ಯಾದಗಿರಿ: ವಿಧಿಯಾಟಕ್ಕೆ ಅಂಗವೈಕಲ್ಯಕ್ಕೆ ತುತ್ತಾದರೂ ಬೇರೆಯವರ ಮೇಲೆ ಭಾರವಾಗಬಾರದೆಂದು ಸ್ವಾಭಿಮಾನಿಯಾಗಿರುವ ವ್ಯಕ್ತಿಯೊಬ್ಬರು ತ್ರಿಚಕ್ರ ವಾಹನಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಿದರೂ ಸ್ಕೂಟಿ ಭಾಗ್ಯ ಸಿಕ್ಕಿಲ್ಲ.
ಯಾದಗಿರಿ ಜಿಲ್ಲೆಯ ಮುಷ್ಟೂರು ಗ್ರಾಮದವರಾದ ಮೊಹಮ್ಮದ್ ಜಲಾಲ್ ಬಾಷಾ ಹುಟ್ಟುತ್ತಲೇ ಅಂಗವಿಕಲರಲ್ಲ. ಏಳು ವರ್ಷ ಹಿಂದೆ ರೈಲ್ವೇ ಹಳಿ ದಾಟುವಾಗ ಬಿದ್ದು ಎರಡು ಕಾಲುಗಳನ್ನು ಕಳೆದುಕೊಂಡ ಪರಿಣಾಮ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ. ಮೊಣಕಾಲು ಕಳೆದುಕೊಂಡಿದ್ದರೂ ಬೇರೆಯವರಿಗೆ ಹೊರೆಯಾಗದೇ ಇರಲು ತ್ರಿಚಕ್ರ ವಾಹನ ಪಡೆದು ವ್ಯಾಪಾರ ಮಾಡಲು ಕನಸನ್ನು ಕಟ್ಟಿಕೊಂಡಿದ್ದಾರೆ.
Advertisement
ಮೊಹಮ್ಮದ್ ಬಾಷಾ ಕಳೆದ ಎರಡು ವರ್ಷಗಳಿಂದ ತ್ರಿಚಕ್ರ ವಾಹನಕ್ಕಾಗಿ ಜಿಲ್ಲಾ ಅಂಗವಿಕಲ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದುವರೆಗೂ ವಾಹನ ನೀಡದೇ ಇದ್ದ ಕಾರಣ ದಿನಬೆಳಗಾದರೇ ಸರ್ಕಾರಿ ಕಚೇರಿಗೆ ಇವರು ಅಲೆಯುತ್ತಿದ್ದಾರೆ.
Advertisement
ಮೊಹಮ್ಮದ್ ಬಾಷಾ ಅವರಿಗೆ ಮದುವೆಯಾಗಿ ಮೂರು ವರ್ಷದಲ್ಲಿ ವಿಧಿಯಾಟಕ್ಕೆ ತನ್ನ ಎರಡು ಕಾಲು ಕಳೆದುಕೊಂಡಿದ್ದಾರೆ. ಸಂಸಾರದಲ್ಲಿ ಹೆಂಡತಿ ಮನೆ ಕೆಲಸವನ್ನು ಮಾಡಿ ಮಕ್ಕಳಿಗೆ ಎರಡು ಹೊತ್ತು ಗಂಜಿ ಹಾಕುವಂತಾಗಿದೆ. ಇಂತಹ ಸಂಕಷ್ಟದಲ್ಲಿ ಬದುಕುತ್ತಿರುವ ನನಗೆ ತ್ರಿಚಕ್ರ ವಾಹನವನ್ನು ನೀಡಿ ಡಬ್ಬಿ ಅಂಗಡಿಯ ವ್ಯಾಪಾರವನ್ನು ಶುರು ಮಾಡಲು ಅಧಿಕಾರಿಗಳು ಅನುಕೂಲ ಮಾಡಿಕೊಡಬೇಕೆಂದು ಬಾಷಾ ಮನವಿ ಮಾಡಿದ್ದಾರೆ.