ಜೈಪುರ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಸ್ಫೋಟಕ ಫಿಫ್ಟಿ ಆಟಕ್ಕೆ ರಾಜಸ್ಥಾನ್ ರಾಯಲ್ಸ್ (Rajasthan Royals) ತವರಲ್ಲೇ ತಲೆಬಾಗಿತು. ಕಳೆದ ಪಂದ್ಯದಲ್ಲಿ ತವರಲ್ಲೇ ಸೋಲಿನ ಕಹಿ ಅನುಭವಿಸಿದ್ದ ಬೆಂಗಳೂರು (Royal Challengers Bengaluru) ಮತ್ತೆ ಗೆಲುವಿನ ಹಾದಿಗೆ ಮರಳಿದೆ.
ಜೈಪುರ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ 20 ಓವರ್‌ಗೆ 4 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ಆರ್‌ಸಿಬಿ 17.3 ಓವರ್‌ನಲ್ಲೇ ಕೇವಲ 1 ವಿಕೆಟ್ ಕಳೆದುಕೊಂಡು ಗುರಿ ತಲುಪುವಲ್ಲಿ ಯಶಸ್ವಿಯಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಆರ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರುವಲ್ಲಿ ವಿಫಲವಾಯಿತು. ಯಶಸ್ವಿ ಜೈಸ್ವಾಲ್ ಅರ್ಧಶತಕ (75 ರನ್, 47 ಬಾಲ್, 10 ಫೋರ್, 2 ಸಿಕ್ಸರ್) ಗಳಿಸಿದರು. ಉಳಿದಂತೆ ರಿಯಾನ್ ಪರಾಗ್ 30, ಧ್ರುವ್ ಜುರೇಲ್ 35, ಸಂಜು ಸ್ಯಾಮ್ಸನ್ 15 ರನ್ ಗಳಿಸಿದರು. ಉಳಿದ ಬ್ಯಾಟರ್‌ಗಳು ಪಿಚ್‌ನಲ್ಲಿ ಮ್ಯಾಜಿಕ್ ಮಾಡುವಲ್ಲಿ ವಿಫಲರಾದರು. ಈ ಪಂದ್ಯದಲ್ಲೂ ಆರ್‌ಆರ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು.
ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹ್ಯಾಜಲ್‌ವುಡ್, ಕೃಣಾಲ್ ಪಾಂಡ್ಯ ತಲಾ 1 ವಿಕೆಟ್ ಪಡೆದರು.
ಆರ್‌ಆರ್ ನೀಡಿದ 174 ರನ್ ಗುರಿ ಬೆನ್ನತ್ತಿದ ಆರ್‌ಸಿಬಿ ಸುಲಭ ಗೆಲುವು ದಾಖಲಿಸಿತು. ಫಾರ್ಮ್‌ನಲ್ಲಿರುವ ಸಾಲ್ಟ್ ಮತ್ತು ಕೊಹ್ಲಿ ಜೋಡಿ ಉತ್ತಮ ಆರಂಭ ನೀಡಿತು. ಇಬ್ಬರ ಜೊತೆಯಾಟ (52 ಬಾಲ್‌ಗೆ 92 ರನ್) ತಂಡದ ಗೆಲುವಿಗೆ ಭದ್ರ ಬುನಾದಿ ಹಾಕಿತು. ಸಾಲ್ಟ್ ಎಂದಿನಂತೆ ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ 33 ಬಾಲ್‌ಗೆ 6 ಸಿಕ್ಸರ್, 5 ಫೋರ್‌ನೊಂದಿಗೆ 65 ರನ್ ಗಳಿಸಿದರು.
ಕೊಹ್ಲಿ 45 ಬಾಲ್‌ಗೆ 4 ಫೋರ್, 2 ಸಿಕ್ಸರ್‌ನೊಂದಿಗೆ 62 ರನ್ ಗಳಿಸಿದರು. ಸಾಲ್ಟ್ ಕ್ಯಾಚ್ ನೀಡಿ ಔಟಾದಾಗ, ಕೊಹ್ಲಿಗೆ ದೇವದತ್ ಪಡಿಕ್ಕಲ್ ಜೊತೆಯಾದರು. ಈ ಜೋಡಿ ಕೂಡ 54 ಬಾಲ್‌ಗೆ 83 ರನ್ ಜೊತೆಯಾಟದ ಮೂಲಕ ತಂಡವನ್ನು ಗೆಲುವಿನ ದಡ ಸೇರಿದರು. ಪಡಿಕ್ಕಲ್ 40 ರನ್ ಗಳಿಸಿದರು.