ರಾಯಚೂರು: ಕೋವಿಡ್ (COVID 19) ನಾಲ್ಕನೇ ಅಲೆ ಆತಂಕ ಹಿನ್ನೆಲೆ ರಾಯಚೂರಿನಲ್ಲಿ ರಿಮ್ಸ್ ಆಸ್ಪತ್ರೆ ಅಗತ್ಯ ಸಿದ್ಧತೆಗಳನ್ನ ಮಾಡುಕೊಳ್ಳುತ್ತಿದೆ. ಆಡಳಿತ ಅಧಿಕಾರಿಗಳು ಈಗಾಗಲೇ ಮಾಕ್ ಡ್ರಿಲ್ ನಡೆಸಿ ಸಿಬ್ಬಂದಿಯನ್ನ ಚುರುಕುಗೊಳಿಸಿದ್ದಾರೆ. ಆದರೆ ಪ್ರತಿಷ್ಠಿತ ರಿಮ್ಸ್ (RIMS Hospital) ಹಾಗೂ ಓಪೆಕ್ ಆಸ್ಪತ್ರೆ (Opec Rajivgandhi Memorial Hospital) ಗೆ ಬರಲು ಸಾಮಾನ್ಯ ರೋಗಿಗಳು ಹೆದರುತ್ತಿದ್ದಾರೆ.
ಇಡೀ ರಾಜ್ಯದಲ್ಲಿ ವೈದ್ಯಕೀಯ ವಿಜ್ಞಾನಗಳ ಬೋಧಕ ಆಸ್ಪತ್ರೆಗಳಲ್ಲಿ ಟಾಪ್ 10 ನಲ್ಲಿರೋ ರಾಯಚೂರಿನ ರಿಮ್ಸ್ ಆಸ್ಪತ್ರೆ ಅಂದ್ರೆ ಇತ್ತೀಚಿಗೆ ರೋಗಿಗಳಿಗೆ ಭಯ ಹುಟ್ಟುತ್ತಿದೆ. ನಮ್ಮಲ್ಲಿ ಎಲ್ಲಾ ಸೌಲಭ್ಯಗಳಿವೆ, ಕೋವಿಡ್ ನಾಲ್ಕನೇ ಅಲೆ ಎದುರಿಸಲು ಸಹ ಸನ್ನದ್ದರಾಗಿದ್ದೇವೆ ಅಂತ ಇಲ್ಲಿನ ಆಡಳಿತ ಮಂಡಳಿ ಹೇಳಿಕೊಳ್ಳುತ್ತಿದೆ. ಆದರೆ ಇಲ್ಲಿಗೆ ಬರುವ ರೋಗಿಗಳಿಗೆ ನಾಯಿ, ಕೋತಿ, ಹಂದಿಗಳ ಕಾಟ ವಿಪರೀತವಾಗಿದೆ. ಇಲ್ಲಿನ ಸಮಸ್ಯೆ ಕುರಿತು ನಿಮ್ಮ ಪಬ್ಲಿಕ್ ಟಿವಿ ಸಹ ಈಗಾಗಲೇ ವರದಿಯನ್ನೂ ಮಾಡಿತ್ತು. ಆದ್ರೆ ಓಪೆಕ್ ಹಾಗೂ ರಿಮ್ಸ್ ಆಡಳಿತ ಮಂಡಳಿ ಮಾತ್ರ ಎಚ್ಚೆತ್ತುಕೊಂಡಿಲ್ಲ. ಹಂದಿಗಳಂತೂ ರಿಮ್ಸ್ ಆಸ್ಪತ್ರೆ ಆವರಣವನ್ನೇ ಆವಾಸಸ್ಥಾನ ಮಾಡಿಕೊಂಡಿವೆ. ಆಗಾಗ ಆಸ್ಪತ್ರೆ ವಾರ್ಡ್‍ಗಳಿಗೆ ವಿಸಿಟ್ ನೀಡುತ್ತವೆ.
