ಬೆಂಗಳೂರು: ಫೋನ್ ಕದ್ದಾಲಿಕೆ ಪ್ರಕರಣದ ಕುರಿತು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಇದೀಗ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದು, ಡಿಕೆಶಿ ಮನೆಯಲ್ಲೇ ಫೋನ್ ಟ್ಯಾಪಿಂಗ್ ಮಷಿನ್ ಇದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮನೆಯಲ್ಲೇ ಫೋನ್ ಟ್ಯಾಪಿಂಗ್ ಮಷಿನ್ ಇದೆ, ಕೋಟಿ ಕೋಟಿ ರೂ. ಹಣ ಕೊಟ್ಟು ಇಂತಹದ್ದೊಂದು ಯಂತ್ರವನ್ನು ಡಿಕೆಶಿ ತಂದಿದ್ದಾರೆ. ಎರಡು ವರ್ಷಗಳ ಹಿಂದೆಯೇ ಅವರು ನನ್ನ ಫೋನ್ ಕದ್ದಾಲಿಕೆ ಮಾಡಿದ್ದರು ಎಂದು ಆರೋಪಿಸಿದ್ದಾರೆ.
Advertisement
Advertisement
ನನ್ನ ಫೋನು ಎರಡು ವರ್ಷಗಳಿಂದ ಕದ್ದಾಲಿಕೆಯಾಗುತ್ತಿದೆ. ಈ ಕುರಿತು ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಮೌಖಿಕವಾಗಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನನ್ನನ್ನು ಟಾರ್ಗೆಟ್ ಮಾಡಿಕೊಂಡು ಫೋನ್ ಕದ್ದಾಲಿಕೆ ಮಾಡಿದ್ದರು. ಇದು ನನಗೂ ಸಹ ತಿಳಿದಿತ್ತು, ಅಲ್ಲದೆ, ಈಗಿನ ತಂತ್ರಜ್ಞಾನ ಯುಗದಲ್ಲಿ ನಮ್ಮ ಫೋನ್ ಕದ್ದಾಲಿಕೆ ಮಾಡುತ್ತಿರುವ ಕುರಿತು ನಾವೇ ಪರಿಶೀಲಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
Advertisement
ಇದೀಗ ಸಿಬಿಐ ತನಿಖೆ ನಡೆಸಲಾಗುತ್ತಿದೆ, ನಮ್ಮನ್ನು ವಿಚಾರಣೆಗೆ ಕರೆದರೆ ನಾವೂ ಸಹ ಈ ಕುರಿತು ತಿಳಿಸುತ್ತೇವೆ. ಫೋನ್ ಕದ್ದಾಲಿಕೆ ಮಾಡುವುದು ನಮ್ಮ ಮೂಲಭೂತ ಹಕ್ಕನ್ನು ಕಿತ್ತುಕೊಂಡಂತೆ. ಅಲ್ಲದೆ, ಡಿ.ಕೆ.ಶಿವಕುಮಾರ್ ಅವರು ಇಂತಹದ್ದೊಂದು ಡಿವೈಸ್‍ನ್ನು ಇಟ್ಟುಕೊಂಡಿದ್ದಾರೆ. ಅದರ ಮೂಲಕ ಕದ್ದಾಲಿಕೆ ಮಾಡುತ್ತಾರೆ ಎಂಬ ಆರೋಪವೂ ಇದೆ. ಈ ಕುರಿತು ಸಹ ತನಿಖೆಯಾಗಬೇಕು ಎಂದು ತಿಳಿಸಿದ್ದಾರೆ.
Advertisement
ಕೋಟ್ಯಂತರ ರೂ. ನೀಡಿ ಅಂತಹದ್ದೊಂದು ಡಿವೈಸ್ ತಂದು ಇಟ್ಟುಕೊಂಡಿದ್ದಾರೆ. ಅದರ ಮೂಲಕ ಅವರು ಯಾರ ಫೋನು ಬೇಕಾದರೂ ಕದ್ದಾಲಿಸುತ್ತಾರೆ ಎಂಬ ಮಾಹಿತಿ ಇದೆ. ಹೀಗಾಗಿ ಈ ಕುರಿತು ಪೊಲೀಸ್ ಆಯುಕ್ತರಿಗೆ ದೂರು ನೀಡಿ, ಸೂಕ್ತ ತನಿಖೆಗೆ ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ.