ಬ್ರಹ್ಮಾಂಡ ಅನ್ನೋದು ಒಂದು ವಿಸ್ಮಯ ಮತ್ತು ವಿಶಿಷ್ಟ. ಕೋಟ್ಯಂತರ ಗ್ಯಾಲಕ್ಸಿಗಳು ಈ ಬ್ರಹ್ಮಾಂಡದಲ್ಲಿವೆ. ಅದರಲ್ಲಿ ನಮ್ಮದೊಂದು ಕ್ಷೀರಪಥ (ಮಿಲ್ಕಿವೇ) ಗ್ಯಾಲಕ್ಸಿ. ಇದರಲ್ಲಿನ ವಿಶಿಷ್ಟ ಎಂದರೆ ಅದು ನಮ್ಮ ಭೂಮಿ. ಜೀವಿಗಳಿರುವ ಏಕೈಕ ಗ್ರಹ. ಜೀವ ವಿಕಾಸಗೊಳ್ಳುತ್ತಾ ವಿಜ್ಞಾನ, ತಂತ್ರಜ್ಞಾನ ಬೆಳೆದಂತೆ ಅನ್ಯಗ್ರಹಗಳ ಶೋಧವೂ ನಡೆಯುತ್ತಿದೆ. ಅನ್ಯಗ್ರಹಗಳಲ್ಲಿ ಖನಿಜ ಸಂಪತ್ತು, ಜೀವಶೋಧ ಕೂಡ ನಡೆದಿದೆ.
ಅನ್ಯಗ್ರಹಗಳಲ್ಲಿ ಜೀವಶೋಧದ ಹಿಂದೆ ಮಾನವನ ಸ್ವಾರ್ಥವಿದೆ. ಭೂಮಿಯಲ್ಲಿ ಮಾನವನ ವಾಸಕ್ಕೆ ಪೂರಕವಾಗಿದ್ದ ಸಂಪತ್ತು ಬರಿದಾಗುತ್ತಿದೆ. ಈ ಹೊತ್ತಿನಲ್ಲಿ ಮಾನವನಿಗೆ ಹೊಸದೊಂದು ಮನೆಯ ಅಗತ್ಯವಿದೆ. ಅದಕ್ಕಾಗಿ ಭೂಮಿಯನ್ನೇ ಹೋಲುವ ಮತ್ತೊಂದು ಗ್ರಹವಿದ್ದರೆ ಅಲ್ಲೇ ಬಿಡಾರ ಹೂಡುವ ತವಕದಲ್ಲಿ ಮನುಷ್ಯನಿದ್ದಾನೆ. ಅಕಸ್ಮಾತ್ ಅನ್ಯಗ್ರಹದಲ್ಲಿ ಜೀವಶೋಧ ಮಾಡಿದ್ದೇ ಆದಲ್ಲಿ ಮುಂದೊಂದು ದಿನ ಅಲ್ಲಿಗೆ ಗುಳೆ ಹೋಗಬಹುದು ಎಂಬುದು ಈ ಅನ್ವೇಷಣೆಯ ತರ್ಕ. ಈ ತರ್ಕಕ್ಕೆ ಪುಷ್ಠಿ ನೀಡುವಂತಹ ಅನ್ವೇಷಣೆಯೊಂದನ್ನು ಅಮೆರಿಕದ ನಾಸಾ (NASA) ಮಾಡಿದೆ. ಇದನ್ನೂ ಓದಿ: ಭೂಮಿ ಕಕ್ಷೆ ತೊರೆದ ಆದಿತ್ಯ ಎಲ್1 ನೌಕೆ – 110 ದಿನಗಳ ಸೂರ್ಯ ಯಾತ್ರೆ ಆರಂಭ
Advertisement
Advertisement
ಅನ್ಯಗ್ರಹ ಹಾಗೂ ಜೀವಶೋಧದ ಪ್ರಯತ್ನದಲ್ಲಿ ಮುಂಚೂಣಿಯಲ್ಲಿರುವ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯೆಂದರೆ ಅದು ಅಮೆರಿಕದ ನಾಸಾ. ಈಗ ಅದು ಬಿಡುಗಡೆ ಮಾಡಿರುವ ಅಧ್ಯಯನದ ವರದಿ ವಿಜ್ಞಾನ ಲೋಕದಲ್ಲಿ ಅಚ್ಚರಿ ಜೊತೆಗೆ ಕುತೂಹಲ ಮೂಡಿಸಿದೆ. ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು ಬಹಿರಂಗಪಡಿಸಿದ ಹೊಸ ಪುರಾವೆಗಳ ಪ್ರಕಾರ, ಭೂಮಿಯಿಂದ ಸುಮಾರು 120 ಜ್ಯೋರ್ತಿವರ್ಷ ದೂರದಲ್ಲಿರುವ ಬೃಹತ್ ಗ್ರಹದ ಮೇಲ್ಮೈನಲ್ಲಿ ನೀರಿನ ಕುರುಹು ಇರುವ ಸಾಧ್ಯತೆ ಇದೆ ಎಂದು ಹೇಳಿದೆ.
