ಮಂಗಳೂರು: ಪ್ರಸಿದ್ಧ ಪಿಲಿಕುಳ ಮೃಗಾಲಯದ (Pilikula Biological Park) ಅವ್ಯವಸ್ಥೆ ಕಂಡು ಹೈಕೋರ್ಟ್ (High Court) ನ್ಯಾಯಾಧೀಶರೇ ಶಾಕ್ ಆಗಿದ್ದಾರೆ. ಪ್ರಾಣಿಗಳ ದಯನೀಯ ಸ್ಥಿತಿ ಕಂಡು ಕೆಂಡಾಮಂಡಲವಾಗಿರೋ ನ್ಯಾಯಪೀಠ, ಪ್ರಾಣಿಗಳನ್ನು ಸರಿಯಾಗಿ ನೋಡಿಕೊಳ್ಳಲು ಆಗದಿದ್ರೆ ತಕ್ಷಣ ಮೃಗಾಲಯ ಬಂದ್ ಮಾಡಿ ಅಂತ ಸರ್ಕಾರಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದೆ.
ಸುಮಾರು 370 ಎಕರೆಗಳಷ್ಟು ವಿಶಾಲವಾಗಿ ಹಬ್ಬಿರೋ ಈ ಪಾರ್ಕ್, ದೇಶದ ಅತ್ಯಂತ ನೈಸರ್ಗಿಕವಾದ ಮೃಗಾಲಯಗಳಲ್ಲಿ ಒಂದು ಅಂತಲೇ ಹೆಸರುವಾಸಿ. ಪಿಲಿ ಅಂದ್ರೆ ಹುಲಿ, ಕುಳ ಅಂದ್ರೆ ಕೆರೆ. ಒಂದು ಕಾಲದಲ್ಲಿ ಹುಲಿಗಳು ಬಂದು ನೀರು ಕುಡಿಯುತ್ತಿದ್ದ ಈ ಜಾಗವನ್ನ ಇಂದು ಅಂತರಾಷ್ಟ್ರೀಯ ಮಟ್ಟದ ಜೈವಿಕ ಉದ್ಯಾನವನವಾಗಿ ರೂಪಿಸಲಾಗಿದೆ. ಪಶ್ಚಿಮ ಘಟ್ಟಗಳ ಅಳಿವಿನಂಚಿನಲ್ಲಿರೋ ವನ್ಯಜೀವಿಗಳಿಗೆ ಆಶ್ರಯ ತಾಣವಾಗಿರೋ ಪಿಲಿಕುಳ, ಕರಾವಳಿಗೆ ಬರೋ ಪ್ರವಾಸಿಗರ ಮೊದಲ ಆಯ್ಕೆ. ಅಂತಹ ಸುಂದರ ತಾಣ ಇಂದು ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟಿದೆ. ಪಿಲಿಕುಳದ ಪರಿಸ್ಥಿತಿ ಯಾವ ಹಂತಕ್ಕೆ ತಲುಪಿದೆ ಅಂದ್ರೆ, ಇಲ್ಲಿನ ಅವ್ಯವಸ್ಥೆ,ಪ್ರಾಣಿಗಳ ದಯಾನೀಯ ಸ್ಥಿತಿ ಕಂಡು ಹೈಕೋರ್ಟ್ ನ್ಯಾಯಧೀಶರೇ ಶಾಕ್ ಆಗಿದ್ದಾರೆ. ಇದನ್ನೂ ಓದಿ: ಮಂಗ್ಳೂರಿನಲ್ಲಿ 1 ಹೆಣ್ಣು 4 ಗಂಡು ಮರಿಗಳಿಗೆ ಜನ್ಮ ನೀಡಿದ ಹುಲಿ