ನಾಯಿ ಕೋತಿಗಳಂತು ನೇರವಾಗಿ ಆಸ್ಪತ್ರೆಗೆ ನುಗ್ಗಿ ರೋಗಿಗಳನ್ನ, ರೋಗಿಗಳ ಕಡೆಯವರನ್ನ ಹೆದರಿಸುತ್ತವೆ. ಇಲ್ಲಿ ನಾಯಿ ಕಚ್ಚಿದರೆ ಆರೋಗ್ಯವಾಗಿದ್ದವರೂ ಸಹ ಪುನಃ ಆಸ್ಪತ್ರೆಗೆ ದಾಖಲಾಗಬೇಕಾದ ಪರಸ್ಥಿತಿಯಿದೆ. ಚಿಕ್ಕಮಕ್ಕಳು, ನವಜಾತ ಶಿಶುಗಳ, ಬಾಣಂತಿಯರ ವಾರ್ಡ್‍ಗಳ ಬಳಿ ನಾಯಿ, ಕೋತಿಗಳು ಓಡಾಡುವುದರಿಂದ ಆತಂಕ ಹೆಚ್ಚಾಗಿದೆ. ಸಾರ್ವಜನಿಕರು ಎಷ್ಟೇ ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇದನ್ನೂ ಓದಿ: ಪತ್ನಿ ಕಿರುಕುಳಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ!
ಒಟ್ಟು 520 ಬೆಡ್‍ಗಳ ರಿಮ್ಸ್ ಆಸ್ಪತ್ರೆಗೆ ಪ್ರತಿನಿತ್ಯ ಜಿಲ್ಲೆ ಹೊರಜಿಲ್ಲೆ, ತೆಲಂಗಾಣ ಆಂಧ್ರಪ್ರದೇಶದ ಗಡಿಭಾಗದಿಂದ ಸಾವಿರಾರು ರೋಗಿಗಳು ಬರುತ್ತಾರೆ. ಆದರೆ ಈ ಆಸ್ಪತ್ರೆ ಸಮಸ್ಯೆಯೇ ಬೇರೆಯಾಗಿದೆ. ಇಲ್ಲಿನ ಆಡಳಿತ ಮಂಡಳಿ ಮಾತ್ರ ನಗರಸಭೆ, ಅರಣ್ಯ ಇಲಾಖೆಗೆ ಪತ್ರ ಬರೆದಿದ್ದೇವೆ, ಶಾಸಕರ ಗಮನಕ್ಕೂ ತಂದಿದ್ದೇವೆ ಅಂತಿದ್ದಾರೆ. ಆದ್ರೆ ಹಂದಿ, ನಾಯಿ, ಕೋತಿಗಳ ನಿಯಂತ್ರಣ ಮಾತ್ರ ಅಸಾಧ್ಯವಾಗಿದೆ.
ಈ ಆಸ್ಪತ್ರೆಯಲ್ಲಿನ ವಾಸ್ತವ ಚಿತ್ರೀಕರಣ ಮಾಡಲು ಮಾಧ್ಯಮದವರು ಇಲ್ಲಿನ ಅಧಿಕಾರಿಗಳ ಅನುಮತಿ ಪಡೆದು ಒಳಗೆ ಹೋಗಬೇಕು. ಆದರೆ ಹಂದಿ, ನಾಯಿ, ಕೋತಿಗಳ ಪ್ರವೇಶಕ್ಕೆ ಮಾತ್ರ ಯಾವ ಅನುಮತಿಯೂ ಇಲ್ಲಾ, ನಿಯಂತ್ರಣವೂ ಇಲ್ಲಾ. ಇದು ಇಲ್ಲಿನ ಅವ್ಯವಸ್ಥೆ ಹಿಡಿದ ಕನ್ನಡಿಯಾಗಿದೆ. ಈಗಲಾದ್ರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಿದೆ.