ನವದೆಹಲಿ: ಕೇದಾರನಾಥ ಗುಹೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ಯಾನ ಮಾಡುವ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಿದ್ದರು. ಈಗ ಪ್ರಧಾನಿ ಅವರ ನಡೆಯನ್ನೇ ಇಲ್ಲಿಗೆ ಬರುವ ಯಾತ್ರಿಕರು ಅನುಸರಿಸುತ್ತಿದ್ದಾರೆ.
ಹೌದು, ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಕ್ಕೂ ಮೊದಲು ಮೇ 18ರಂದು ಮೋದಿ ಅವರು ಕೇದಾರನಾಥದಲ್ಲಿರುವ ಗುಹೆಯಲ್ಲಿ 24 ಗಂಟೆಗಳು ಸುದೀರ್ಘ ಧ್ಯಾನ ಮಾಡಿ ಎಲ್ಲೆಡೆ ಸುದ್ದಿಯಾಗಿದ್ದರು. ಹಾಗೆಯೇ ಹಲವರ ಗಮನ ಸೆಳೆದಿದ್ದರು. ಈಗ ಈ ಗುಹೆಯಲ್ಲಿ ಧ್ಯಾನ ಮಾಡಲು ಯಾತ್ರಿಕರು ತಾ ಮುಂದು ನಾ ಮುಂದು ಅಂತ ಮುಗಿಬಿದ್ದಿದ್ದಾರೆ.
ಕೇದಾರನಾಥ ಗುಹೆಯಲ್ಲಿ ಧ್ಯಾನ ಮಾಡಲು ಯಾತ್ರಿಕರು www.gmvnl.in ಮೂಲಕ 1,500 ರೂ. ಪಾವತಿಸಿ ಬುಕ್ ಮಾಡಬೇಕು. ಬಳಿಕ ಗುಪ್ತಾಕ್ಷಿ ಹಾಗೂ ಕೇದಾರನಾಥದಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ತದನಂತರ ಯಾತ್ರಿಕರು ಆರೋಗ್ಯವಾಗಿದ್ದರೆ ಮಾತ್ರ ಅವರಿಗೆ ಗುಹೆಯಲ್ಲಿ 24 ಗಂಟೆಗಳ ಕಾಲ ಏಕಾಂಗಿಯಾಗಿ ಧ್ಯಾನ ಮಾಡಲು ಅವಕಾಶ ನೀಡಲಾಗುತ್ತದೆ. ಸದ್ಯ ಮುಂದಿನ 10 ದಿನಗಳ ತನಕ ಕೇದಾರನಾಥ ಗುಹೆ ಯಾತ್ರಿಕರ ಧ್ಯಾನಕ್ಕೆ ಬುಕ್ ಆಗಿದೆ.
ಪ್ರಧಾನಿ ಅವರು ಬಂದು ಹೋದ ಬಳಿಕ ಈ ಗುಹೆಯಲ್ಲಿ ಧ್ಯಾನ ಮಾಡಲು ಬರುವ ಯಾತ್ರಿಕರ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಸುಮಾರು 20 ಮಂದಿ ಇಲ್ಲಿ ಧ್ಯಾನ ಮಾಡಿದ್ದಾರೆ. ಅಲ್ಲದೆ ಆನ್‍ಲೈನ್ ಮೂಲಕ ನಾವು ಗುಹೆಯನ್ನು ಬುಕ್ ಮಾಡುವ ಸೌಲಭ್ಯ ಒದಗಿಸಿದ್ದೇವೆ. ಹೀಗಾಗಿ ದೇಶದೆಲ್ಲೆಡೆಯಿಂದ ಯಾತ್ರಿಕರು ಆನ್‍ಲೈನ್ ಬುಕ್ಕಿಂಗ್ ಮಾಡುತ್ತಿದ್ದಾರೆ ಎಂದು ಗರ್ವಾಲ್ ಮಂಡಲ್ ವಿಕಾಸ ನಿಗಮ(ಜಿಎಂವಿಎನ್) ಜನರೆಲ್ ಮ್ಯಾನೇಜರ್ ಬಿ.ಎಲ್ ರಾಣಾ ಅವರು ಹೇಳಿದ್ದಾರೆ.
ಅಷ್ಟೇ ಅಲ್ಲದೆ ಎರಡನೇ ಧ್ಯಾನ ಗುಹೆಯನ್ನು ಕೂಡ ಕೇದಾರನಾಥದಲ್ಲಿ ನಿರ್ಮಿಸಲಾಗುತ್ತಿದೆ. ಇದು ನೈಸರ್ಗಿಕವಾಗಿ ಆದ ಗುಹೆಯಲ್ಲ. ಬದಲಾಗಿ ಬಂಡೆಯಲ್ಲಿ ಕೊರೆದು ಕೃತಕ ಗುಹೆಯನ್ನು ನಿರ್ಮಿಸುತ್ತಿದ್ದೇವೆ. ಆದರೆ ಇದು ಕಾರ್ಯ ರೂಪಕ್ಕೆ ಬರಲು ಕೊಂಚ ಸಮಯ ತೆಗೆದುಕೊಳ್ಳುತ್ತದೆ. ಕೇದಾರನಾಥ ದೇಗುಲದಿಂದ ಎಡಕ್ಕೆ ಸುಮಾರು 1 ಕಿ.ಮೀ ಅಂತರದಲ್ಲಿ ರುದ್ರಾ ಧ್ಯಾನ ಗುಹೆ ಇದ್ದು, ಇದರಲ್ಲಿ ಮೋದಿ ಅವರೇ ಮೊದಲು ಧ್ಯಾನ ಮಾಡಿದ್ದು ಎಂದು ರಾಣಾ ಅವರು ತಿಳಿಸಿದ್ದಾರೆ.
