ಸಹಜ ಸ್ಥಿತಿಯತ್ತ ಕಾಶ್ಮೀರ – ಫೋನ್, ಇಂಟರ್‌ನೆಟ್ ಸೇವೆ ಆರಂಭ

Public TV
1 Min Read

ಶ್ರೀನಗರ: ಕೇಂದ್ರ ಸರ್ಕಾರ 370ನೇ ವಿಧಿ ರದ್ದುಗೊಳಿಸಿದ ಬಳಿಕ ಕಾಶ್ಮೀರದಲ್ಲಿ ಅಹಿತಕರ ಘಟನೆಗಳು ನಡೆಯಬಾರದೆಂದು ಮುನ್ನೆಚ್ಚರಿಕಾ ಕ್ರಮವಾಗಿ ಫೋನ್ ಹಾಗೂ ಇಂಟರ್‍ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಜನಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಈ ಸೇವೆ ಮತ್ತೆ ಆರಂಭವಾಗಿದೆ.

ಇಂದು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಹಿನ್ನೆಲೆಯಲ್ಲಿ ಶುಕ್ರವಾರದ ಪ್ರಾರ್ಥನೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಏನಾದರೂ ಹಿಂಸಾಚಾರ ನಡೆಯಬಹುದೆಂದು ಭದ್ರತಾ ಸಿಬ್ಬಂದಿ ಕಣಿವೆ ರಾಜ್ಯದ ಎಲ್ಲಾ ಕಡೆಗಳಲ್ಲು ಭದ್ರತೆ ಒದಗಿಸುತ್ತಿದ್ದಾರೆ.

ಶ್ರೀನಗರದಲ್ಲಿರುವ ಮುಖ್ಯ ಜಾಮಾ ಮಸೀದಿಯ ಬಾಗಿಲನ್ನು ಮುಚ್ಚಲಾಗಿದೆ. ಆದರೆ ನಗರದ ಕೆಲ ಸಣ್ಣ ಮಸೀದಿಯಲ್ಲಿ ಮಸ್ಲಿಮರು ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಹಾಗೆಯೇ ಶಾಂತಿಯುತವಾಗಿ ಪ್ರಾರ್ಥನೆ ಸಲ್ಲಿಸಿ, ಯಾವುದೇ ಗಲಾಟೆಗಳು ನಡೆಯದಂತೆ ಜನರು ನೋಡಿಕೊಂಡರೆ ಮಸೀದಿ ಬಾಗಿಲನ್ನು ಮತ್ತೆ ತೆರೆಯಲು ಅವಕಾಶ ನೀಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ ಸೇರಿದಂತೆ ಸುಮಾರು 400 ರಾಜಕೀಯ ನಾಯಕರು ಗೃಹ ಬಂಧನದಲ್ಲೇ ಇದ್ದಾರೆ.

ಗುರುವಾರದಂದು ರಾಜ್ಯಪಾಲರಾದ ಸತ್ಯಪಾಲ್ ಮಲಿಕ್ ಅವರು ಪ್ರತಿಕ್ರಿಯಿಸಿ, ನಗರದಲ್ಲಿ ಶಾಂತಿಯನ್ನು ಜನರು ಹೀಗೆ ಕಾಯ್ದುಕೊಂಡು ಬಂದರೆ ಶುಕ್ರವಾರದ ಪ್ರಾರ್ಥನೆ ಹಾಗೂ ಈದ್ ಹಬ್ಬಕ್ಕೆ ಹೇರಿರುವ ನಿರ್ಬಂಧವನ್ನು ಸಡಿಲಿಸಲಾಗುವುದು ಎಂದು ಹೇಳಿದ್ದಾರೆ.

ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರದ ಬಗ್ಗೆ ಮಾತನಾಡುವಾಗ, ಸೋಮವಾರ ನಡೆಯುವ ಈದ್ ಹಬ್ಬದ ಸಂಭ್ರಮಕ್ಕೆ ಸರ್ಕಾರ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುತ್ತದೆ ಎಂದು ಭರವಸೆ ನೀಡಿದ್ದಾರೆ. ಹಾಗೆಯೇ 370ನೇ ವಿಧಿಯಿಂದ ಸ್ವಾತಂತ್ರ್ಯ ಸಿಕ್ಕಿರುವುದು ವಾಸ್ತವ್ಯ. ಆದರೆ ಈ ಹಿನ್ನೆಲೆ ತೆಗೆದುಕೊಂಡಿರುವ ಮುನ್ನೆಚ್ಚರಿಕಾ ಕ್ರಮಗಳಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದ್ದರು.

ಕಾಶ್ಮೀರ ಕಣಿವೆಯಲ್ಲಿ ಕಫ್ರ್ಯೂ ಹಾಕಿದ್ದರೂ ಈದ್ ಹಬ್ಬದ ಹಿನ್ನೆಲೆ ರಾಜ್ಯದಿಂದ ಹೊರಗಿರುವ ಕಾಶ್ಮೀರಿ ನಿವಾಸಿಗಳು ಕುಟುಂಬಸ್ಥರ ಜೊತೆ ಹಬ್ಬ ಆಚರಿಸಲು ವಿಮಾನಗಳ ಮೂಲಕ ಶ್ರೀನಗರಕ್ಕೆ ಬರುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *