ಬೀಜಿಂಗ್: ವ್ಯಕ್ತಿಯೊಬ್ಬರು ಮೊಬೈಲ್ ಅಂಗಡಿಯಲ್ಲಿ ತನ್ನ ಫೋನ್ ಬ್ಯಾಟರಿ ಬದಲಾಯಿಸುವ ವೇಳೆ ಬ್ಯಾಟರಿ ಸ್ಫೋಟಗೊಂಡ ಘಟನೆ ಚೀನಾದಲ್ಲಿ ನಡೆದಿದೆ.
ವರದಿಗಳ ಪ್ರಕಾರ ವ್ಯಕ್ತಿ ಆನ್‍ಲೈನ್ ನಲ್ಲಿ ಹೊಸ ಬ್ಯಾಟರಿ ಖರೀದಿಸಿದ್ದರು. ತನ್ನ ಫೋನ್‍ನಲ್ಲಿದ್ದ ಹಳೇ ಬ್ಯಾಟರಿ ತೆಗೆದು ಹೊಸ ಬ್ಯಾಟರಿ ಅಳವಡಿಸಲು ಹತ್ತಿರದ ಮೊಬೈಲ್ ಅಂಗಡಿಗೆ ಹೋಗಿದ್ದರು. ಅಂಗಡಿಯವರಿಂದ ಟ್ವೀಜರ್ ಪಡೆದು ಹಳೇ ಬ್ಯಾಟರಿಯನ್ನ ತೆಗೆಯಲು ಪ್ರಯತ್ನಿಸಿದ್ರು. ಈ ವೇಳೆ ಬ್ಯಾಟರಿ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ.
ವ್ಯಕ್ತಿಯ ಮುಖದ ಸಮೀಪವೇ ಬ್ಯಾಟರಿ ಸ್ಫೋಟಗೊಂಡಿದ್ದು, ಬೆಂಕಿ ಬಂದ ತಕ್ಷಣ ಅಲ್ಲಿಂದ ಎದ್ದು ಓಡಿಹೋಗಿದ್ದಾರೆ. ಈ ಎಲ್ಲಾ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಡಿಮೆ ಬೆಲೆಗೆ ಸಿಕ್ತು ಅಂತ ಆನ್‍ಲೈನ್ ನಿಂದ ಬ್ಯಾಟರಿ ಖರೀದಿಸಿದ್ದಾಗಿ ಆ ವ್ಯಕ್ತಿ ಹೇಳಿದ್ರು. ತಾನೇ ಬ್ಯಾಟರಿ ಬದಲಾಯಿಸಲು ಟ್ವೀಜರ್ ಕೇಳಿದ್ರು. ಬ್ಯಾಟರಿ ಸ್ಫೋಟಗೊಂಡಾಗ ಗ್ರಾಹಕರು ಅಂಗಡಿಯಿಂದ ಹೊರಗೆ ಓಡಿಹೋದ್ರು ಎಂದು ಮೊಬೈಲ್ ಅಂಗಡಿಯ ಮಾಲೀಕ ಹೇಳಿದ್ದಾರೆ. ಆ ವ್ಯಕ್ತಿ ಆಕಸ್ಮಿಕವಾಗಿ ಬ್ಯಾಟರಿಗೆ ತೂತು ಮಾಡಿದ್ದರಿಂದ ಅದು ಸ್ಫೋಟಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಘಟನೆಯಿಂದ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ವರದಿಯಾಗಿದೆ.
https://www.youtube.com/watch?v=L1_w9PWCgNQ