಜರುಗುತ್ತಿವೆ. ಜನಸಂಖ್ಯಾ ಸ್ಫೋಟ, ಭೂಮಿ ಬಿಸಿಯಾಗುತ್ತಿರುವುದು ಮತ್ತು ಮನುಕುಲದ ಭವಿಷ್ಯದ ಬಗ್ಗೆ ಹಾಕಿಂಗ್ ಎಚ್ಚರಿಕೆ ಗಂಟೆ ಬಾರಿಸುತ್ತಲೇ ಇದ್ದರು. ಇದೇ ಹೊತ್ತಿನಲ್ಲಿ ಭೂಮಿ ಕುದಿಯುತ್ತಿರುವ ಸಂಬಂಧ ವರದಿಯೊಂದು ಬಿಡುಗಡೆಯಾಗಿದ್ದು, ಆತಂಕ ಮೂಡಿಸಿದೆ.
Advertisement
ಮಾನವನ ದುರಾಸೆಗೆ ಭೂಮಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತಕ್ಕೆ ತಲುಪಿದೆ. ಕಳೆದ ವರ್ಷದ ತಾಪಮಾನವು, ಜಾಗತಿಕ ಶಾಖದ ದಾಖಲೆಯನ್ನೇ ಬ್ರೇಕ್ ಮಾಡಿದೆ ಎಂಬ ಆತಂಕಕಾರಿ ವಿಚಾರವನ್ನು ಯುಎನ್ ಈಚೆಗೆ ದೃಢಪಡಿಸಿದೆ. ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆಯು ತನ್ನ ವಾರ್ಷಿಕ ಹವಾಮಾನ ವರದಿಯನ್ನು ಬಿಡುಗಡೆ ಮಾಡಿತು. ‘2023’ ಇದುವರೆಗೆ ದಾಖಲಾದ ಅತ್ಯಂತ ಬಿಸಿಯಾದ ವರ್ಷ ಎಂದು ತಿಳಿಸಿದೆ.
Advertisement
ಅಳಿವಿನಂಚಿನಲ್ಲಿದೆ ಭೂಮಿ
ಶಾಖದ ಅಲೆಗಳು ಸಾಗರಗಳಲ್ಲಿ ಹೆಚ್ಚುತ್ತಿದೆ. ಹಿಮನದಿಗಳು ದಾಖಲೆಯ ಪ್ರಮಾಣದಲ್ಲಿ ಕರಗಿ ಹರಿಯುತ್ತಿವೆ. ನಮ್ಮ ಭೂಮಿ ಅಳವಿನಂಚಿನಲ್ಲಿದೆ ಎಂದು ಯುಎನ್ ಮುಖ್ಯಸ್ಥ ಆಂಟೋನಿಯೊ ಗುಟೆರಸ್ ಆತಂಕ ವ್ಯಕ್ತಪಡಿಸಿದ್ದಾರೆ. ಭೂಮಿಯು ಸಂಕಷ್ಟದ ಕರೆಯನ್ನು ನೀಡುತ್ತಿದೆ. ಪಳೆಯುಳಿಕೆ ಇಂಧನ ಮಾಲಿನ್ಯವು ಹವಾಮಾನ ಅವ್ಯವಸ್ಥೆಗೆ ಕಾರಣವಾಗಿದೆ. ಬದಲಾವಣೆಗಳು ವೇಗಗೊಳ್ಳುತ್ತಿವೆ ಎಂದು ಎಚ್ಚರಿಕೆ ನೀಡಿದ್ದಾರೆ.
Advertisement
ಅಪಾಯಕಾರಿ 1.5 ಡಿಗ್ರಿ ಸೆಲ್ಸಿಯಸ್ ಮಟ್ಟಕ್ಕೆ ಹತ್ತಿರ
ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ 2015 ರಲ್ಲಿ ‘ಪ್ಯಾರಿಸ್ ಒಪ್ಪಂದ’ವಾಗಿತ್ತು. ಅದರಲ್ಲಿ ಹೇಳಿರುವಂತೆ 1850 ರಿಂದ 1900 ರ ವರೆಗಿನ ಅವಧಿಯಲ್ಲಿ ದಾಖಲಾದ ತಾಪಮಾನದ ಸರಾಸರಿಗಿಂತ ಎರಡು ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ಮಾಡುವ ಗುರಿ ಹೊಂದಲಾಗಿತ್ತು. ಇಷ್ಟಾದರೂ, ಕನಿಷ್ಠಪಕ್ಷ 1.5 ಡಿಗ್ರಿ ಸೆಲ್ಸಿಯನಷ್ಟು ಕಡಿಮೆ ಮಾಡಬೇಕು ಎಂಬ ಆಶಯ ಹೊಂದಲಾಗಿತ್ತು. ಆದರೆ ಈಗಿನ ಹವಾಮಾನ ಬದಲಾವಣೆ ಗಮನಿಸಿದರೆ, 1.5 ಡಿಗ್ರಿಗೆ ಅಪಾಯಕಾರಿ ಹತ್ತಿರದಲ್ಲಿದೆ. ಕಳೆದ ವರ್ಷ ಕೈಗಾರಿಕಾ ಪೂರ್ವದ ಮಟ್ಟಕ್ಕಿಂತ ಸರಾಸರಿ ಮೇಲ್ಮೈ ತಾಪಮಾನವು 1.45 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು ಎಂದು ಡಬ್ಲ್ಯೂಎಂಒ ತಿಳಿಸಿದೆ. ಅಲ್ಲದೇ, ಪ್ಯಾರಿಸ್ ಒಪ್ಪಂದದ 1.5 ಡಿಗ್ರಿ ಸೆಲ್ಸಿಯಸ್ ಮಿತಿಗೆ ಭೂಮಿ ತಾಪಮಾನ ಯಾವಾಗಲೂ ಹತ್ತಿರ ಇರಲಿಲ್ಲ ಎಂದು ಸ್ಪಷ್ಟಪಡಿಸಿದೆ.