ರುದ್ರಾ ಗುಹೆಯಲ್ಲಿ ಧ್ಯಾನ ಮಾಡಲು ಆನ್‍ಲೈನ್‍ನಲ್ಲಿ ಬುಕ್ ಮಾಡಿದ ಯಾತ್ರಿಕರು ತಾವು ಬುಕ್ಕಿಂಗ್ ಮಾಡಿದ ದಿನಾಂಕಕ್ಕಿಂತ ಎರಡು ದಿನಗಳ ಮೊದಲೇ ಕೇದಾರನಾಥದ ಬೇಸ್ ಕ್ಯಾಂಪ್ ಆಗಿರುವ ಗುಪ್ತಾಕ್ಷಿಗೆ ತಲುಪಬೇಕು. ಅಲ್ಲಿ ಕೇದಾರನಾಥ ದೇಗುಲಕ್ಕೆ ಹೋದುವ ಎಲ್ಲಾ ಯಾತ್ರಿಕರಿಗೂ ವೈದ್ಯಕೀಯ ತಪಾಸಣೆ ಮಾಡಲಾಗುತ್ತದೆ. ಬಳಿಕ ಯಾತ್ರಿಕರು ಗುಪ್ತಾಕ್ಷಿಯಿಂದ ಕೇದಾರನಾಥ ದೇಗುಲ ತಲುಪಿದ ಬಳಿಕ ಮತ್ತೆ ಅಲ್ಲಿ ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಆ ನಂತರ ಯಾತ್ರಿಕರು ಆರೋಗ್ಯವಾಗಿದ್ದರೆ ಮಾತ್ರ ಅವರಿಗೆ ಗುಹೆ ಒಳಗೆ ಕಳುಹಿಸಲಾಗುತ್ತದೆ.
ಹಾಗೆಯೇ ಮೂರು ದಿನಕ್ಕಿಂತ ಹೆಚ್ಚು ದಿನಗಳ ಕಾಲ ಗುಹೆ ಬುಕ್ ಮಾಡುವಂತಿಲ್ಲ. ಒಂದು ಬಾರಿಗೆ ಕೇವಲ ಓರ್ವ ಯಾತ್ರಿಕರಿಗೆ ಮಾತ್ರ ಗುಹೆಗೆ ಪ್ರವೇಶ ನೀಡಲಾಗುತ್ತದೆ. ಜೊತೆಗೆ ಗುಹೆಯಲ್ಲಿ ಫೋನ್ ವ್ಯವಸ್ಥೆ ಕೂಡ ಇದೆ. ಒಂದು ವೇಳೆ ತುರ್ತು ಪರಿಸ್ಥಿತಿ ಎದುರಾದರೆ ಫೋನ್ ಮೂಲಕ ಜಿಎಂವಿಎನ್ ಸಿಬ್ಬಂದಿಯನ್ನು ಸಂಪರ್ಕಿಸಬಹುದು. ಇದೇ ರೀತಿ ಆಧುನಿಕ ಗುಹೆಗಳು ಕೂಡ ಕೇದಾರನಾಥ ಹಾಗೂ ಬದರಿನಾಥ ದೇಗುಲದ ಅಕ್ಕಪಕ್ಕದ ಪರ್ವತಗಳಲ್ಲಿ ನಿರ್ಮಾಣ ಮಾಡಲಾಗಿದೆ.
ಗುಹೆಗೆ ಬಂದ ಯಾತ್ರಿಕರಿಗೆ ಜಿಎಂವಿಎನ್ ಕುಡಿಯುವ ನೀರಿನ ವ್ಯವಸ್ಥೆ, ಊಟ, ಶೌಚಾಲಯ, ವಿದ್ಯುತ್ ಸಂಪರ್ಕ ಹಾಗೂ ಮಲಗಲು ಹಾಸಿಗೆ ಹೀಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸಿಕೊಡುತ್ತದೆ. ಆದರೆ ಒಂದು ಸಲ ಗುಹೆಯನ್ನು ಆನ್‍ಲೈನ್ ಬುಕ್ ಮಾಡಿದ ಬಳಿಕ ಬುಕ್ಕಿಂಗ್ ಅನ್ನು ರದ್ದು ಮಾಡಿದರೆ ಅಥವಾ ಕಾರಣಾಂತರಗಳಿಂದ ಗುಹೆಯಲ್ಲಿ ಇರಲು ಯಾತ್ರಿಕರು ನಿರಾಕರಿಸಿದರೆ ಪಾವತಿಸಿದ ಹಣವನ್ನು ವಾಪಸ್ ನೀಡುವುದಿಲ್ಲ. ಹಾಗೆಯೇ ಒಂದು ವೇಳೆ ಮಾಡಿದ್ದ ಬುಕ್ಕಿಂಗ್ ರದ್ದಾದಲ್ಲಿ ಆ ದಿನ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಸ್ಥಳದಲ್ಲಿದ್ದ ಯಾತ್ರಿಕರಿಗೆ 990 ರೂಪಾಯಿಯಲ್ಲಿ ಗುಹೆಯಲ್ಲಿ ಧ್ಯಾನ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ಅಲ್ಲಿನ ಆಡಳಿತ ಮಂಡಳಿ ತಿಳಿಸಿದೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]