– ಮಂಗಳೂರಿನ ವಿವೇಕ್ ಸಿಕ್ವೇರಾ ತಂಡದಿಂದ ಛಾಯಾಗ್ರಹಣ
– ಕಾಲೇಜ್ ಡ್ರಾಪ್‍ಔಟ್ ವಿದ್ಯಾರ್ಥಿಯ ಪ್ರತಿಭೆಗೆ ಸಿಕ್ತು ಅದೃಷ್ಟ
ಬೆಂಗಳೂರು: ದೇಶದ ನಂಬರ್ ಒನ್ ಶ್ರೀಮಂತ ಮುಕೇಶ್ ಅಂಬಾನಿ ಪುತ್ರಿ ಇಶಾ ಮತ್ತು ಉದ್ಯಮಿ ಆನಂದ್ ಪಿರಾಮನ್ ಮದುವೆ ಸಮಾರಂಭದ ಫೋಟೋಗಳನ್ನು ಮಂಗಳೂರಿನ ಫೋಟೋಗ್ರಾಫರ್ ಮತ್ತು ಅವರ ತಂಡ ಕ್ಲಿಕ್ಕಿಸಿದೆ.
ಹೌದು. ಮಂಗಳೂರಿನ ವಿವೇಕ್ ಸಿಕ್ವೇರಾ ಮತ್ತು ಅವರ ತಂಡ 15 ದಿನಗಳ ಕಾಲ ಅಂಬಾನಿ ಕುಟುಂಬದ ಸಮಾರಂಭದಲ್ಲಿ ಭಾಗಿಯಾಗಿ ಈ ವಿಶೇಷ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದೆ.
Advertisement
ಆಫರ್ ಸಿಕ್ಕಿದ್ದು ಹೇಗೆ?
ಜೂನ್ ತಿಂಗಳಿನಲ್ಲಿ ಅಂಬಾನಿ ಮತ್ತು ಪಿರಾಮಲ್ ಕುಟುಂಬಕ್ಕೆ ಆಪ್ತವಾಗಿರುವ ವ್ಯಕ್ತಿಯೊಬ್ಬರು ನನ್ನನ್ನು ಸಂಪರ್ಕಿಸಿದರು. ಈ ಸಮಯದಲ್ಲಿ ಡಿಸೆಂಬರ್ 1 ರಿಂದ 15 ರವರೆಗಿನ ಎಲ್ಲ ದಿನಗಳನ್ನು ನಮಗಾಗಿ ಕಾಯ್ದಿರಿಸಿ ಎಂದು ಹೇಳಿದರು. ಈ ಸಮಯದಲ್ಲಿ ನೀವು ತೆಗೆದಿರುವ ಕೆಲ ಫೋಟೋ ಸ್ಯಾಂಪಲ್ ಗಳನ್ನು ನಮಗೆ ಕಳುಹಿಸಿಕೊಡಿ ಎಂದು ಕೇಳಿದ್ದರು. ಮಾತುಕತೆಯ ಸಮಯದಲ್ಲಿ 15 ದಿನಗಳ ಕಾಲ ಯಾರ ಮದುವೆ ನಡೆಯಲಿದೆ ಎನ್ನುವ ಮಾಹಿತಿಯನ್ನು ಹೇಳಿರಲಿಲ್ಲ ಎಂದು ವಿವೇಕ್ ಅವರು ಆಫರ್ ಸಿಕ್ಕಿದ ವಿಚಾರ ತಿಳಿಸಿದ್ದಾರೆ.