Advertisement
ಯಾವುದು ಈ ಗ್ರಹ?
K2-18b ಒಂದು ಕುತೂಹಲಕಾರಿ ಎಕ್ಸೋಪ್ಲಾನೆಟ್. ಮತ್ತೊಂದು ನಕ್ಷತ್ರವನ್ನು ಸುತ್ತುವ ಗ್ರಹವಿದು. ಕೆಪ್ಲರ್ ಬಾಹ್ಯಾಕಾಶ ದೂರದರ್ಶಕದ K2 ಮಿಷನ್‌ನಿಂದ 2015 ರಲ್ಲಿ ಇದನ್ನು ಕಂಡುಹಿಡಿಯಲಾಯಿತು. ನಮ್ಮ ಸೂರ್ಯನಿಗಿಂತ ತಂಪಾದ ಕುಬ್ಜ ನಕ್ಷತ್ರ K2-18 ಅನ್ನು ಈ ಎಕ್ಸೋಪ್ಲಾನೆಟ್ ಸುತ್ತುತ್ತಿದೆ. ಇದು ನಕ್ಷತ್ರದ ವಾಸಯೋಗ್ಯ ಅಥವಾ ಗೋಲ್ಡಿಲಾಕ್ಸ್ ವಲಯದಲ್ಲಿದೆ. ನಮ್ಮ ಭೂಮಿಗಿಂತ 8.6 ಪಟ್ಟು ದೊಡ್ಡದಾಗಿದೆ. ಈ ಗ್ರಹವು ನೀರು ಮತ್ತು ಜೀವಿಗಳಿಗೆ ಸಂಬಂಧಿಸಿದ ಕುರುಹುಗಳನ್ನು ಹೊಂದಿದೆ ಎಂದು ಬಾಹ್ಯಾಕಾಶ-ಆಧಾರಿತ ವೀಕ್ಷಣಾಲಯ ಸಂಶೋಧನೆ ಬಹಿರಂಗಪಡಿಸಿದೆ. ಗ್ರಹವು ತನ್ನ ವಾತಾವರಣದಲ್ಲಿ ಹೇರಳವಾದ ಮೀಥೇನ್ ಮತ್ತು ಕಾರ್ಬನ್ ಡೈಆಕ್ಸೈಡ್ ಅನ್ನು ಹೊಂದಿದೆ ಎಂದು ಅಧ್ಯಯನ ವರದಿ ತಿಳಿಸಿದೆ. ಇದನ್ನೂ ಓದಿ: ಭೂಮಿಗೆ ಅಪ್ಪಳಿಸಿದ ‘ಫೈರ್‌ಬಾಲ್’; ಇದು ಅನ್ಯಗ್ರಹ ತಂತ್ರಜ್ಞಾನವೇ? – ಅಮೆರಿಕ ವಿಜ್ಞಾನಿ ಹೇಳಿದ್ದೇನು?
Advertisement
ನಾಸಾದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ. ಇದನ್ನು 2021 ರ ಕೊನೆಯಲ್ಲಿ ಉಡಾವಣೆ ಮಾಡಲಾಗಿತ್ತು. ದೊಡ್ಡ ದೂರದರ್ಶಕವು ಈಗ ಈ ಎಕ್ಸೋಪ್ಲಾನೆಟ್‌ನ ವಾತಾವರಣವನ್ನು ವೀಕ್ಷಿಸಿದೆ ಮತ್ತು ಅಳತೆ ಮಾಡಿದೆ.
ಈ ಕಾರ್ಬನ್-ಬೇರಿಂಗ್ ಅಣುಗಳ ಉಪಸ್ಥಿತಿಯು ಅಮೋನಿಯದ ಕೊರತೆಯೊಂದಿಗೆ, ಸಾಗರ ವಲಯವನ್ನು ಸುತ್ತುವರೆದಿರುವ ಜಲಜನಕದಿಂದ ಸಮೃದ್ಧವಾಗಿರುವ ವಾತಾವರಣವನ್ನು ಸೂಚಿಸುತ್ತದೆ. ಕಾರ್ಬನ್ ಅನ್ನು ಭೂಮಿಯ ಮೇಲಿನ ಜೀವ-ರೂಪಗಳ ಬಿಲ್ಡಿಂಗ್ ಬ್ಲಾಕ್ ಎಂದು ಪರಿಗಣಿಸಲಾಗಿದೆ. ಹಬಲ್ ಬಾಹ್ಯಾಕಾಶ ದೂರದರ್ಶಕವು ಆರಂಭದಲ್ಲಿ ಎಕ್ಸೋಪ್ಲಾನೆಟ್‌ನ ವಾತಾವರಣದಲ್ಲಿ ನೀರಿನ ಆವಿಯ ಪುರಾವೆಗಳನ್ನು ಗುರುತಿಸಿತು. ಇದು ಗ್ರಹದ ಹೆಚ್ಚಿನ ಅಧ್ಯಯನಕ್ಕೆ ವಿಜ್ಞಾನಿಗಳಿಗೆ ಸಹಾಯ ಮಾಡಿತು. ಇದನ್ನೂ ಓದಿ: PublicTV Explainer: ನೀಲಿ ಆರ್ಥಿಕತೆ ಎಂದರೇನು? – ಭಾರತದಲ್ಲಿ ಹೇಗೆ ಕೆಲಸ ಮಾಡುತ್ತಿದೆ; ಕರ್ನಾಟಕದಲ್ಲಿ ನಿರೀಕ್ಷೆ ಏನು?
ಮಾನವನ ಕಣ್ಣಿಗೆ ಕಾಣದ ಅತಿಗೆಂಪು ಬೆಳಕನ್ನು ಪತ್ತೆಹಚ್ಚಬಲ್ಲ ವೆಬ್ ಟೆಲಿಸ್ಕೋಪ್, ಈ ಗ್ರಹದ ವಾತಾವರಣದಲ್ಲಿ ಯಾವ ಅಂಶಗಳು ಮತ್ತು ಸಂಯುಕ್ತಗಳು ಕಾಣಿಸಿಕೊಂಡಿವೆ ಎಂಬುದನ್ನು ನಿಖರವಾಗಿ ಹುಡುಕಿದೆ. ಅಷ್ಟೇ ಅಲ್ಲ, K2-18b ನಲ್ಲಿ ಡೈಮಿಥೈಲ್ ಸಲ್ಫೈಡ್ ಎಂದು ಕರೆಯಲ್ಪಡುವ ಒಂದು ವಿಶೇಷವಾದ ಅಣುವು ಇರಬಹುದೆಂದು ಸುಳಿವು ನೀಡಿದೆ. ಡೈಮಿಥೈಲ್ ಸಲ್ಫೈಡ್ ಇಂಗಾಲ, ಹೈಡ್ರೋಜನ್ ಮತ್ತು ಸಲ್ಫರ್‌ನಿಂದ ಮಾಡಲ್ಪಟ್ಟ ಆಸಕ್ತಿದಾಯಕ ಅಣುವಾಗಿದೆ. ಭೂಮಿಯ ಮೇಲೆ ಇದು ಸಾಮಾನ್ಯವಾಗಿ ಸ್ವಲ್ಪ ವಾಸನೆಯಿಂದ ಕೂಡಿರುತ್ತದೆ. ಆದರೆ ಇದು ಜೀವನದೊಂದಿಗೆ ನಿಕಟ ಸಂಬಂಧ ಹೊಂದಿದೆ. ನಮ್ಮ ಗ್ರಹದಲ್ಲಿ ಡೈಮಿಥೈಲ್ ಸಲ್ಫೈಡ್ ಅನ್ನು ರಚಿಸುವ ಏಕೈಕ ಪ್ರಕ್ರಿಯೆಯು ಜೀವನವಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಸಾಗರ ಜೀವಿಗಳು ಮತ್ತು ಪ್ಲ್ಯಾಂಕ್ಟನ್ ಅದನ್ನು ವಾಯು ರೂಪದಲ್ಲಿ ಹೊರಸೂಸುತ್ತವೆ. ಹೀಗಾಗಿ ಅನ್ಯಲೋಕದ ಸಾಗರ ಕುರುಹುಗಳ ಬಗ್ಗೆ ವಿಜ್ಞಾನಿಗಳು ಉತ್ಸುಕರಾಗಿದ್ದಾರೆ. ಅದು ನಿಜವಾಗಿದ್ದರೆ, ಜೀವನಕ್ಕೆ ಸಿಕ್ಕ ಆಧಾರವೇ ಆಗುತ್ತದೆ.
