ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣದ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಅದೇ ಜೈಲಿನಲ್ಲಿ ಕೊಲೆ ಆರೋಪಿಗಳು ಬಿಂದಾಸ್ ಆಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಪ್ರವಾಸ ಸ್ಥಳಗಳಿಗೆ ಹೋದಾಗ ಹೇಗೆ ಗ್ರೂಪ್ ಫೋಟೋ ಕ್ಲಿಕ್ ಮಾಡಲಾಗುತ್ತದೋ ಅದೇ ರೀತಿಯಾಗಿ ಶಾಟ್ಸ್, ಡಿಸೈನ್ ಡಿಸೈನ್ ಚಪ್ಪಲಿ ಹಾಕಿಕೊಂಡು ಆರೋಪಿಗಳು ಸೆಲ್‌ನಲ್ಲಿ ಪೋಸ್ ನೀಡಿದ್ದಾರೆ.
ಸಿದ್ದಪುರ ಮಹೇಶ್ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿರುವ ವಿಲ್ಸನ್ ಗಾರ್ಡನ್ ನಾಗ ಅಂಡ್ ತಂಡದ ಸದಸ್ಯರ ಫೋಟೋ ಬೆಳಕಿಗೆ ಬರುತ್ತಿದ್ದಂತೆ ಪರಪ್ಪನ ಅಗ್ರಹಾರ ಜೈಲಿನ ಭ್ರಷ್ಟ ವ್ಯವಸ್ಥೆ ಕರಾಳ ಮುಖ ಮತ್ತೊಮ್ಮೆ ಅನಾವರಣಗೊಂಡಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಸಿದ್ದಪುರ ಮಹೇಶ್‌ನನ್ನ ನಾಗ ತಂಡ ಕೊಚ್ಚಿ ಕೊಲೆ ಮಾಡಿತ್ತು. ಪರಪ್ಪನ ಅಗ್ರಹಾರ ಜೈಲಿನಿಂದ ಹೊರಗಡೆ ಬಂದ ಕೇವಲ ಇನ್ನೂರು ಮೀಟರ್ ಅಂತರದಲ್ಲೇ ಸಿದ್ದಪುರ ಮಹೇಶನನ್ನು ಆರೋಪಿಗಳು ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಬರೋಬ್ಬರಿ ಇಪ್ಪತ್ತು ಜನರನ್ನು ಬಂಧನ ಮಾಡಲಾಗಿದೆ.
ತಮ್ಮ ವಿರೋಧಿ ತಂಡಕ್ಕೆ ಟಾಂಗ್ ನೀಡಲು ಜೈಲಿನ ಒಳಗಡೆ ನಾಗನ ತಂಡ ಫೋಟೋ ಶೂಟ್ ಮಾಡಿಸಿದೆ ಎನ್ನಲಾಗುತ್ತಿದೆ.