Advertisement
Advertisement
2 ದಿನ ಬೇಕಾಯ್ತು:
ಅಕ್ಟೋಬರ್ ನಲ್ಲಿ ಅಂಬಾನಿ ಪುತ್ರಿಯ ಮದುವೆ ಸಮಾರಂಭ ಫೋಟೋ ತೆಗೆಯಲು ನನ್ನನ್ನು ಆಯ್ಕೆ ಮಾಡಿದ ವಿಚಾರ ಗೊತ್ತಾಯಿತು. ಈ ಸಮಯದಲ್ಲಿ ನನ್ನನ್ನೇ ಆಯ್ಕೆ ಮಾಡಿದ್ದು ಯಾಕೆ ಎಂದು ಕೇಳಿದಾಗ, ನನ್ನ ಫೋಟೋ ತೆಗೆಯುವ ಪ್ರತಿಭೆ ನೋಡಿ ಆಯ್ಕೆ ಮಾಡಲಾಯಿತು ಎಂದು ಹೇಳಿದಾಗ ಸಂತೋಷಕ್ಕೆ ಪಾರವೇ ಇರಲಿಲ್ಲ. ಈ ವಿಷಯವನ್ನು ಅರಗಿಸಿಕೊಳ್ಳಲು ಎರಡು ದಿನ ಬೇಕಾಯಿತು. ಮುಂಬೈಗೆ ಹೋಗಿ ಫೋಟೋ ರಹಸ್ಯ, ಸಂಭಾವನೆ ವಿಚಾರ ಕುರಿತು ಮಾತನಾಡಿ ಒಪ್ಪಂದ ಮಾಡಿಕೊಂಡು ಬಂದೆ. ಯಾವುದೇ ಕಾರಣಕ್ಕೂ ತೆಗೆದ ಫೋಟೋಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬಾರದು ಎಂದು ಷರತ್ತು ವಿಧಿಸಲಾಗಿತ್ತು.
Advertisement
ಮದುವೆಗಾಗಿಯೇ ನಾವು 2 ತಿಂಗಳು ಸಿದ್ಧತೆ ನಡೆಸಿದೆವು. ‘ಲುಕ್ಸ್ ಕ್ಯಾಪ್ಚರ್’ ನ 17 ಮಂದಿ ಸದಸ್ಯರು ಮುಂಬೈ ಮತ್ತು ಉದಯ್‍ಪುರ್ ಸಮಾರಂಭವನ್ನು ಕವರ್ ಮಾಡಿದ್ದೇವೆ. ನನ್ನ ಸ್ಟುಡಿಯೋ ಪಾಲುದಾರನಾಗಿರುವ ಶಂಕರ್ ಜೊತೆ ನಾಲ್ವರು ಮತ್ತು ನಾನು ಫೋಟೋ ತೆಗೆದಿದ್ದೇವೆ. ಉಳಿದ 7 ಮಂದಿ ವಿಡಿಯೋ, ಡ್ರೋನ್ ಮೂಲಕ ಸಮಾರಂಭವನ್ನು ಸೆರೆಹಿಡಿದಿದ್ದಾರೆ. ಉಳಿದವರು ನಮಗೆ ತಾಂತ್ರಿಕ ಸಹಾಯ ನೀಡಿದರು ಎಂದು ವಿವೇಕ್ ವೃತ್ತಿ ಅನುಭವವನ್ನು ಹಂಚಿಕೊಂಡರು.
ಝಡ್ ಪ್ಲಸ್ ಸೆಕ್ಯೂರಿಟಿಯಲ್ಲಿ ನಡೆದ ಈ ಮದುವೆಯಲ್ಲಿ ಶಂಕರ್ ಮತ್ತು ನನಗೆ ವಿಶೇಷ ಐಡಿ ಕಾರ್ಡ್ ನೀಡಲಾಗಿತ್ತು. ಹೀಗಾಗಿ ವಿಐಪಿ, ವಧು ವರರಿಗೆಂದೇ ಮೀಸಲಾಗಿದ್ದ ಸ್ಥಳದಲ್ಲಿ ನಮಗೆ ಓಡಾಟ ಮಾಡಲು ಅನುಮತಿ ಸಿಕ್ಕಿತ್ತು. 1.2 ಲಕ್ಷ ಫೋಟೋ, ವಿಡಿಯೋ ಸೇರಿ ಒಟ್ಟು 30 ಟಿಬಿ ಡೇಟಾ ಆಗಿದ್ದು, ಒಂದು ತಿಂಗಳ ಡೆಡ್‍ಲೈನ್ ಒಳಗಡೆ ಫೋಟೋಗಳನ್ನು ನೀಡಬೇಕಿದೆ. ಈಗ ಈ ಕಾರ್ಯದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದೇವೆ ಎಂದು ವಿವೇಕ್ ಹೇಳಿದರು.
ಒಟ್ಟು ಎಷ್ಟು ರೂ. ಬಿಲ್ ಆಗಬಹುದು ಎಂದು ಪ್ರಶ್ನೆ ಕೇಳಿದ್ದಕ್ಕೆ ವಿವೇಕ್ ಅವರು, ಬಿಲ್ ಬಗ್ಗೆ ನಾವು ತಲೆ ಕೆಡಿಸಿಕೊಂಡಿಲ್ಲ. ದೇಶದ ಅತಿ ದೊಡ್ಡ ಮದುವೆ, ವಿವಿಐಪಿಯವರು ಭಾಗವಹಿಸಿದ್ದ ಸಮಾರಂಭದಲ್ಲಿ ಫೋಟೋ ತೆಗೆಯಲು ಅವಕಾಶ ಸಿಕ್ಕಿದ್ದೆ ದೊಡ್ಡದು. ಈ ಸಮಾರಂಭವನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಡ್ರಾಪ್‍ಔಟ್ ವಿದ್ಯಾರ್ಥಿ:
ವಿಶೇಷ ಏನೆಂದರೆ ವಿವೇಕ್ ಅವರು ಕಾಲೇಜ್ ಡ್ರಾಪ್‍ಔಟ್ ವಿದ್ಯಾರ್ಥಿ. ಆರ್ಥಿಕ ಮುಗ್ಗಟ್ಟಿನಿಂದ ಅರ್ಧಕ್ಕೆ ಶಿಕ್ಷಣವನ್ನು ಮೊಟಕುಗೊಳಿಸಿದ್ದ ಅವರು ನಂತರ ಪೆಟ್ರೋಲ್ ಬಂಕ್ ಒಂದರಲ್ಲಿ ಅಟೆಂಡೆಂಟ್ ಆಗಿ ಕೆಲಸ ಮಾಡಿದ್ದರು. ಸಮಯದಲ್ಲಿ ಸ್ನೇಹಿತರಿಂದ ಫೋಟೋಗ್ರಾಫಿ ಕಲಿತು ಭದ್ರತಾ ಠೇವಣಿಯಾಗಿ ಇಟ್ಟಿದ್ದ 7 ಸಾವಿರ ರೂ. ಹಣವನ್ನು ಡ್ರಾ ಮಾಡಿ 7 ಸಾವಿರ ರೂ. ಮೌಲ್ಯದ ಕ್ಯಾಮೆರಾವನ್ನು ಖರೀದಿಸಿದ್ದರು. ಠೇವಣಿಯನ್ನು ಡ್ರಾ ಮಾಡಿದ ಬಳಿಕ ಕೆಲಸ ಹೋಯ್ತು. ರಿಸ್ಕ್ ಕೆಲಸ ಆದರೂ ವಿವೇಕ್ ಅವರು ಫೋಟೋಗ್ರಫಿಯಲ್ಲೇ ಮುಂದುವರಿದರು.
2010, 2011, 2012, 2014ರಲ್ಲಿ ಬೆಟರ್ ಫೋಟೋಗ್ರಾಫಿ ಸಂಸ್ಥೆ ನೀಡುವ `ಅತ್ಯುತ್ತಮ ಮದುವೆ ಫೋಟೋಗ್ರಾಫರ್’ ಪ್ರಶಸ್ತಿಗೆ ವಿವೇಕ್ ಅವರಿಗೆ ಲಭಿಸಿದೆ. ಈ ಮಾಹಿತಿಯನ್ನು ಕಲೆ ಹಾಕಿದ್ದ ಅಂಬಾನಿ ಕುಟುಂಬ ವಿವೇಕ್ ಸಿಕ್ವೇರಾ ಅವರನ್ನು ಸಂಪರ್ಕಿಸಿ ಆಫರ್ ನೀಡಿತ್ತು.
ವಿವೇಕ್ ಜೊತೆ ಭಾರತದ ಇನ್ನೊಂದು ಫೋಟೋಗ್ರಾಫರ್ ತಂಡ ಅಷ್ಟೇ ಅಲ್ಲದೇ ಬ್ರಿಟನ್, ಇಟಲಿ ಇತರೇ ದೇಶಗಳ ಪ್ರಸಿದ್ಧ ಫೋಟೋಗ್ರಾಫರ್ ಗಳು ಅಂಬಾನಿ ಪುತ್ರಿಯ ವೈಭವದ ಮದುವೆಯನ್ನು ಕವರ್ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv