ಬೆಂಗಳೂರು: ಫೋನ್ ಕದ್ದಾಲಿಕೆ ಮಾಡುವುದು ತಪ್ಪಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೊಸ ವಿಚಾರ ಪ್ರಸ್ತಾಪ ಮಾಡಿದ್ದಾರೆ.
ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐಗೆ ತನಿಖೆ ಒಪ್ಪಿಸಿದ ಬಳಿಕ ಮೊದಲ ಬಾರಿಗೆ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಸುಪ್ರೀಂಕೋರ್ಟ್ ಹಿಂದೆ ಕೆಲವೊಂದು ಕೇಸ್ ನಲ್ಲಿ ಪಕ್ಷಾಂತರ ವಿಚಾರದಲ್ಲಿ ಫೋನ್ ಕದ್ದಾಲಿಕೆ ಮಾಡೋದು ತಪ್ಪಲ್ಲ ಎಂದು ಹೇಳಿದೆ ಎಂದು ತಿಳಿಸಿದ್ದಾರೆ. ಆದರೆ, ಯಾವ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿದೆ ಎನ್ನುವುದನ್ನು ತಿಳಿಸಿದೆ ದೇವೇಗೌಡರು ಜಾರಿಕೊಂಡರು.
Advertisement
Advertisement
ಈ ಮೂಲಕ ತಮ್ಮ ಮಗನ ಪರವಾಗಿ ದೇವೇಗೌಡರು ಧ್ವನಿ ಎತ್ತಿದ್ದಾರೆ. ಇದೇ ವಿಚಾರಕ್ಕೆ ನಿನ್ನೆ ಪ್ರತಿಕ್ರಿಯೆ ನೀಡದೆ ಮಾಧ್ಯಮಗಳ ಮೇಲೆ ದೇವೇಗೌಡರು ಕಿಡಿಕಾರಿದ್ದರು. ಸಿಬಿಐ ತನಿಖೆ ವಿಚಾರವನ್ನು ದೊಡ್ಡದು ಮಾಡೋದು ಬಿಟ್ಟು, ನೆರೆ ಪ್ರದೇಶಗಳ ವಿಚಾರವನ್ನು ಹೆಚ್ಚು ತೋರಿಸಿ. ಮಾಧ್ಯಮಗಳೇ ಈ ಫೋನ್ ಕದ್ದಾಲಿಕೆ ವಿಚಾರವನ್ನು ದೊಡ್ಡದು ಮಾಡುತ್ತಿವೆ ಎಂದು ಮತ್ತೆ ಮಾಧ್ಯಮಗಳ ವಿರುದ್ಧ ಹರಿಹಾಯ್ದರು.
Advertisement
ರಾಮಕೃಷ್ಣ ಹೆಗಡೆ ಪ್ರಕರಣ ಬಿಟ್ಟು ಈ ದೇಶದಲ್ಲಿ ಇನ್ಯಾವುದೇ ಪ್ರಕರಣ ಆಗಿಲ್ಲ. ಆದರೀಗ ಇಬ್ಬರು ಅಧಿಕಾರಿಗಳ ಬೀದಿ ಜಗಳದಿಂದ ಈ ವಿಚಾರವನ್ನು ಮಾಧ್ಯಮಗಳು ದೊಡ್ಡದಾಗಿ ಬಿಂಬಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
ತನಿಖೆ ಬೇಡವಾ ಸರ್ ಅಂತ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಆಕ್ರೋಶಗೊಂಡ ದೇವೇಗೌಡರು, ನಿಮಗೆ ಇಷ್ಟ ಬಂದ ಹಾಗೇ ಸುದ್ದಿ ಹಾಕಿಕೊಳ್ಳಿ ಎಂದು ಕಿಡಿಕಾರಿದರು. ಅಲ್ಲದೆ, ಫೋನ್ ಟ್ಯಾಪ್ ತನಿಖೆ ಮಾಡಿ ಕಾಲಹರಣ ಮಾಡಬೇಡಿ. ನೆರೆ ಪ್ರದೇಶಗಳ ಅಭಿವೃದ್ಧಿಗೆ ಕೆಲಸ ಮಾಡಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ತನಿಖೆಯೇ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ನಾಯಕರು ಹೇಳಿಲ್ಲ:
ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕೇಂದ್ರದ ನಾಯಕರು ಹೇಳಿಲ್ಲ. ಅವರಿಗೆ ಕಾಶ್ಮೀರದಂತಹ ಸಮಸ್ಯೆಗಳೇ ಇವೆ. ಇವನ್ನೆಲ್ಲ ಹೇಳುವುದಕ್ಕೆ ಸಮಯವಿರುವುದಿಲ್ಲ. ಯಡಿಯೂರಪ್ಪ ಅವರು ರಾಜಕೀಯ ಒತ್ತಡದಿಂದ ಸಿಬಿಐ ತನಿಖೆಗೆ ಮುಂದಾಗಿರಬಹುದು. ಆದರೆ, ಮೋದಿ-ಅಮಿತ್ ಶಾ ಸಿಬಿಐಗೆ ಕೊಡಿ ಅಂತ ಹೇಳಿಲ್ಲ ಎಂದು ಹೇಳುವ ಮೂಲಕ ಸಿಎಂ ಯಡಿಯೂರಪ್ಪ ಮೇಲೆ ಬೊಟ್ಟು ಮಾಡಿ ತೋರಿಸಿದರು. ಇದರೊಂದಿಗೆ ಯಡಿಯೂರಪ್ಪ ಅವರ ಆಪರೇಷನ್ ಕಮಲದ ತನಿಖೆಯೂ ಆಗಲಿ ಎಂದು ದೇವೇಗೌಡರು ಪರೋಕ್ಷವಾಗಿ ಹೇಳಿದರು.