Advertisement
ಭೂಮಿಗೆ ರೆಡ್ ಅಲರ್ಟ್
ಹವಾಮಾನ ಬದಲಾವಣೆಯನ್ನು ಗಮನಿಸಿದರೆ ಈ ಭೂಮಿಗೆ ರೆಡ್ ಅಲರ್ಟ್ ಘೋಷಣೆಯಾದಂತೆ ಕಾಣುತ್ತಿದೆ ಎಂದು ಆಂಡ್ರಿಯಾ ಸೆಲೆಸ್ಟ್ ಸೌಲೊ ತಿಳಿಸಿದ್ದಾರೆ. ಹವಾಮಾನ ಬದಲಾವಣೆಯೂ ತಾಪಮಾನಕ್ಕಿಂತ ಹೆಚ್ಚು. 2023 ರಲ್ಲಿ ಸಮುದ್ರದ ಉಷ್ಣತೆ ಹೆಚ್ಚಳ, ಹಿಮನದಿ ಕರಗುವಿಕೆ ಮತ್ತು ಅಂಟಾರ್ಕ್ಟಿಕ್ ಸಮುದ್ರದಲ್ಲಿ ಕರಗುತ್ತಿರುವ ಮಂಜುಗಡ್ಡೆಯ ನಿರ್ದಿಷ್ಟ ಕಾಳಜಿಗೆ ಕಾರಣವಾಗಿದೆ ಎಂದಿದ್ದಾರೆ.
ಕಳೆದ ವರ್ಷ ಸಮುದ್ರದ ಶಾಖದ ಅಲೆಗಳು ಜಾಗತಿಕ ಸಾಗರದ ಸುಮಾರು ಮೂರನೇ ಒಂದು ಭಾಗವನ್ನು ಆವರಿಸಿವೆ ಎಂಬ ವಿಚಾರ ಸಂಶೋಧನೆಯಿಂದ ಬಹಿರಂಗವಾಗಿದೆ. 2023 ರ ಅಂತ್ಯದ ವೇಳೆಗೆ ಸಮುದ್ರದ 90 ಪ್ರತಿಶತಕ್ಕಿಂತಲೂ ಹೆಚ್ಚಿನ ಭಾಗವು ಶಾಖದ ಅಲೆ ಪರಿಣಾಮವನ್ನು ಅನುಭವಿಸಿದೆ. ಈ ಶಾಖದ ಅಲೆಗಳು ಸಮುದ್ರ ಪರಿಸರ ವ್ಯವಸ್ಥೆ ಮತ್ತು ಹವಳದ ಬಂಡೆಗಳ ಮೇಲೆ ಪರಿಣಾಮ ಬೀರುತ್ತಿವೆ. ವಿಶ್ವದಲ್ಲೇ ಪ್ರಮುಖ ಹಿಮನದಿಗಳಿರುವ ಪಶ್ಚಿಮ ಉತ್ತರ ಅಮೆರಿಕ ಮತ್ತು ಯೂರೋಪ್ ಎರಡರಲ್ಲೂ ತೀವ್ರವಾದ ಕರಗುವಿಕೆ ಉಂಟಾಗುತ್ತಿದೆ. ಆಲ್ಫೆನ್ಸ್ ಹಿಮನದಿಗಳು ಕಳೆದ 2 ವರ್ಷಗಳಲ್ಲಿ ಶೇ.10 ಕಳೆದುಕೊಂಡಿದೆ. ಅಂಟಾರ್ಕ್ಟಿಕ್ ಸಮುದ್ರದ ಮಂಜುಗಡ್ಡೆಯು ದಾಖಲೆ ಪ್ರಮಾಣದಲ್ಲಿ ಕರಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಏರುತ್ತಿದೆ ಸಮುದ್ರ ಮಟ್ಟ
ಭೂಮಿ ಮೇಲ್ಮೈನಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ 1993 ರಿಂದ ಉಪಗ್ರಹಗಳು ಅಧ್ಯಯನ ಮಾಡುತ್ತಿವೆ. ಅದರ ದಾಖಲೆ ಪ್ರಕಾರ, ಹಿಮನದಿಗಳು ಕರಗುತ್ತಿವೆ. ಸಾಗರ ತಾಪಮಾನವೂ ಹೆಚ್ಚುತ್ತಿದೆ. ಈ ಬೆಳವಣಿಗೆಯಿಂದಾಗಿ ಸಮುದ್ರ ಮಟ್ಟ ಏರುತ್ತಿದೆ. ಕಳೆದ ದಶಕದಲ್ಲಿ (2014-2023) ಜಾಗತಿಕ ಸರಾಸರಿ ಸಮುದ್ರ ಮಟ್ಟ ಏರಿಕೆಯು, ಮೊದಲ ದಶಕದಲ್ಲಿನ ಉಪಗ್ರಹ ದಾಖಲೆಗಳ ಪ್ರಮಾಣಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ಡಬ್ಲ್ಯೂಎಂಒ ಸಂಸ್ಥೆ ತಿಳಿಸಿದೆ.