ಅನ್ಯಗ್ರಹ ಜೀವಿಗಳಿವೆಯೇ?
K2-18b ಎಕ್ಸೋಪ್ಲಾನೆಟ್‌ನಲ್ಲಿ ಅನ್ಯಲೋಕದ ಜೀವಿಗಳಿವೆ ಎಂದು ಸಂಶೋಧಕರು ಸಾರಾಸಗಟಾಗಿ ಸೂಚಿಸುತ್ತಿಲ್ಲ. ಡೈಮಿಥೈಲ್ ಸಲ್ಫೈಡ್ ಇರುವಿಕೆಯನ್ನು ಖಚಿತಪಡಿಸಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಖಗೋಳ ಭೌತಶಾಸ್ತ್ರ ಮತ್ತು ಬಾಹ್ಯ ಗ್ರಹ ವಿಜ್ಞಾನದ ಪ್ರಾಧ್ಯಾಪಕ ಖಗೋಳಶಾಸ್ತ್ರಜ್ಞ ನಿಕ್ಕು ಮಧುಸೂಧನ್ ತಿಳಿಸಿದ್ದಾರೆ. ವಿಜ್ಞಾನಿಗಳು ಈ ಎಕ್ಸೋಪ್ಲಾನೆಟ್‌ನಲ್ಲಿ ರಾಸಾಯನಿಕ ಸಂಯುಕ್ತ ಇರುವುದನ್ನು ದೃಢೀಕರಿಸಿದರೂ, ಅಲ್ಲಿ ಜೀವ-ರೂಪಗಳು ಅಸ್ತಿತ್ವದಲ್ಲಿವೆ ಎಂದು ಖಾತರಿ ನೀಡಿಲ್ಲ. ಆದರೆ ಈ ಹೊಸ ಪುರಾವೆಗಳು ಕೆ2-18ಬಿಗೆ ಹೋಲುವ ಗ್ರಹಗಳ ಬಗ್ಗೆ ವಿಜ್ಞಾನಿಗಳ ತಿಳುವಳಿಕೆಯನ್ನು ವಿಸ್ತರಿಸುತ್ತದೆ.
ಬಿಸಿ ಸಾಗರ ಪ್ರಪಂಚವೇ?
ಈ ಗ್ರಹದ ವಾತಾವರಣ ಸಂಯೋಜನೆ ಕುರಿತು ಸಂಶೋಧನೆ ಕೆಲವೊಂದು ವಿವರಗಳನ್ನು ನೀಡಿದೆ. ಇದು “ಹೈಸಿಯನ್ ಎಕ್ಸೋಪ್ಲಾನೆಟ್” ಆಗಿರಬಹುದು ಎಂದು ಹೇಳಲಾಗುತ್ತಿದೆ. ಅಂದರೆ ಹೈಡ್ರೋಜನ್ ವಾತಾವರಣದೊಂದಿಗೆ ಬಿಸಿಯಾದ, ನೀರಿನಿಂದ ಆವೃತವಾದ ಗ್ರಹವಿರಬಹುದು ಎನ್ನಲಾಗಿದೆ.
