ಬಾಗಲಕೋಟೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (PKPS) ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಫಲಿತಾಂಶದ ವೇಳೆ ಬಿಜೆಪಿ (BJP) ಹಾಗೂ ಕಾಂಗ್ರೆಸ್ (Congress) ಕಾರ್ಯಕರ್ತರ ಮಧ್ಯೆ ಮಾರಾಮಾರಿಯಾಗಿ ಬಟ್ಟೆ ಹರಿದುಕೊಂಡು ಬಡಿದಾಡಿರುವ ಘಟನೆ ಮುಧೋಳ (Mudhol) ತಾಲೂಕಿನ ರನ್ನಬೆಳಗಾಲಿ (Ranna Belagali) ಗ್ರಾಮದಲ್ಲಿ ನಡೆದಿದೆ.
ಅ. 29 ರಂದು ಈ ಘಟನೆ ನಡೆದಿದ್ದು, ಬಡಿದಾಟದ ವಿಡಿಯೋಗಳು ತಡವಾಗಿ ಬೆಳಕಿಗೆ ಬಂದಿದ್ದು ಸಾಮಾಜಿಕ ಜಾಲತಾಣದಲ್ಲಿ ಈಗ ಹರಿದಾಡುತ್ತಿದೆ.
ರನ್ನಬೆಳಗಲಿ ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಹಾಗೂ ಅಂದೇ ಫಲಿತಾಂಶವಿತ್ತು. ಒಟ್ಟು 13 ಸದಸ್ಯರ ಪಿಕೆಪಿಎಸ್ ಇದಾಗಿದ್ದು 6 ಜನ ಕಾಂಗ್ರೆಸ್ ಬೆಂಲಿತ ಸದಸ್ಯರು, 6 ಜನ ಬಿಜೆಪಿ ಬೆಂಬಲಿತ ಸದಸ್ಯರು, ಇತರೇ ಓರ್ವ ಸದಸ್ಯ ಅಖಾಡದಲ್ಲಿದ್ದರು. ಇದನ್ನೂ ಓದಿ: ರಾಜ್ಯದ ಮದರಸಾಗಳಲ್ಲಿ ಕನ್ನಡ ಕಡ್ಡಾಯ – 90 ದಿನಗಳಲ್ಲಿ ಕನ್ನಡ ಕಲಿಯಲು ಆದೇಶ
ಕಾಂಗ್ರೆಸ್ ಬೆಂಬಲಿತ ಜಗದೀಶ್ ಮಾಳಗಿ, ಹರಳಯ್ಯ ಅವರನ್ನು ಬಿಜೆಪಿ ಸದಸ್ಯರು ಆಪರೇಷನ್ ಮೂಲಕ ತಮ್ಮತ್ತ ಸೆಳೆದಿದ್ದರು. ಹರಳಯ್ಯ ಹಾಗೂ ಜಗದೀಶ್ ಮತದಾನ ಮಾಡಲು ಕಛೇರಿಗೆ ಆಗಮಿಸುತ್ತಿದ್ದಂತೆ, ಕಾಂಗ್ರೆಸ್ ಬೆಂಬಲಿತ ಸದಸ್ಯರು ಅವರನ್ನು ತಡೆದು ಒಳಹೋಗದಂತೆ ನೋಡಿಕೊಂಡರು.
ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಮಧ್ಯೆ ವಾಗ್ವಾದ ಏರ್ಪಟ್ಟು, ಕೈ ಕೈ ಮಿಲಾಯಿಸಿ ಬಡಿದಾಡಿಕೊಂಡಿದ್ದಲ್ಲದೇ, ಬಟ್ಟೆ ಹರಿದುಕೊಂಡು ಕಟ್ಟಿಗೆ ಕೋಲಿನಿಂದ ಬಡಿದಾಡಿಕೊಂಡಿದ್ದಾರೆ. ಸದಸ್ಯರ ಬಡಿದಾಟವನ್ನ ತಡೆಯಲು ಮುಧೋಳ ಪೊಲೀಸರು ಹರಸಾಹಸಪಟ್ಟರು.
ಪರಿಸ್ಥಿತಿ ಹತೋಟಿಗೆ ಬರದೇ ಇದ್ದಾಗ ಲಘು ಲಾಠಿ ಪ್ರಹಾರ ಮಾಡಿದ ಪೊಲೀಸರು ಉದ್ರಿಕ್ತರನ್ನ ಚದುರಿಸಿದ್ದರು. ಮುಧೋಳ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

