ಬೀದರ್: ಸ್ಮಶಾನ ಭೂಮಿ ಇಲ್ಲದೆ ರಾತ್ರೋರಾತ್ರಿ ಕದ್ದು ಮುಚ್ಚಿ ಸಂಸ್ಕಾರ ಮಾಡಿದ ದಲಿತ ಕುಟುಂಬಗಳಿಗೆ ಕೊನೆಗೂ ಸರ್ಕಾರ ಮುಕ್ತಿ ನೀಡಿದೆ. ನಿಮ್ಮ ಪಬ್ಲಿಕ್ ಟಿವಿಯ ವಿಸ್ತೃತ ವರದಿ ಬೆನ್ನಲ್ಲೇ ರಾಜ್ಯ ಸರ್ಕಾರ (State Government) ದಲಿತರಿಗಾಗಿ ಸ್ಮಶಾನ ಭೂಮಿ ಮಂಜೂರು ಮಾಡಿದೆ. ದಲಿತರ ದುಸ್ಥಿತಿ ಬಗ್ಗೆ ಸುದ್ದಿ ಮಾಡಿ ಸರ್ಕಾರದ ಕಣ್ಣು ತೆರೆಸಿದ ಪಬ್ಲಿಕ್ ಟಿವಿಗೆ ಧನ್ಯವಾದಗಳನ್ನು ತಿಳಿಸಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಈ ಸುದ್ದಿ ಪ್ರಸಾರ ಬೆನ್ನಲ್ಲೇ ರಾಜ್ಯ ಸರ್ಕಾರ ಭಾಲ್ಕಿ ತಾಲೂಕಿನ ಧನ್ನೂರ ಗ್ರಾಮದಲ್ಲಿ ಬಸವರಾಜ ತಂದೆ ವೈಜನಾಥ್ ಎಂಬವರ ಸರ್ವೆ ನಂಬರ್ 123/*/8ರಲ್ಲಿ 2 ಎಕರೆ ಪಟ್ಟಾ ಜಮೀನು ಖರೀದಿಸಿದೆ. 22 ಲಕ್ಷ 74 ಸಾವಿರದ 880 ರೂಪಾಯಿಗೆ ಜಮೀನು ಖರೀದಿ ಮಾಡಿ ಗ್ರಾಮದ 120ಕ್ಕೂ ಅಧಿಕ ದಲಿತ ಕುಟುಂಬಗಳಿಗೆ ಸ್ಮಶಾನ ಭೂಮಿ ನೀಡಿದೆ. ದಲಿತರ ದುಸ್ಥಿತಿ ಬಗ್ಗೆ ವಿಸ್ತೃತ ವರದಿ ಮಾಡಿದ ಪಬ್ಲಿಕ್ ಟಿವಿಗೆ ಧನ್ಯವಾದ ತಿಳಿಸಿದ್ದಾರೆ.
ಮೃತರಿಗೆ ಸ್ವಂತ ಜಮೀನಿಲ್ಲ, ಸ್ಮಶಾನ ಭೂಮಿಯೂ ಇಲ್ಲದ ಕಾರಣ ರಾತ್ರಿ ವೇಳೆ ಗ್ರಾಮದ ಹೊರ ವಲಯದಲ್ಲಿನ ಅರಣ್ಯ ಇಲಾಖೆಯ ಜಾಗದಲ್ಲಿ ಕದ್ದು, ಮುಚ್ಚಿ ಅಂತ್ಯಕ್ರಿಯೆ ಮಾಡಬೇಕಿತ್ತು. ಜೊತೆಗೆ ಕೆಲವರು ಗ್ರಾಮದ ತಮ್ಮ ಮನೆಯ ಅಂಗಳದಲ್ಲೆ ಅಂತ್ಯಸಂಸ್ಕಾರ ಮಾಡಿದ್ದು ದೃಶ್ಯಗಳ ಸಮೇತ ನಿಮ್ಮ ಪಬ್ಲಿಕ್ ಟಿವಿ (Public tv) ಸುದ್ದಿ ಮಾಡಿತ್ತು. ಇದಕ್ಕೆಲ್ಲ ಈಗ ಪರಿಹಾರ ಸಿಕ್ಕಿದೆ.
ಒಟ್ಟಿನಲ್ಲಿ ದಲಿತರು 3 ದಶಕಗಳಿಂದ ಅನುಭವಿಸುತ್ತಿದ್ದ ತೊಂದರೆ ಪಬ್ಲಿಕ್ ಟಿವಿ ವರದಿ ಬಳಿಕ ಪರಿಹಾರ ಸಿಕ್ಕಿದ್ದು ಸಂತೋಷದ ವಿಚಾರ.





