ದಾವಣಗೆರೆ: ಮೈತ್ರಿ ಸರ್ಕಾರದ ಆಡಳಿತಾವಧಿಯಲ್ಲಿ ನನ್ನ ಫೋನ್ ಕರೆಗಳನ್ನು ಕದ್ದಾಲಿಕೆ ಮಾಡಿದ್ದರು ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಪ್ರವಾಹ ಸಮಯದಲ್ಲಿ ಸಂತ್ರಸ್ತರ ನೆರವಿಗೆ ಧವಿಸಿದ್ದ ರೇಣುಕಾಚಾರ್ಯ ಅವರು, ಸಣ್ಣ ಪ್ರಮಾಣದ ನೀರಿನಲ್ಲಿ ಹುಟ್ಟು ಹಾಕಿ ಟ್ರೋಲಾಗಿದ್ದರು. ಈ ಸುದ್ದಿ ಬಿತ್ತರಿಸಿದ ಮಾಧ್ಯಮದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಮೈತ್ರಿ ಸರ್ಕಾರದ ಆಡಳಿತಾವಧಿಯಲ್ಲಿ ನನ್ನ ಫೋನ್ ಕರೆಗಳನ್ನು ಕದ್ದಾಲಿಕೆ ಮಾಡಲಾಗಿತ್ತು ಎಂದು ಬಾಂಬ್ ಸಿಡಿಸಿದ್ದಾರೆ.
Advertisement
Advertisement
ಈ ಕುರಿತು ಜಿಲ್ಲೆಯ ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಹೇಗಾದರು ಮಾಡಿ ಅಧಿಕಾರ ಉಳಿಸಿಕೊಳ್ಳಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರದ್ದು ಸೇರಿದಂತೆ ನನ್ನ ಹಾಗೂ ಹಲವು ನಾಯಕರ ಫೋನ್ ಕದ್ದಾಲಿಕೆ ಮಾಡಿದ್ದರು ಎಂದು ಜೆಡಿಎಸ್‍ನ ಕೆಲವು ನಾಯಕರು ನನಗೆ ತಿಳಿಸಿದ್ದಾರೆ ಎಂದರು.
Advertisement
ಫೋನ್ ಕರೆಗಳನ್ನು ಕದ್ದಾಲಿಕೆ ಮಾಡಿರುವುದನ್ನು ಖಂಡಿಸುತ್ತೇವೆ. ನಾವು ಆಪರೇಷನ್ ಕಮಲ ಮಾಡಿಲ್ಲ, ಬಿಜೆಪಿಯ ಮುಂಚೂಣಿಯಲ್ಲಿ ಹೋರಾಟ ಮಾಡುತ್ತಿದ್ದವರ ಹಾಗೂ ಬಿಜೆಪಿಯ ಪ್ರಮುಖ ಮುಖಂಡರ ಫೋನ್ ಕರೆಗಳನ್ನು ಕದ್ದಾಲಿಕೆ ಮಾಡಲಾಗಿದೆ. ಈ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ನೆರೆ ಸಂತ್ರಸ್ತರ ವಿಷಯದಲ್ಲಿ ರಾಜಕೀಯ ಮಾಡಬಾರದು. ಈ ಹಿಂದೆಯೂ ಸಹ ಬರ ಎದುರಾದಾಗ ಸಿದ್ದರಾಮಯ್ಯನವರು ಹಾಗೂ ಕುಮಾರಸ್ವಾಮಿಯವರು ರಾಜ್ಯದ ಪ್ರವಾಸ ಮಾಡಿರಲಿಲ್ಲ. ಆದರೆ, ಬಿಎಸ್‍ವೈ ಒಬ್ಬರೇ ಈಡೀ ರಾಜ್ಯವನ್ನು ಸುತ್ತಿ ಬರ ಅಧ್ಯಾಯನ ನಡೆಸಿದ್ದರು ಎಂದು ತಿಳಿಸಿದರು.
Advertisement
ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಸಚಿವ ಸ್ಥಾನ ನೀಡಿದರೆ ನಿಭಾಯಿಸುತ್ತೇನೆ. ಮಂತ್ರಿ ಸ್ಥಾನ ನೀಡುವುದು, ಬಿಡುವುದು ಹೈ ಕಮಾಂಡ್ ಹಾಗೂ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದು ಸಚಿವ ಸ್ಥಾನದ ಮೇಲಿನ ಆಸೆಯನ್ನು ಪರೋಕ್ಷವಾಗಿ ಹೊರ ಹಾಕಿದರು.