ತುಕ್ಕು ಹಿಡಿದ ಪಂಜರ, ಕಲುಷಿತ ನೀರು, ಅಶುಚಿ ವಾತಾವರಣ, ಸರಿಯಾದ ಆಹಾರ ಇಲ್ಲದೇ ಇರೋದು, ಇದು ಪಿಲಿಕುಳ ಮೃಗಾಲಯದ ಸದ್ಯದ ಸ್ಥಿತಿ. ವನ್ಯಜೀವಿ ಸಂರಕ್ಷಕ ಭುವನ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಪಿಲಿಕುಳ ಮೃಗಾಲಯದ ಕರ್ಮ ಕಾಂಡಗಳು ಹೈಕೋರ್ಟ್‍ನಲ್ಲಿ ಹೊರಬಿದ್ದಿವೆ. ಪ್ರಾಣಿಗಳನ್ನು ಇರಿಸಿರುವ ಪಂಜರಗಳು ಸಂಪೂರ್ಣ ತುಕ್ಕು ಹಿಡಿದಿವೆ, ಅಲ್ಲಿ ಸರಿಯಾದ ಭದ್ರತೆಯೇ ಇಲ್ಲ. ಅಶುಚಿಯಾದ ಪರಿಸರದಲ್ಲಿ ಪ್ರಾಣಿಗಳು ನರಳುತ್ತಿರೋ ಫೋಟೋಗಳನ್ನು ನೋಡಿ ನ್ಯಾಯಪೀಠ ಕೆಂಡಾಮಂಡಲವಾಗಿದೆ.
ಈ ಪಾರ್ಕ್‍ನ ಲೈಸೆನ್ಸ್ ಅವಧಿ 2025ರ ಡಿಸೆಂಬರ್ 1ಕ್ಕೇ ಮುಕ್ತಾಯವಾಗಿದೆ. ಅಂದ್ರೆ ಸದ್ಯ ಯಾವುದೇ ಪರವಾನಗಿ ಇಲ್ಲದೆ ಪಿಲಿಕುಳ ಮೃಗಾಲಯ ನಡೀತಿದೆ. ಇಷ್ಟೆಲ್ಲಾ ಅವ್ಯವಸ್ಥೆ ಬಗ್ಗೆ ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರ 2023 ಮತ್ತು 2025ರಲ್ಲಿ ಶೋಕಾಸ್ ನೋಟಿಸ್ ನೀಡಿದ್ರೂ ಅಧಿಕಾರಿಗಳು ಮಾತ್ರ ಕ್ಯಾರೆ ಅಂದಿಲ್ಲ. ಮಲಿನಗೊಂಡ ನೀರು ಕುಡಿದು, ಸರಿಯಾದ ಚಿಕಿತ್ಸೆ ಸಿಗದೆ ಮೂಕ ಪ್ರಾಣಿಗಳು ಸಾವು-ಬದುಕಿನ ನಡುವೆ ಹೋರಾಟ ಮಾಡ್ತಿವೆ ಅನ್ನೋದು ಅರ್ಜಿದಾರರ ಗಂಭೀರ ಆರೋಪ.
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು, ಪರವಾನಗಿ ವಿಸ್ತರಣೆಗೆ ಅರ್ಜಿ ಸಲ್ಲಿಸಲಾಗಿದೆ. ಅದು ಪರಿಶೀಲನೆಯಲ್ಲಿದೆ ಎಂದು ಸಮರ್ಥನೆ ನೀಡಿದ್ದಾರೆ. ನ್ಯಾಯಾಲಯ ಮಾತ್ರ ಇದನ್ನ ಒಪ್ಪಿಲ್ಲ. ಪ್ರಾಣಿಗಳಿಗೆ ರಕ್ಷಣೆ ನೀಡಲಾಗದಿದ್ರೆ ಅದನ್ನು ಮುಚ್ಚಿಬಿಡಿ ಅಂತಲೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಫೆಬ್ರವರಿ 5ಕ್ಕೆ ಅರ್ಜಿಯ ವಿಚಾರಣೆ ಮುಂದೂಡಲಾಗಿದೆ.

