ಬೆಳಗಾವಿ: ಬಸ್ ಟಿಕೆಟ್ ದರ ಹೆಚ್ಚಿಸುವ ಚಿಂತನೆಯಲ್ಲಿದ್ದೇವೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆ (Raju Kage) ತಿಳಿಸಿದ್ದಾರೆ.
ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಂತರ ಬಸ್ ಟಿಕೆಟ್ ದರ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿರುವ ಬಗ್ಗೆ ರಾಜು ಕಾಗೆ ಸುಳಿವು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಡಿಸೇಲ್ ಹಾಗೂ ಬಸ್ ಸ್ಪೇರ್ ಪಾರ್ಟ್ಸ್‌ಗಳ ದರ ಕೂಡ ಹೆಚ್ಚಾಗಿದೆ. ಕಳೆದ 10 ವರ್ಷಗಳಿಂದ ಟಿಕೆಟ್ ದರ ಏರಿಕೆ ಮಾಡಿಲ್ಲ. ಶಕ್ತಿ ಯೋಜನೆಯಿಂದ ನಾವು ನಷ್ಟದಲ್ಲಿದ್ದೇವೆ. ಆದರೂ ನಾವು ನಡೆಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರು ಮೆಟ್ರೋ ನಿಲ್ದಾಣಗಳಿಗೆ ಶಂಕರ್ ನಾಗ್, ಅಪರ್ಣಾ ಹೆಸರಿಡಿ: ಸರ್ಕಾರಕ್ಕೆ ಯತ್ನಾಳ್ ಆಗ್ರಹ
ನಿಗಮದ ಆಸ್ತಿಗಳನ್ನು ಪರಭಾರೆ ಮಾಡ್ತೀವಿ. ಸಂಸ್ಥೆಗೆ ಸೇರಿದ ಹಳೆ ಬಿಲ್ಡಿಂಗ್ ನವೀಕರಿಸಿ ಬಾಡಿಗೆ ಕೊಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಕೆಲ ವಾರಗಳ ಹಿಂದೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಟ್ಯಾಕ್ಸ್ ಹೆಚ್ಚಳ ಹಿನ್ನೆಲೆ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ. ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಿಸಿದೆ. ಈ ಹಿಂದೆ ಟ್ಯಾಕ್ಸ್ ದರ ಪೆಟ್ರೋಲ್- 25.92% ಇದ್ದದ್ದು, ಈಗ 29.84% ಗೆ ಏರಿಕೆ (3.9% ಹೆಚ್ಚಳ)ಯಾಗಿದೆ. ಅಂತೆಯೇ ಡಿಸೇಲ್ ಈ ಹಿಂದೆ- 14.34% ಇದ್ದದ್ದು, ಈಗ 18.44%ಗೆ ಏರಿಕೆ ಕಂಡಿದೆ (4.1% ರಷ್ಟು ಏರಿಕೆ). ಇದನ್ನೂ ಓದಿ: ಯಾದಗಿರಿಯಲ್ಲಿ ಕಲುಷಿತ ನೀರು ಸೇವಿಸಿ 9 ಮಂದಿ ಅಸ್ವಸ್ಥ – ಕಾಕಲವಾರ ಗ್ರಾಪಂ ಪಿಡಿಒ ಅಮಾನತು