ಈ ಸಂಶೋಧನೆ ಕುರಿತು ಮಾತನಾಡಿರುವ ಖಗೋಳಶಾಸ್ತ್ರಜ್ಞ ಮಧುಸೂದನ್ ಅವರು, “ವಾಸಯೋಗ್ಯ ಬಹಿರ್ಗ್ರಹದಲ್ಲಿ ಜೀವವನ್ನು ಗುರುತಿಸುವುದೇ ನಮ್ಮ ಅಂತಿಮ ಗುರಿ. ನಮ್ಮ ಸಂಶೋಧನೆಗಳು ಹೈಸಿಯನ್ ಪ್ರಪಂಚದ ಬಗ್ಗೆ ಆಳವಾದ ತಿಳುವಳಿಕೆಗೆ ಭರವಸೆಯ ಹೆಜ್ಜೆಯಾಗಿದೆ” ಎಂದು ತಿಳಿಸಿದ್ದಾರೆ. ಸಂಶೋಧಕರು ದೂರದ ಗ್ರಹವನ್ನು ಅಧ್ಯಯನ ಮಾಡಲು ವೆಬ್ ದೂರದರ್ಶಕ ಬಳಸುವುದನ್ನು ಮುಂದುವರಿಸಲು ಯೋಜಿಸಿದ್ದಾರೆ. ಹೊಸ ಸಂಶೋಧನೆಗಳನ್ನು ಮತ್ತಷ್ಟು ಮೌಲ್ಯೀಕರಿಸುವ ಪ್ರಯತ್ನದಲ್ಲಿದ್ದಾರೆ. ಇದನ್ನೂ ಓದಿ: ಚಂದ್ರನ ದಕ್ಷಿಣ ಧ್ರುವದಲ್ಲಿ ಗಂಧಕ ಪತ್ತೆ ಹಚ್ಚಿದ ಚಂದ್ರಯಾನ-3
ಭೂಮಿ ಹೋಲುವ ಸಪ್ತ ಗ್ರಹ ಪತ್ತೆ ಹಚ್ಚಿದ್ದ ನಾಸಾ
ಅಮೆರಿಕದ ನಾಸಾ ಭೂಮಿಯನ್ನು ಹೋಲುವ 7 ಗ್ರಹಗಳನ್ನು ಪತ್ತೆ ಹಚ್ಚಿತ್ತು. ಈ ಸಂಬಂಧ 2017ರ ಫೆ.22 ರಂದು ವರದಿ ಕೂಡ ಪ್ರಕಟವಾಗಿತ್ತು. ಸೌರಮಂಡಲದಾಚೆ ಭೂಮಿಯನ್ನೇ ಹೋಲುವ 7 ಗ್ರಹಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದರು. ಇವುಗಳಲ್ಲಿ ಕೆಲವು ವಾಸಯೋಗ್ಯ ಗ್ರಹಗಳಿವೆ ಎಂದು ಸಹ ಹೇಳಿದ್ದರು.
ಹೊಸ ಸೌರಮಂಡಲದಲ್ಲಿ ಕುಬ್ಜ ನಕ್ಷತ್ರ ಸುತ್ತುವ 7 ಗ್ರಹಗಳಿವೆ. ಅವುಗಳ ಪೈಕಿ ಮೂರು ಗ್ರಹಗಳಲ್ಲಿ ಜೀವಿಗಳು ವಾಸಿಸುವ ಯೋಗ್ಯವಾದ ವಾತಾವರಣವಿದೆ. ಇಲ್ಲಿ ನೀರಿನ ಸೆಲೆ ಕಂಡು ಬಂದಿದೆ. ಸೂರ್ಯನಿಗೆ 200 ಪಟ್ಟು ಕಾಂತಿಹೀನವಾಗಿರುವ ನಕ್ಷತ್ರವೊಂದರ ಸುತ್ತಲೂ ಈ ಗ್ರಹಗಳು ತಿರುಗುತ್ತಿವೆ. ಈ ಸೌರಮಂಡಲ ಭೂಮಿಯಿಂದ ಸುಮಾರು 40 ಜೋತಿರ್ವರ್ಷಗಳಷ್ಟು ದೂರವಿದೆ. ಈ ಸೌರಮಂಡಲದ ಕೇಂದ್ರ ಬಿಂದುವಾದ ಕುಬ್ಜ ನಕ್ಷತ್ರಕ್ಕೆ Trappist-1 ಎಂದು ಹೆಸರಿಡಲಾಗಿದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದರು. ಈ ರೀತಿ ಬೇರೆ ಬೇರೆ ಸೌರಮಂಡಲದಲ್ಲಿ ಕುತೂಹಲಕಾರಿ ಗ್ರಹಗಳು ಪತ್ತೆಯಾಗುತ್ತಲೇ ಇವೆ. ಈ ಬಗ್ಗೆ ಹೆಚ್ಚಿನ ಅಧ್ಯಯನಗಳು ಕೂಡ ನಡೆಯುತ್ತಿವೆ.
Web Stories