ಹವಾಮಾನ ಬದಲಾವಣೆಯು ಜಗತ್ತಿನಾದ್ಯಂತ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಒಂದೆಡೆ ಪ್ರವಾಹ ಮತ್ತೊಂದೆಡೆ ಬರ ಪರಿಸ್ಥಿತಿ ಕಾಣಿಸಿಕೊಳ್ಳುತ್ತಿದೆ. ಗುಳೆ ಹೋಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಜೀವವೈವಿಧ್ಯ ನಶಿಸಿ ಹೋಗುತ್ತಿದೆ. ಆಹಾರ ಅಭದ್ರತೆ ಹೆಚ್ಚಾಗುತ್ತಿದೆ. ಹವಾಮಾನ ಬಿಕ್ಕಟ್ಟು ಮಾನವೀಯತೆ ಎದುರಿಸುತ್ತಿರುವ ಸವಾಲಾಗಿದೆ. ಅಸಮಾನತೆಯ ಬಿಕ್ಕಟ್ಟಿನೊಂದಿಗೆ ಇದು ನಿಕಟ ಸಂಬಂಧ ಹೊಂದಿದೆ.
ಆಹಾರ ಬಿಕ್ಕಟ್ಟು
ಪ್ರಪಂಚದಾದ್ಯಂತ ಜನರನ್ನು ತೀವ್ರವಾಗಿ ಆಹಾರ ಬಿಕ್ಕಟ್ಟು ಕಾಡುತ್ತಿದೆ. ಕೋವಿಡ್ ಸಾಂಕ್ರಾಮಿಕದ ಮೊದಲು ಆಹಾರ ಅಸುರಕ್ಷಿತ ಬಾಧಿತ ಜನರ ಸಂಖ್ಯೆಯು 14.90 ಕೋಟಿಯಷ್ಟಿತ್ತು. 2023 ರ ಕೊನೆಯಲ್ಲಿ ಅದು 33.03 ಕೋಟಿಗೆ ದ್ವಿಗುಣಗೊಂಡಿದೆ.
ಭರವಸೆಯ ಬೆಳಕು
ಹವಾಮಾನ ಬದಲಾವಣೆ ಎಫೆಕ್ಟ್ ತಗ್ಗಿಸಲು ಯುಎನ್‌ನ ಹವಾಮಾನ ಮತ್ತು ಹವಾಮಾನ ಏಜೆನ್ಸಿಯು ಭರವಸೆಯೊಂದನ್ನು ವ್ಯಕ್ತಪಡಿಸಿದೆ. ನವೀಕರಿಸಬಹುದಾದ ಶಕ್ತಿ ಉತ್ಪಾದನೆಯನ್ನು ಹೆಚ್ಚಿಸುತ್ತಿದೆ. ಕಳೆದ ವರ್ಷ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದೆ. ಸೌರ, ಗಾಳಿ ಮತ್ತು ಜಲವಿದ್ಯುತ್‌ನಿಂದ 2022 ರಿಂದ ಸುಮಾರು 50% ನಷ್ಟು ಉತ್ಪಾದನೆಯು ಹೆಚ್ಚಾಗಿದೆ ಎಂದು ಡಬ್ಲ್ಯೂಎಂಒ ಮಾಹಿತಿ ನೀಡಿದೆ.
ಕಾಲ ಮಿಂಚಿ ಹೋಗಿದೆಯೇ?
ಭೂಮಿಯ ದೀರ್ಘಾವಧಿಯ ಉಷ್ಣತೆಯ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್ ಮಿತಿಗಿಂತ ಕೆಳಗಿರಿಸಲು ಮತ್ತು ಹವಾಮಾನ ಅವ್ಯವಸ್ಥೆಯಿಂದ ಆಗುತ್ತಿರುವ ಪರಿಣಾಮವನ್ನು ತಪ್ಪಿಸಲು ಜಗತ್ತಿಗೆ ಇನ್ನೂ ಅವಕಾಶವಿದೆ ಎಂದು ಗುಟೆರಸ್ ಒತ್ತಿ ಹೇಳಿದ್ದಾರೆ. ಅದನ್ನು ಹೇಗೆ ಮಾಡಬೇಕೆಂದು ನಮಗೆ ತಿಳಿದಿದೆ ಎಂದಿದ್ದಾರೆ.