ನವದೆಹಲಿ: ಭಾನುವಾರ ದೇಶದ ರಾಜಧಾನಿ ಜನರ ರಕ್ಷಾ ಬಂಧನ ದಿನದಂದು ದೆಹಲಿ ಮೆಟ್ರೋ ತಣ್ಣೀರು ಎರಚಿದೆ. ದೆಹಲಿಯ ಹಳದಿ ಮಾರ್ಗದ ಮೆಟ್ರೋ ತಾಂತ್ರಿಕ ಕಾರಣದಿಂದ ಮಧ್ಯೆದಲ್ಲಿಯೇ ನಿಂತ ಪರಿಣಾಮ ಜನ ಮಾರ್ಗದಲ್ಲೇ ನಡೆದುಕೊಂಡು ಹೋಗಿದ್ದಾರೆ.
ಉತ್ತರ ದೆಹಲಿ ಮತ್ತು ಹರಿಯಾಣದ ಗುರಗಾಂವ್ ನ್ನು ಸಂಪರ್ಕಿಸುವ ರೈಲು ಪ್ರತಿದಿನದಂತೆ ದೆಹಲಿಯ ಹಳದಿ ಮಾರ್ಗದಲ್ಲಿಯೂ ಸಂಚಾರ ಆರಂಭಿಸಿತ್ತು. ಭಾನುವಾರ ರಕ್ಷಾ ಬಂಧನ ಆಗಿರೋದರಿಂದ ಅಂದು ಹೆಚ್ಚಿನ ರೈಲುಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಡಿಎಂಆರ್‍ಸಿ ತಿಳಿಸಿತ್ತು. ಆದ್ರೆ ಸಮಯಪುರ ಬಾದ್ಲಿ- ಹುಡಾ ಸಿಟಿಯ ಮಾರ್ಗ ಮಧ್ಯೆಯೇ ಮೆಟ್ರೋ ರೈಲು ಕೆಟ್ಟು ನಿಂತಿದೆ. ಬರೋಬ್ಬರಿ 3 ಗಂಟೆಗಳವರೆಗೆ ಮಾರ್ಗ ಮಧ್ಯೆದಲ್ಲಿಯೇ ನಿಂತಿದೆ.
ರೈಲು ನಿಲ್ಲುತ್ತಿದ್ದಂತೆ ಆತಂಕಗೊಂಡ ಪ್ರಯಾಣಿಕರು ನಮ್ಮನ್ನು ರಕ್ಷಿಸಿ ಎಂದು ಡಿಎಂಆರ್‍ಸಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಕೊನೆಗೆ ಮೆಟ್ರೋ ಸಿಬ್ಬಂದಿ ರೈಲಿನ ಮುಂಭಾಗದ ತುರ್ತು ನಿರ್ಗಮನದ ಮೂಲಕ ಪ್ರಯಾಣಿಕರನ್ನು ಹೊರ ಬರಲು ಅನುಕೂಲ ಮಾಡಿಕೊಡಲಾಗಿತ್ತು. ಬೆಳಗ್ಗೆ 9.55 ರಿಂದ ಮಧ್ಯಾಹ್ನ 12.40 ರವರೆಗೆ ಹಳದಿ ಮಾರ್ಗದ ಸಮಯಪುರ ಬಾದ್ಲಿ ಮತ್ತು ಹೂಡಾ ಸಿಟಿ ನಡುವಿನ ಸಂಚಾರ ಬಂದ್ ಆಗಿತ್ತು.
ರಕ್ಷಾ ಬಂಧನಕ್ಕೆ ವಿಶೇಷ ಸೌಲಭ್ಯ ಕಲ್ಪಿಸಲಾಗುವುದು ಹೇಳಿದ್ದ ಡಿಎಂಆರ್‍ಸಿ ತನ್ನ ಮಾತು ತಪ್ಪಿದೆ ಎಂದು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಅಸಮಾಧಾನ ಹೊರಹಾಕಿದ್ದಾರೆ. ಮಾರ್ಗ ಮಧ್ಯೆಯೇ ಇಳಿದಿದ್ದರಿಂದ ಸುಮಾರು 500 ಮೀಟರ್ ವರೆಗೆ ನಡೆದುಕೊಂಡು ಬಂದು ಮುಂದಿನ ನಿಲ್ದಾಣ ತಲುಪಬೇಕಾಯಿತು. ಅಲ್ಲಿಯೂ ಸಹ ನೂರಾರು ಪ್ರಯಾಣಿಕರು ಮೆಟ್ರೋಗಾಗಿ ಕಾಯುತ್ತಿದ್ದರೆಂದು ರೈಲಿನಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬರು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv